
ಸರಗೂರು: ತಾಲ್ಲೂಕಿನಲ್ಲಿ ಹುಲಿ ದಾಳಿ ತಡೆಗಟ್ಟಿ, ರೈತರಿಗೆ ಶಾಶ್ವತ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಇಲ್ಲಿನ ವಲಯ ಅರಣ್ಯ ಇಲಾಖೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಸಂಘಟನೆ ರಾಜ್ಯಾಧ್ಯಕ್ಷ ಎಂ.ಶಶಿಧರ್ ಮಾತನಾಡಿ, ‘ತಾಲ್ಲೂಕಿನ ಬಡಗಲಪುರ, ಬೆಣ್ಣೆಗೆರೆ, ಕೂಡಿಗಿ ಮತ್ತು ಹಳೇಹೆಗ್ಗುಡಿಲು ಗ್ರಾಮಗಳಲ್ಲಿ ಒಂದು ತಿಂಗಳಿಂದ ಹುಲಿ ದಾಳಿಯಿಂದ ಸ್ಥಳೀಯ ರೈತರಲ್ಲಿ ಭಯದ ವಾತಾವರಣ ಉಂಟಾಗಿದೆ. ದೈನಂದಿನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ’ ಎಂದರು.
‘ಹುಸ್ಕೂರು ಹಾಡಿಯ ಜನರು ಪ್ರತಿ ದಿನ ಅರಣ್ಯದ ಒಳಗಡೆ ಸುಮಾರು ಮೂರು ಕಿಲೋಮೀಟರ್ ನಡೆದುಕೊಂಡು ಹಳ್ಳಿಯ ಹೊರವಲಯಕ್ಕೆ ಹೋಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಈ ಪ್ರದೇಶದಲ್ಲಿ ಸಾರ್ವಜನಿಕ ಸಾರಿಗೆ ಸೌಲಭ್ಯ ಇಲ್ಲದಿರುವುದರಿಂದ ಮಕ್ಕಳು ಕಳೆದ ನಾಲ್ಕು ದಿನಗಳಿಂದ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಮಕ್ಕಳು ಮತ್ತು ಮಹಿಳೆಯರು ಮನೆಯಿಂದ ಹೊರಬರುವುದಕ್ಕೂ ಹೆದರುತ್ತಿದ್ದಾರೆ’ ಎಂದು ತಿಳಿಸಿದರು.
‘ಕಾಡು ಪ್ರಾಣಿಗಳು ಹೊಲಗಳಿಗೆ ನುಗ್ಗಿ ಕಟಾವಿಗೆ ಬಂದ ಬೆಳೆಗಳನ್ನು ನಾಶಪಡಿಸುತ್ತಿದ್ದು, ರೈತರು ಹೊಲಗಳಿಗೆ ಹೋಗಿ ಬೆಳೆ ಕಾವಲು ಕಾಯಲು ಅಂಜುತ್ತಿದ್ದಾರೆ. ಅರಣ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತವು ಈವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ರಾತ್ರಿ ವೇಳೆಯಲ್ಲಿ ಹುಲಿಗಳ ಸಪ್ಪಳ ಸ್ಪಷ್ಟವಾಗಿ ಕೇಳಿಬರುತ್ತಿದ್ದು, ಜನರು ಮನೆಯಿಂದ ಹೊರಬರಲು ಸಹ ಭಯಪಡುತ್ತಿದ್ದಾರೆ’ ಎಂದರು.
‘ಗಿಡ, ಪೊದೆಗಳು ಎತ್ತರವಾಗಿ ಬೆಳೆದ ಕಾರಣ ಹುಲಿ ಸೇರಿದಂತೆ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗಲು ಸಹಕಾರಿಯಾಗಿದೆ. ಆನೆ ಬಂದು ನಿಂತರೂ ಗೊತ್ತಾಗುವುದಿಲ್ಲ’ ಎಂದರು.
ಮೊಳೆಯೂರು ವಲಯದ ಅರಣ್ಯ ಅಧಿಕಾರಿ ನಾರಾಯಣ ಅವರಿಗೆ ಪ್ರತಿಭಟನಕಾರರು ಮನವಿ ಸಲ್ಲಿಸಿದರು.
ಸಂಘಟನೆ ರಾಜ್ಯ ಉಪಾಧ್ಯಕ್ಷ ಶಿವಪ್ರಕಾಶ್, ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್, ಜಂಟಿ ಕಾರ್ಯದರ್ಶಿ ಯೋಗೇಶ್, ನಂಜುಂಡ ಮುಖಂಡರಾದ ಚನ್ನಗುಂಡಿ ನಾಗೇಶ್, ಟಿ.ಆರ್. ಸುನಿಲ್, ಹಳೆಯೂರು ಗ್ರಾಮದ ರೈತ ಮಹೇಶ್, ಗೋವಿಂದರಾಜು, ಸೋಮಣ್ಣ, ದಡದಹಳ್ಳಿ ಶೈಲೇಂದ್ರ ಹುಸ್ಕೂರು ಹಾಡಿಯ ನೂರಾಳಯ್ಯ, ಬುಂಡಮ್ಮ, ದಡದಹಳ್ಳಿ ಹಾಡಿಯ ನಂಜುಂಡ, ಕಾವ್ಯಾ, ಸೋಮಣ್ಣ ಹಿರೇಹಳ್ಳಿ ಬಿ. ಸೋಮೇಗೌಡ, ರಂಗರಾಜು, ಪುಟ್ಟೇಗೌಡ, ಸೀಗೇವಾಡಿ ಹಾಡಿ ಕುಮಾರ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.