ADVERTISEMENT

ಉತ್ಪನ್ನಗಳಿಗೆ ದುಪ್ಪಟ್ಟು ತೆರಿಗೆ: ಖಂಡನೆ

ತಂಬಾಕು ಬೆಳೆಗಾರರಿಂದ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 4:53 IST
Last Updated 7 ಜನವರಿ 2026, 4:53 IST
ಹುಣಸೂರು ನಗರದಲ್ಲಿ ಕರ್ನಾಟಕ ವರ್ಜೀನಿಯ ತಂಬಾಕು ಬೆಳೆಗಾರರ ಸಂಘದ ಸದಸ್ಯರು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಏರಿಕೆ ವಿರುದ್ಧ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್‌ ಯದುಗಿರೀಶ್‌ ಅವರಿಗೆ ಮನವಿ ಪತ್ರ ನೀಡಿದರು
ಹುಣಸೂರು ನಗರದಲ್ಲಿ ಕರ್ನಾಟಕ ವರ್ಜೀನಿಯ ತಂಬಾಕು ಬೆಳೆಗಾರರ ಸಂಘದ ಸದಸ್ಯರು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಏರಿಕೆ ವಿರುದ್ಧ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿ, ಉಪ ವಿಭಾಗಾಧಿಕಾರಿ ಕಚೇರಿ ತಹಶೀಲ್ದಾರ್‌ ಯದುಗಿರೀಶ್‌ ಅವರಿಗೆ ಮನವಿ ಪತ್ರ ನೀಡಿದರು   

ಹುಣಸೂರು: ‘ತಂಬಾಕು ಉತ್ಪನ್ನ ಸಿಗರೇಟು ಸೇರಿದಂತೆ ಇತರೆ ಪದಾರ್ಥಗಳ ಮೇಲೆ ದುಪ್ಪಟ್ಟು ತೆರಿಗೆ ಹೆಚ್ಚಿಸಿ ತಂಬಾಕು ಬಳಕೆಯನ್ನು ಕುಗ್ಗಿಸುವ ದಿಕ್ಕಿನಲ್ಲಿ ಕೇಂದ್ರ ಅಬಕಾರಿ ಸಚಿವಾಲಯದ ಕ್ರಮವು ರಾಜ್ಯದ ತಂಬಾಕು ಬೆಳೆಗಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಕರ್ನಾಟಕ ವರ್ಜೀನಿಯ ತಂಬಾಕು ಬೆಳೆಗಾರರ ಸಂಘದ ಸದಸ್ಯರು ಬೃಹತ್‌ ಪ್ರತಿಭಟಿಸಿದರು.

ನಗರದ ಸಂವಿಧಾನ ವೃತ್ತದಿಂದ ಕಲ್ಪತರು ವೃತ್ತದ ವರೆಗ ಮೆರವಣಿಗೆ ಸಾಗಿ ಅಲ್ಲಿ  ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿದರು. ಬಳಿಕ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ನೀಡಿದರು. ಸಂಘದ ಅಧ್ಯಕ್ಷ ಎಚ್.ಜಿ.ಪರಮೇಶ್‌ ಮಾತನಾಡಿ, ಕೇಂದ್ರ ಸರ್ಕಾರ 2026ರಲ್ಲಿ ಸಿಗರೇಟು ಉತ್ಪಾದನೆ ಮೇಲೆ ಪ್ರತಿ 1000 ಸಿಗರೇಟಿಗೆ ₹ 2,050 ರಿಂದ 8,500 ವರೆಗೆ ತೆರಿಗೆ ಹಾಕಿದ್ದು, ಪ್ರತಿ ಸಿಗೆರೇಟಿಗೆ ಕನಿಷ್ಠ ₹ 6 ತೆರಿಗೆ ಸರಾಸರಿ ವಿಧಿಸಿದಂತಾಗಿದೆ. ಇದಲ್ಲದೆ ಸಿಗರೇಟಿನ ಉದ್ದಕ್ಕೆ ತಕ್ಕಂತೆ ತೆರಿಗೆ ಹೆಚ್ಚಾಗಿಸುವ ಅವಕಾಶವನ್ನು ಹೊಂದಿದೆ ಎಂದರು.

