ಮೈಸೂರು: ‘ರಂಗಭೂಮಿ ಒಂದು ಜೀವಂತ ಕಲಾ ಪ್ರಕಾರವಾಗಿದ್ದು, ಬಹಳ ಪ್ರಭಾವಶಾಲಿ ಮಾಧ್ಯಮ’ ಎಂದು ರಂಗಕರ್ಮಿ ಜನಾರ್ಧನ್ ಹೇಳಿದರು.
ನಗರದ ಕಿರುರಂಗಮಂದಿರದಲ್ಲಿ ಭಾನುವಾರ ಜಿಪಿಐಇಆರ್ ರಂಗತಂಡದ 31ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆದ ‘ಶ್ರಾವಣ ರಂಗೋತ್ಸವ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಮನರಂಜನೆ ಜೊತೆಗೆ ಸಾಮಾಜಿಕ ಬದಲಾವಣೆಗೆ ಪ್ರೇರೇಪಿಸಲು ರಂಗಭೂಮಿ ಒಂದು ಶಕ್ತಿಯುತ ಸಾಧನವಾಗಿದೆ. ಹೊಸ ವಿಷಯಗಳನ್ನು ಕಲಿಸುತ್ತದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ’ ಎಂದರು.
‘ರಂಗಭೂಮಿ ಎಲ್ಲವನ್ನೂ ಒಳಗೊಳ್ಳುತ್ತದೆ. ಇಲ್ಲಿ ಯಾವುದೇ ಜಾತಿ, ಮತವಿಲ್ಲ. ಎಲ್ಲವೂ ಶುದ್ಧವಾಗಿದೆ. ಕುವೆಂಪು ಹೇಳಿದಂತೆ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ ಎಂಬುದು ರಂಗಭೂಮಿಯ ಮೂಲ ಪಠ್ಯವಾಗಿದೆ. ಸಮಾಜಕ್ಕೆ ಒಳ್ಳೆಯ ಸಂಗತಿಗಳನ್ನು ಕೊಡುಗೆ ನೀಡುವುದು ರಂಗಭೂಮಿಯ ಮೂಲ ಉದ್ದೇಶವಾಗಿದೆ’ ಎಂದು ತಿಳಿಸಿದರು.
‘ರಂಗಕ್ರಿಯೆ ನಿರಂತರವಾಗಿ ಬೆಳೆಯಬೇಕು. ರಂಗಭೂಮಿ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ರಂಗಭೂಮಿ ಅಭಿಮಾನಿಗಳು ದೈವತ್ವದ ಸಂಕೇತವಾಗಿದ್ದು, ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಕೆಲಸವಾಗಬೇಕಿದೆ’ ಎಂದರು.
ರಂಗಕರ್ಮಿ ಬಿ.ಎಂ.ರಾಮಚಂದ್ರ ಮಾತನಾಡಿ, ‘ರಂಗಭೂಮಿ ಎಂದರೆ ಒಂದು ಶಿಸ್ತು. ಇದು ಕೇವಲ ಕಲೆಯಲ್ಲದೆ, ನಿರ್ದಿಷ್ಟ ನಿಯಮಗಳು ಮತ್ತು ತತ್ವಗಳನ್ನು ಅನುಸರಿಸುವುದನ್ನು ತಿಳಿಸುತ್ತದೆ’ ಎಂದರು.
ಲೇಖಕಿ ಸುಜಾತಾ ಅಕ್ಕಿ ಮಾತನಾಡಿ, ‘ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಜಾನಪದದ ಸಾಂಸ್ಕೃತಿಕ ಧಾರೆ ಎರೆಯುವ ಕೆಲಸ ಮಾಡಲಾಗುತ್ತಿರುವುದು ಶ್ಲಾಘನೀಯ’ ಎಂದರು.
ರಂಗ ನಿರ್ದೇಶಕ ಮೋಹನ್‌ಚಂದ್ರ ಉರ್ವ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಂಗಳೂರಿನ ಆಯನ ನಾಟಕದ ಮನೆ ತಂಡ ‘ಅಶ್ವತ್ಥಾಮ ನಾಟ್ ಔಟ್’ ನಾಟಕ ಪ್ರಸ್ತುತಪಡಿಸಿತು.
ರಂಗಕರ್ಮಿಗಳಾದ ಸಿದ್ದೇಗೌಡ ಜಿಬಿಎಸ್, ರಾಜೇಶ್ ಎಚ್.ತಕಲಕಾಡು, ಶ್ರಾವಣ ರಂಗೋತ್ಸವದ ಸಂಚಾಲಕ ಎಂ.ಪಿ.ಹರಿದತ್ತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.