ADVERTISEMENT

ಗಾಳಿಯ ಅಬ್ಬರಕ್ಕೆ ವಿದ್ಯುತ್ ಸಂಪರ್ಕ ಅಸ್ತವ್ಯಸ್ತ

3 ಕಡೆ ಧರೆಗುರುಳಿದ ಮರದ ಕೊಂಬೆಗಳು, ದಿನವಿಡೀ ಸುರಿದ ಮಳೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 1:04 IST
Last Updated 21 ಸೆಪ್ಟೆಂಬರ್ 2020, 1:04 IST
ಮೈಸೂರಿನಲ್ಲಿ ಭಾನುವಾರ ಸುರಿಯುತ್ತಿದ್ದ ಮಳೆಯಲ್ಲಿ ಮಹಿಳೆಯೊಬ್ಬರು ತನ್ನ ಕಂದಮ್ಮನನ್ನು ಎದೆಗವುಚಿಕೊಂಡು ತಲೆ ಮೇಲೆ ಮೂಟೆ ಹೊತ್ತು ಸಾಗಿದ ದೃಶ್ಯ ಕೆ.ಆರ್.ವೃತ್ತದಲ್ಲಿ ಕಂಡುಬಂತು   ಚಿತ್ರ: ಬಿ.ಆರ್.ಸವಿತಾ
ಮೈಸೂರಿನಲ್ಲಿ ಭಾನುವಾರ ಸುರಿಯುತ್ತಿದ್ದ ಮಳೆಯಲ್ಲಿ ಮಹಿಳೆಯೊಬ್ಬರು ತನ್ನ ಕಂದಮ್ಮನನ್ನು ಎದೆಗವುಚಿಕೊಂಡು ತಲೆ ಮೇಲೆ ಮೂಟೆ ಹೊತ್ತು ಸಾಗಿದ ದೃಶ್ಯ ಕೆ.ಆರ್.ವೃತ್ತದಲ್ಲಿ ಕಂಡುಬಂತು   ಚಿತ್ರ: ಬಿ.ಆರ್.ಸವಿತಾ   

ಮೈಸೂರು: ನಗರದಲ್ಲಿ ಭಾನುವಾರ ಬೀಸಿದ ಗಾಳಿಯಿಂದ ಹಲವೆಡೆ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿತು. ಮೂರು ಕಡೆಗಳಲ್ಲಿ ಮರಗಳ ಕೊಂಬೆಗಳು ಧರೆಗುರುಳಿದವು.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ನಗರದಲ್ಲಿ ಒಂದು ಸೆಕೆಂಡಿಗೆ 8.4 ಮೀಟರ್‌ನಷ್ಟು ವೇಗದಲ್ಲಿ ಗಾಳಿ ಬೀಸಿತು ಎಂದು ಮಾಹಿತಿ ನೀಡಿದ್ದಾರೆ. ಸಹಜವಾಗಿ ಒಂದು ಸೆಕೆಂಡಿಗೆ 5 ಮೀಟರ್‌ನಷ್ಟು ಗಾಳಿ ಬೀಸಬೇಕಿತ್ತು. ಸೋಮವಾರವೂ ಗಾಳಿಯ ಅಬ್ಬರ ಜೋರಾಗಿರಲಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ಗಾಳಿಯಿಂದ ಮರದ ಸಣ್ಣ ಕಡ್ಡಿಗಳು, ರೆಂಬೆಗಳು ವಿದ್ಯುತ್ ತಂತಿಗೆ ತಗುಲಿದ್ದರಿಂದ ಬನ್ನಿಮಂಟಪ, ಎನ್.ಆರ್‌.ಮೊಹಲ್ಲಾ, ವಿದ್ಯಾರಣ್ಯಪುರ, ರಾಮಾನುಜ ರಸ್ತೆ ಸೇರಿದಂತೆ ಹಲವೆಡೆ ವಿದ್ಯುತ್ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಯಿತು. ಆದರೆ, ದೂರು ಸ್ವೀಕರಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಸೆಸ್ಕ್‌ ಸಿಬ್ಬಂದಿ ಸಮಸ್ಯೆಗಳನ್ನು ಸರಿಪಡಿಸಿದರು.

ADVERTISEMENT

ವಿದ್ಯಾರಣ್ಯಪುರಂನ ಮಹಾಲಕ್ಷ್ಮೀ ಸ್ವೀಟ್ಸ್‌ ಬಳಿ, ವಿವೇಕಾನಂದ ವೃತ್ತದ ಪೆಟ್ರೊಲ್ ಬಂಕ್‌ ಬಳಿ ಹಾಗೂ ಸಿದ್ಧಾರ್ಥನಗರದ ನಂದಿನಿ ಲೇಔಟ್‌ನ 1ನೇ ಹಂತದ ಗಣಪತಿ ದೇಗುಲದ ಬಳಿ ಮರದ ಕೊಂಬೆಗಳು ಧರೆಗುರುಳಿವೆ. ಇಲ್ಲಿ ಪಾಲಿಕೆಯ ಅಭಯ್‌ ರಕ್ಷಣಾ ತಂಡವು ತೆರಳಿ ತೆರವು ಕಾರ್ಯಾಚರಣೆ ನಡೆಸಿತು. ಉಳಿದಂತೆ, ನಗರದೆಲ್ಲೆಡೆ ದಿನವಿಡೀ ದಟ್ಟವಾದ ಮೋಡ ಕವಿದ ವಾತಾವರಣ ಇತ್ತು. ಜಿಟಿಜಿಟಿ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.