ADVERTISEMENT

ಪಿರಿಯಾಪಟ್ಟಣ: ರೈತರ ಆಕ್ಷೇಪದಿಂದ ತಂಬಾಕು ಹರಾಜು ಪ್ರಕ್ರಿಯೆ ಸ್ಥಗಿತ

ಮೊದಲ ದಿನವೇ ಕಡಿಮೆ ಬೆಲೆ ನಿಗದಿಪಡಿಸಿದ್ದಕ್ಕೆ ತಂಬಾಕು ಬೆಳೆಗಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 5:56 IST
Last Updated 25 ಸೆಪ್ಟೆಂಬರ್ 2021, 5:56 IST
ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರು ಸಂಸದ ಪ್ರತಾಪಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡರು
ಪಿರಿಯಾಪಟ್ಟಣ ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರು ಸಂಸದ ಪ್ರತಾಪಸಿಂಹ ಅವರನ್ನು ತರಾಟೆಗೆ ತೆಗೆದುಕೊಂಡರು   

ಪಿರಿಯಾಪಟ್ಟಣ: ತಾಲ್ಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಶುಕ್ರವಾರ ಆರಂಭವಾದ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ಕಡಿಮೆ ಬೆಲೆ ನಿಗದಿಪಡಿಸಿದ್ದರಿಂದ ರೈತರು ಆಕ್ಷೇಪ ವ್ಯಕ್ತಪಡಿಸಿದ್ದು, ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿತು.

ಹರಾಜು ಮಾರುಕಟ್ಟೆ ಸಂಖ್ಯೆ 5ರಲ್ಲಿ ಹರಾಜು ಪ್ರಕ್ರಿಯೆಗೆ ಸಂಸದ ಪ್ರತಾಪಸಿಂಹ ಚಾಲನೆ ನೀಡಿದರು.

ಖರೀದಿದಾರ ಕಂಪನಿಗಳು ಉತ್ತಮ ದರ್ಜೆಯ ತಂಬಾಕಿಗೆ ಕೆ.ಜಿ.ಗೆ ₹185ನಂತೆ ಹರಾಜು ಕೂಗಿದವು. ಇದಕ್ಕೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್, ರೈತಪರ ಹೋರಾಟಗಾರರಾದ ಶ್ರೀನಿವಾಸ್, ನವೀನ್ ರಾಜೇ ಅರಸ್ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘ತಂಬಾಕು ಉತ್ಪಾದನಾ ವೆಚ್ಚ ವಿಪರೀತ ಹೆಚ್ಚಳವಾಗಿದೆ. ಕನಿಷ್ಠ ₹230ರಿಂದ ₹250 ದರ ನೀಡಿ ತಂಬಾಕು ಖರೀದಿಸಬೇಕಾದ ಕಂಪನಿಗಳು ₹185 ನೀಡುತ್ತಿರುವುದು ರೈತರ ಶೋಷಣೆಯೇ ಸರಿ. ಮಾರುಕಟ್ಟೆ ನಡೆಸಲು ಅವಕಾಶ ನೀಡುವುದಿಲ್ಲ. ತಂಬಾಕು ಬೆಳೆಗಾರರು ಮತ್ತು ಕಂಪನಿ ‍ಪ್ರತಿನಿಧಿಗಳ ಸಭೆ ನಡೆಸದೆಯೇ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ತಂಬಾಕು ಮಂಡಳಿ ಅಧಿಕಾರಿಗಳು ಖರೀದಿದಾರ ಕಂಪನಿಗಳ ಪರ ನಿಲುವು ತಳೆದಿದ್ದಾರೆ’ ಎಂದು ಆರೋಪಿಸಿದರು.

ರೈತರನ್ನು ಸಮಾಧಾನಪಡಿಸಲು ಮುಂದಾದ ಪ್ರತಾಪ ಸಿಂಹ ಅವರನ್ನು ತಂಬಾಕು ಬೆಳೆಗಾರರು ತರಾಟೆಗೆ ತೆಗೆದುಕೊಂಡರು.

‘ಈ ಪರಿಸ್ಥಿತಿಗೆ ನೀವು ಕಾರಣ. ನಿಮ್ಮ ನೇತೃತ್ವದಲ್ಲಿ ಸಭೆ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರತಿವರ್ಷ ಬೆಳಿಗ್ಗೆ 9 ಗಂಟೆ ನಂತರ ಹರಾಜು ಪ್ರಕ್ರಿಯೆ ಪ್ರಾರಂಭವಾಗುತ್ತಿತ್ತು. ಆದರೆ, ಈ ಬಾರಿ ತರಾತುರಿಯಲ್ಲಿ ಬೆಳಿಗ್ಗೆ 7 ಗಂಟೆಗೆ ಹರಾಜು ಪ್ರಕ್ರಿಯೆ ನಡೆಸುವ ಉದ್ದೇಶವೇನು’ ಎಂದು ಪ್ರಶ್ನಿಸಿದರು.

ಇದರಿಂದ ಸಿಡಿಮಿಡಿಗೊಂಡ ಸಂಸದರು, ಹರಾಜು ಮಾರುಕಟ್ಟೆ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

‘ರೈತರಿಗೆ ಸರಿಯಾಗಿ ಮಾಹಿತಿ ನೀಡದೆ ಖರೀದಿದಾರರೊಂದಿಗೆ ಸರಿಯಾಗಿ ಚರ್ಚಿಸದೆ ಮತ್ತು ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದೆ ಹರಾಜು ಪ್ರಕ್ರಿಯೆಗೆ ಏಕೆ ಚಾಲನೆ ನೀಡಿದ್ದೀರಿ’ ಎಂದು ಪ್ರಶ್ನಿಸಿದರು.

ಉಳಿದ ಹರಾಜು ಮಾರುಕಟ್ಟೆ ಸಂಖ್ಯೆ 4, 6ಕ್ಕೆ ಚಾಲನೆ ನೀಡದೆ ಸಂಸದರು ಹೊರಟು ಹೋದರು. ಆಹ್ವಾನಿತ ಗಣ್ಯರು ಸಾಂಪ್ರದಾಯಿಕ ಪೂಜೆ ಸಲ್ಲಿಸಿದರು. ಆದರೆ, ಹರಾಜು ಪ್ರಕ್ರಿಯೆಗೆ ರೈತರು ಅವಕಾಶ ನೀಡಲಿಲ್ಲ.

ಈ ಸಂದರ್ಭದಲ್ಲಿ ತಂಬಾಕು ಮಂಡಳಿ ಅಧ್ಯಕ್ಷ ರಘುನಾಥ್ ಬಾಬು, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್, ಮೈಮುಲ್ ಅಧ್ಯಕ್ಷ ಪಿ.ಎಂ.ಪ್ರಸನ್ನ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಎಂ. ರಾಜೇಗೌಡ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಕೆ.ಎನ್.ಸೋಮಶೇಖರ್, ಬಿ.ವಿ.ಜವರೇಗೌಡ, ಜಿ. ಸಿ.ವಿಕ್ರಮ್ ರಾಜ್, ನೀಲಂಗಾಲ ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.