ADVERTISEMENT

ರಂಗಶಂಕರದಲ್ಲಿ ತಿಂಗಳಿಡೀ ಪ್ರದರ್ಶನಕ್ಕೆ ನಾಸೀರುದ್ದೀನ್‌ಗೆ ಅವಕಾಶ: ಪ್ರಸನ್ನ ಕಿಡಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 4:29 IST
Last Updated 21 ಜುಲೈ 2022, 4:29 IST
   

ಮೈಸೂರು: ಬೆಂಗಳೂರಿನ ‘ರಂಗಶಂಕರ’ ರಂಗಮಂದಿರದಲ್ಲಿ ತಿಂಗಳಿಡೀ ಪ್ರದರ್ಶನ ನಡೆಸಲು ಬಾಲಿವುಡ್ ನಟ ಹಾಗೂ ರಂಗಕರ್ಮಿ ನಾಸೀರುದ್ದೀನ್ ಶಾ ಅವರಿಗೆ ಅವಕಾಶ ಕೊಟ್ಟಿರುವುದಕ್ಕೆ ರಂಗಕರ್ಮಿ ಪ್ರಸನ್ನ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ರಂಗಶಂಕರದ ಅರುಂಧತಿ ನಾಗ್‌ ಅವರಿಗೆ ಪತ್ರ ಬರೆದಿರುವ ಅವರು, ‘ನಾವು (ನವೋದಯ ನಾಟಕ ತಂಡ) ‘ಅಯೋಧ್ಯಾ ಕಾಂಡ’ ನಾಟಕವನ್ನು ಪ್ರದರ್ಶಿಸಲೆಂದು ಸೆ.10ರಂದು ರಂಗಶಂಕರ ರಂಗಮಂದಿರ ಕಾಯ್ದಿರಿಸಿದ್ದೆವು. ಆದರೆ, ಅಲ್ಲಿ ನಾಟಕ ಪ್ರದರ್ಶಿಸದಿರಲು ನಿರ್ಧರಿಸಿದ್ದೇವೆ. ಪ್ರತಿಭಟನೆಯ ರೂಪದಲ್ಲಿ ಈ ತೀರ್ಮಾನ ಕೈಗೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

‘ರಂಗಶಂಕರವು ಬೆಂಗಳೂರಿನ ಪ್ರತಿಷ್ಠಿತ ರಂಗಸ್ಥಳ. ಅದೊಂದು ಲಾಂಛನ. ಅದರ ಒತ್ತಾಸೆಯು ರಂಗಕರ್ಮಿಗಳಿಗೆ ಸಿಕ್ಕಬೇಕಲ್ಲವೇ? ನಸೀರುದ್ದೀನ್ ಶಾ ಒಳ್ಳೆಯ ಕಲಾವಿದರು ಮತ್ತು ದೊಡ್ಡ ಚಲನಚಿತ್ರರೂ ಹೌದು. ಅವರ ಬಗ್ಗೆ ಗೌರವವಿದೆ. ಆದರೆ, ಅವರು ರಂಗಭೂಮಿಯ ಲಾಂಛನ ಹೇಗಾದಾರು? ಎಲ್ಲ ಸಂಪ್ರದಾಯಗಳನ್ನೂ ಮುರಿದು, ಇಡೀ ತಿಂಗಳು ರಂಗಶಂಕರದಲ್ಲಿ ಅವರಿಗೆ ಪ್ರದರ್ಶನಗಳನ್ನು ಏರ್ಪಡಿಸಲು ಬಿಟ್ಟರೆ, ರಂಗಭೂಮಿಗೆ ಈಗ ಬಡಿದಿರುವ ಶಾಪವು ನಿವಾರಣೆ ಆಗಬಲ್ಲುದೆ?’ ಎಂದು ಕೇಳಿದ್ದಾರೆ.

ADVERTISEMENT

‘ರಂಗಭೂಮಿಗೆ ಬಡಿದಿರುವ ಶಾಪವಾದರೂ ಯಾವುದು? ಚಲನಚಿತ್ರ, ಧಾರಾವಾಹಿ ಇತ್ಯಾದಿ ವರ್ಚುವಲ್‌ ರಂಗಭೂಮಿಯೇ ತಾನೆ? ಇಂದಿನ ಪರಿಸ್ಥಿತಿ ಅದೆಷ್ಟು ಗಂಭೀರವಾಗಿದೆ ಎಂದರೆ, ನಟರನ್ನು ಬಿಡಿ, ರಂಗದ ಹಿಂದಿನ ಕಲಾವಿದರೂ ತಮ್ಮ ಜೀವನ ನಿರ್ವಹಣೆಯ ಸಲುವಾಗಿ ಚಲನಚಿತ್ರ, ಧಾರಾವಾಹಿಗಳಿಗೆ ತೆರಳಿ ದಿನಗೂಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿಲ್ಲವೇ? ಇಡೀ ರಾಜ್ಯದ ಎಲ್ಲ ಊರುಗಳ ಎಲ್ಲ ರಂಗಚಟುವಟಿಕೆಗಳೂ ನೆಲ ಕಚ್ಚಿ ಕುಳಿತಿದೆಯಲ್ಲವೇ? ರಂಗಭೂಮಿ, ರಂಗ ನಟನೆ, ರಂಗ ನಿರ್ದೇಶನ, ನಾಟಕ ರಚನೆ ಎಲ್ಲವೂ ಮೂಲೆಗುಂಪಾಗಿರುವ ಇಂದಿನ ಸಂದರ್ಭದಲ್ಲಿ ಒಬ್ಬ ಸಿನೆಮಾ ನಟನ ಪ್ರದರ್ಶಗಳನ್ನು ಎತ್ತಿ ಮೆರೆಸುವುದು ನನಗೆ ಸರಿ ಕಾಣುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಎಲ್ಲರಂತೆ ಅವರೂ ಒಂದು ದಿನ ನಾಟಕ ಪ್ರದರ್ಶಿಸಬಹುದಿತ್ತು. ಸಾಮಾನ್ಯ ರಂಗಕರ್ಮಿಗಳು ರಂಗಶಂಕರಕ್ಕೆ ಕಿವಿ ಹಿಂಡುವ ಕೆಲಸ ಮಾಡಲಾರರು. ಇರುವ ಒಂದು ರಂಗಮಂದಿರದ ಬಾಗಿಲು ಕೂಡ ಬಂದಾದರೆ ಎಂಬ ಆತಂಕವಿರುತ್ತದೆ. ನಾನು ಸಾಕಷ್ಟು ನಾಟಕ ಮಾಡಿಸಿದ್ದೇನೆ. ಒಂದು ಪ್ರದರ್ಶನ ನಿಂತರೆ ನನಗಾಗಲೀ–ತಂಡಕ್ಕಾಗಲೀ ಅಂತಹ ವ್ಯತ್ಯಾಸವಾಗುವುದಿಲ್ಲ. ಹಾಗಾಗಿ, ರಂಗಶಂಕರದ ಬಗ್ಗೆ ಪ್ರೀತಿ ಉಳಿಸಿಕೊಂಡೇ ಪ್ರತಿಭಟನೆ ದಾಖಲಿಸುತ್ತಿದ್ದೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.