‘ಅವೈಜ್ಞಾನಿಕವಾಗಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಮೇಲೆ ಕೇಂದ್ರ ತೆರಿಗೆ ವಿಧಿಸುತ್ತಿದ್ದು, ಇದು ತಂಬಾಕು ಬೆಳೆಗಾರರಿಗೆ ನೇರ ಪರಿಣಾಮ ಬೀರುತ್ತದೆ. ಈ ಬೆಳೆಯನ್ನು  ರಾಜ್ಯ ಮತ್ತು ಆಂಧ್ರಪ್ರದೇಶದ ಲಕ್ಷಾಂತರ ರೈತ ಕುಟುಂಬಗಳು ಅವಲಂಬಿಸಿದ್ದು, ಕೇಂದ್ರ ಸರ್ಕಾರ ತನ್ನ ಜಿ.ಎಸ್.ಟಿ ತೆರಿಗೆ ಶುಲ್ಕ ನಿಯಮದಿಂದ ಎರಡೂ ರಾಜ್ಯಗಳ ತಂಬಾಕು ಬೆಳೆಗಾರರು , ಕುಟುಂಬಗಳ ಆರ್ಥಿಕ ಪರಿಸ್ಥಿತಿ ಮೇಲೆ ತೀವ್ರ ಪರಿಣಾಮ ಬೀರಲಿದೆ.  ಕೇಂದ್ರ ಸರ್ಕಾರ ಜಿ.ಎಸ್.ಟಿ. 2.0 ಪ್ರಕಟಿಸುವ ಹಂತದಲ್ಲಿಬೀಡಿ, ಸಿಗರೇಟು ಮತ್ತು ತಿನ್ನುವ ತಂಬಾಕು ಉತ್ಪನ್ನಗಳ ಮೇಲೆ  ವೈಜ್ಞಾನಿಕವಾಗಿ  ತೆರಿಗೆ ವಿಧಿಸಿ ಬೆಳೆಗಾರರನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಬೆಳೆಗಾರ ಮತ್ತು ವಕೀಲ ಮೂರ್ತಿ ಮಾತನಾಡಿ, ದೇಶದಲ್ಲಿ ಅತಿಯಾದ ತಂಬಾಕು ಉತ್ಪನ್ನಗಳ ಕಳ್ಳಸಾಗಾಣೆ ನಡೆದಿದ್ದು,  ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಅಕ್ರಮ ಸಿಗರೇಟು ಮಾರಾಟವಾಗುತ್ತಿರುವ ಸ್ಥಳವಾಗಿದೆ. ಈ ಅಕ್ರಮಕ್ಕೆ ಹೆಚ್ಚುವರಿ ತೆರಿಗೆ  ಕಳ್ಳಸಾಗಣೆ  ಹೆಚ್ಚಾಗಿ ದೇಶದ ಆದಾಯದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದರು.

ನಿಲುವಾಗಿಲು ಪ್ರಭಾಕರ್‌ ಮಾತನಾಡಿ, ಕಳೆದ ದಶಕದಲ್ಲಿ ಎಫ್.ಸಿ.ವಿ. ತಂಬಾಕು ಬೇಸಾಯ ವ್ಯಾಪ್ತಿ  2014 ರಲ್ಲಿ 2,21,385 ಹೆಕ್ಟೇರ್‌ ಇದ್ದು 2021 ರಲ್ಲಿ 1,22,257 ಹೆಕ್ಟೇರ್‌ಗೆ ಕುಸಿದಿದೆ. ತಂಬಾಕು ಬೆಳೆಯ ವೆಚ್ಚ ಗಣನೀಯವಾಗಿ ಹೆಚ್ಚಾಗಿರುವುದು ಇದಕ್ಕೆ ಕಾರಣ.   ತೆರಿಗೆ ಹೆಚ್ಚಿಸಿ ರೈತರ ಗಳಿಕೆಗೆ ಮತ್ತಷ್ಟು ಏಟು ಬಿದ್ದಿದ್ದು, ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಕಡಿತಗೊಳಿ, ಬೆಳೆಗಾರರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.

ತಟ್ಟೆಕೆರೆ ಶ್ರೀನಿವಾಸ್‌, ಕಾಳೇಗೌಡ, ಶ್ರೀಧರ್‌, ಅಶೋಕ್‌ ನಂಜುಂಡೇಗೌಡ, ಕೆಂಪನಾಯಕ, ಮಹದೇವ್‌, ಶಿವಶಂಕರ್‌,ಶಿವರಾಜ್‌, ಸಣ್ಣೇಗೌಡ, ಸಿದ್ದರಾಮೇಗೌಡ, ರವಿಕುಮಾರ್‌, ಸತೀಶ್‌, ರಾಜೇಂದ್ರ, ರವಿ, ಶ್ರೀಶೈಲ, ಪ್ರವೀಣ್‌, ಲೋಕೇಶ್‌, 400ಕ್ಕೂ ಹೆಚ್ಚು ವರ್ಜೀನಿಯ ತಂಬಾಕು ಬೆಳೆಗಾರರು ಪ್ರತಿಭಟನೆಯಲ್ಲಿ  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.