ADVERTISEMENT

ಕಳ್ಳನ ಕ್ರೌರ್ಯಕ್ಕೆ ಮಹಿಳೆ ಬಲಿ

ಬೈಕ್ ಕಳ್ಳನ ಬಂಧನ, ಆರೋಪಿಗಳಿಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2019, 11:27 IST
Last Updated 25 ಆಗಸ್ಟ್ 2019, 11:27 IST

ಮೈಸೂರು: ಇಲ್ಲಿನ ಮನುವನ ಉದ್ಯಾನದ ಸಮೀಪದ ಮನೆಯಲ್ಲಿ ಕಳ್ಳನೊಬ್ಬನಿಂದ ಗಾಯಗೊಂಡಿದ್ದ ಮಹಿಳೆ ನಾಗರತ್ನಾ (87) ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ನಿಧನ ಹೊಂದಿದರು.

ಗುರುವಾರ ಬೆಳಿಗ್ಗೆ ಮನೆಯವರೆಲ್ಲರೂ ವಾಯುವಿಹಾರಕ್ಕೆ ಹೊರಟಿದ್ದಾಗ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ರೆಹಮಾನ್ ಷರೀಫ್ ಎಂಬಾತ ಮನೆಗೆ ನುಗ್ಗಿ ಇವರ ಬಾಯಿಗೆ ಬಟ್ಟೆ ತುರಕಿ, ಚಿನ್ನಾಭರಣಗಳನ್ನು ಕಳಚಿಕೊಂಡು ಪರಾರಿಯಾಗಿದ್ದ. ತಕ್ಷಣವೇ ಕಾರ್ಯಪ್ರವೃತ್ತರಾದ ಲಕ್ಷ್ಮೀಪುರಂ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದರು. ಬಾಯಿಗೆ ಬಟ್ಟೆ ತುರುಕಿದ್ದರಿಂದ ಉಂಟಾದ ಉಸಿರಾಟದ ಸಮಸ್ಯೆಯಿಂದ ನಾಗರತ್ನಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಸ್ಪಂದಿಸದೇ ಅವರು ಮೃತಪಟ್ಟಿದ್ದಾರೆ. ಇದೀಗ ರೆಹಮಾನ್ ಷರೀಫ್ ಮೇಲೆ ಕಳ್ಳತನ ಪ್ರಕರಣದ ಜತೆಗೆ ಕೊಲೆ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್ ಕಳ್ಳನ ಬಂಧನ

ADVERTISEMENT

ಮೈಸೂರು: ಅಪರಾಧ ಪತ್ತೆ ವಿಭಾಗದ ಪೊಲೀಸರು ರಮಾಬಾಯಿನಗರ ಶಂಕರಲಿಂಗೇಗೌಡ ಬಡಾವಣೆ ನಿವಾಸಿ ಸುಬ್ರಹ್ಮಣ್ಯ(21) ಎಂಬಾತನನ್ನು ಬಂಧಿಸಿ, ₹ 95 ಸಾವಿರ ಮೌಲ್ಯದ 3 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಈತ ಲಿಂಗಾಂಬುದಿಪಾಳ್ಯದ ಹೊರ ವರ್ತುಲ ರಸ್ತೆ ಜಂಕ್ಷನ್ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ನಂತರ, ಈತ 3 ಬೈಕ್ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆ.ಆರ್.ಉಪವಿಭಾಗದ ಎಸಿಪಿ ಎಂ.ಪಿ.ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆಯ ಇನ್‌ಸ್ಪೆಕ್ಟರ್ ಜಿ.ಸಿ.ರಾಜು, ಸಬ್‌ಇನ್‌ಸ್ಪೆಕ್ಟರ್ ಕೆ.ರಘು, ಸಿಬ್ಬಂದಿ ಭಗತ್, ಎಂ.ಪಿ.ಮಂಜುನಾಥ್, ನಾಗೇಶ್, ಎಸ್.ಮಹದೇವ, ಸಾಗರ್, ಸುನಿಲ್, ಮೇಘನಾಯ್ಕ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.