ADVERTISEMENT

ಪರಂಪರೆಯ ಮೌಲ್ಯ ಅರಿಯಿರಿ: ಎ.ದೇವರಾಜು

ಅಲಂಬಾಡಿಯಲ್ಲಿ ದೊರಕಿದ ‘ಸಾರ್ಕೋಫೇಗಸ್‌’ ಅನಾವರಣ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2024, 7:35 IST
Last Updated 19 ಏಪ್ರಿಲ್ 2024, 7:35 IST
ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಶೋಭಾ ಅವರು ‘ಸಾರ್ಕೋಫೇಗಸ್‌’ ಕುರಿತು ವಿವರಿಸಿದರು –ಪ್ರಜಾವಾಣಿ ಚಿತ್ರ
ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಶೋಭಾ ಅವರು ‘ಸಾರ್ಕೋಫೇಗಸ್‌’ ಕುರಿತು ವಿವರಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ‘ಆಧುನಿಕ ಶೈಲಿಯ ಬದುಕಿನಲ್ಲಿ ಪರಂಪರೆ, ಇತಿಹಾಸದ ಮೌಲ್ಯವನ್ನು ಅರಿಯದೆ ಮುಂದೆ ಸಾಗುತ್ತಿದ್ದೇವೆ. ಇದರ ಮಹತ್ವವನ್ನು ಜನರಿಗೆ ಪರಿಣಾಮಕಾರಿಯಾಗಿ ತಿಳಿಸಬೇಕಾದ ಅನಿವಾರ್ಯತೆಯಿದೆ’ ಎಂದು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗವು ವಿಶ್ವ ಪರಂಪರೆ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ‘ಸಾರ್ಕೋಫೇಗಸ್‌’ (ಪ್ರಾಚೀನ ಶವಪೆಟ್ಟಿಗೆ) ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಮ್ಮ ಪರಂಪರೆಯನ್ನು ಮತ್ತೆ ಕಣ್ಮುಂದೆ ತರುವ ಕೆಲಸಗಳಾಗಬೇಕು. ಅದಕ್ಕಾಗಿ ಉತ್ಖನನ ಹಾಗೂ ಸರ್ವೆ ಕಾರ್ಯಗಳು ಹೆಚ್ಚುವ ಅವಶ್ಯಕತೆಯಿದೆ. ಇದರ ಬಗ್ಗೆ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಇಲಾಖೆ ಬೆಂಬಲವಾಗಿ ನಿಲ್ಲಲಿದೆ. ಹೊಸ ಅನ್ವೇಷಣೆಗಳು ಪೂರ್ವಿಕರ ದಾಖಲೆಗಳನ್ನು ಹೊರತರಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ADVERTISEMENT

‘ಇಲಾಖೆಯಲ್ಲಿ ಮೂಲ ಸೌಕರ್ಯಗಳಿದ್ದು, ಮಾನವ ಸಂಪನ್ಮೂಲದ ಕೊರತೆಯಿದೆ. ಆದರೆ, ವಿಶ್ವವಿದ್ಯಾಲಯದಲ್ಲಿ ವ್ಯತಿರಿಕ್ತ ಸನ್ನಿವೇಶವಿದೆ. ಹೀಗಾಗಿ ಇಲ್ಲಿನ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಒಟ್ಟಾಗಿ ಬೆಳೆಯೋಣ. ವಿನೂತನ ಸಂಶೋಧನೆಗಳನ್ನು ಮಾಡೋಣ’ ಎಂದು ತಿಳಿಸಿದರು.

ವಿಭಾಗದ ಅಧ್ಯಕ್ಷೆ ಬಿ.ಶೋಭಾ ಮಾತನಾಡಿ, ‘ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿರುವ ಅಲಂಬಾಡಿ ಗ್ರಾಮದಿಂದ ‘ಸಾರ್ಕೋಫೇಗಸ್‌’ ತಂದು ಸಂರಕ್ಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಅಪರೂಪವಾಗಿ ದೊರಕುವ ಈ ಪಾರಂಪರಿಕ ವಸ್ತು ಅಲ್ಲಿನ ಸರ್ಕಾರಿ ಶಾಲೆಗೆ ಪಾಯ ಹಾಕುವಾಗ ದೊರಕಿದ್ದು, ಅಲ್ಲಿನ ಶಿಕ್ಷಕ ಜಯರಾಮನ್‌ ಅದನ್ನು ತೆಗೆದಿಟ್ಟಿದ್ದರು. ನಂತರ ಅವನ್ನು ತಂದು ಜೋಡಿಸಿದ್ದೇವೆ’ ಎಂದರು.

‘ಆ ಜಾಗದಲ್ಲಿ ಗಂಗರ ಕಾಲದ ಮಡಕೆಗಳು, ವಿಜಯನಗರ ಕಾಲದ ರಂಗನಾಥ ದೇವಾಲಯ ಇದೆ. ಇಂತಹ ಅಮೂಲ್ಯ ವಸ್ತುಗಳನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ’ ಎಂದು ನುಡಿದರು.

ವಿಶ್ವವಿದ್ಯಾಲಯದ ಕುಲಪತಿ ಎನ್‌.ಕೆ.ಲೋಕನಾಥ್, ಹಣಕಾಸು ಅಧಿಕಾರಿ ರೇಖಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.