
ಮೈಸೂರು: ಹುಲಿ ದಾಳಿಯಿಂದ ಮೃತಪಟ್ಟ ರಾಜಶೇಖರ್ ಅವರ ಕುಟುಂಬ ಹಾಗೂ ರೈತ ಮುಖಂಡರು ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದ ಮುಂಭಾಗ ಪ್ರತಿಭಟಿಸುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮೇಲಿನ ಹುಲಿ ದಾಳಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ತಪ್ಪಿತಸ್ಥರ ಅವರ ವಿರುದ್ಧ ಕ್ರಮವಹಿಸಬೇಕು. ಕಾಡಿನಲ್ಲಿ ಅಕ್ರಮ ರೆಸಾರ್ಟ್ ತಲೆ ಎತ್ತಿರುವುದರಿಂದ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಹುಲಿ ದಾಳಿಯಾಗದಂತೆ ಶಾಶ್ವತ ಪರಿಹಾರ ಕೈಗೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ತಳ್ಳಾಟ ನಡೆಯಿತು.
'ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ನುಗು ವನ್ಯಜೀವಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಂಚಿನ ನುಗು ವನ್ಯಜೀವಿ ವಲಯ ಅರಣ್ಯದಂಚಿನ ಬೆಣ್ಣೇಗೆರೆ ಗ್ರಾಮದಲ್ಲಿ ರಾಜಶೇಖರ್ ಹುಳಿ ದಾಳಿಯಿಂದ ಮೃತಪಟ್ಟಿದ್ದು, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಈಚೆಗೆ ನಮ್ಮದೇ ತಾಲ್ಲೂಕಿನಲ್ಲಿ ಹುಲಿ ದಾಳಿ ಆದಾಗ ನಮ್ಮೂರಿಗೂ ಬಂದು ಹುಲಿ ಹೆಜ್ಜೆಗಳನ್ನು ಪರಿಶೀಲಿಸಿದರು. ಆದರೆ ಬೋನು ಇಡದೆ ನಿರ್ಲಕ್ಷ್ಯ ವಹಿಸಿದ್ದರು. ಗ್ರಾಮದಲ್ಲಿ ಜನರ ಆಕ್ರೋಶವಿದೆ ಎಂಬ ಭಯಕ್ಕೆ ಸರಗೂರಿನಲ್ಲಿ ಮರಣೋತ್ತರ ಪರೀಕ್ಷೆ ಮಾಡದೆ ಮೈಸೂರಿಗೆ ಮೃತದೇಹ ತಂದಿದ್ದಾರೆ. ವಲಯ ಅರಣ್ಯ ಅಧಿಕಾರಿ ಹಾಗೂ ಸಿಸಿಎಫ್ ಅಮಾನತು ಮಾಡಬೇಕು. ಹುಲಿ ದಾಳಿಗೆ ಶಾಶ್ವತ ಪರಿಹಾರ ಕಂಡುಹುಡುಕಬೇಕು' ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ವಹಿಸುತ್ತೇವೆ. ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರಧನ ನೀಡಿದ್ದು, ಅದನ್ನು ಹೆಚ್ಚಿಸಲು ಕ್ರಮವಹಿಸುತ್ತೇವೆ' ಎಂದು ಭರವಸೆ ನೀಡಿದರು.
ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಮಂಜು ಕಿರಣ್, ಹಳ್ಳಿಕೆರೆ ಬಸವರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.