ADVERTISEMENT

ಭಾರಿ ವಾಹನ ಚಾಲನೆ ಪರವಾನಗಿ ಪಡೆದ ಅನಿತಾ

ಸರಕು ಸಾಗಣೆ ಉದ್ಯಮ ಸ್ಥಾಪನೆಗೂ ‌‌‌ಮೈಸೂರಿನ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 3:24 IST
Last Updated 6 ಆಗಸ್ಟ್ 2025, 3:24 IST
ಅನಿತಾ ಪ್ರಸಾದ್‌
ಅನಿತಾ ಪ್ರಸಾದ್‌   

ಮೈಸೂರು: ಇಲ್ಲಿನ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಅನಿತಾ ಪ್ರಸಾದ್‌ ಅವರು ಭಾರಿ ವಾಹನ ಚಾಲನೆ ಪರವಾನಗಿ ಪಡೆದಿದ್ದು, ರಾಜ್ಯದಲ್ಲಿಯೇ ಈ ಪರವಾನಗಿ ಪಡೆದ ಮೊದಲಿಗರೆನ್ನಲಾಗಿದೆ. ಈ ಮೂಲಕ, ರಾಜ್ಯದ ಸಾರಿಗೆ ವಲಯವು ಲಿಂಗತ್ವ ಸಮಾನತೆಯ ಹೊಸ ಮೈಲುಗಲ್ಲಿಗೆ ಸಾಕ್ಷಿಯಾಗಿದೆ. 

ಆಟೊ, ಬಸ್‌ ಓಡಿಸುವ ಮಹಿಳೆಯರನ್ನು ಆಶ್ಚರ್ಯದಿಂದ ನೋಡುವ ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯಾಗಿ ಭಾರಿ ಸರಕು ಸಾಗಣೆ ವಾಹನ (ಎಚ್‌ಜಿವಿ) ಹಾಗೂ ಬಸ್‌ ಚಾಲನಾ ಪರವಾನಗಿ ಪಡೆದಿರುವುದು ವಿಶೇಷ. ಇದು ಈ ಸಮುದಾಯದಲ್ಲಿ ಹೊಸ ಭರವಸೆಯ ಜೊತೆಗೆ ಸಬಲೀಕರಣಕ್ಕೂ ಮುನ್ನುಡಿ ಬರೆದಿದೆ.

ಲಿಂಗತ್ವ ಅಲ್ಪಸಂಖ್ಯಾತರ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅನಿತಾ ಅವರು, ಅನಿತಾ ಹ್ಯುಮ್ಯಾನಿಟೇರಿಯನ್‌ ಫೌಂಡೇಷನ್‌ ಮತ್ತು ವಿಸ್ತಾರಿಕ್‌ ರೊಬೋಟಿಕ್ಸ್‌ ಕಂಪನಿಯ ಸ್ಥಾಪಕಿಯೂ ಹೌದು. ಸದಾ ಹೊಸತನ, ಸಮುದಾಯ ಅಭಿವೃದ್ಧಿಯ ಬಗ್ಗೆಯೇ ಸದಾ ‌ಚಿಂತಿಸುವ ಅವರು, ಸಾರಿಗೆ ಮತ್ತು ಸರಕು ಸಾಗಣೆ ಸೇವೆ ಉದ್ಯಮ ಸ್ಥಾಪನೆಯತ್ತಲೂ ಕಣ್ಣು ನೆಟ್ಟಿದ್ದಾರೆ.

ADVERTISEMENT

ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಮಹಿಳೆಯರನ್ನು ಚಾಲಕರು ಹಾಗೂ ಸಿಬ್ಬಂದಿಯಾಗಿ ಹೊಂದಲಿರುವ ಉದ್ಯಮವು ಪ್ರಾಥಮಿಕವಾಗಿ ಬೆಂಗಳೂರು ಮತ್ತು ಬೆಳಗಾವಿ ನಡುವಿನ ಮಾರ್ಗದಲ್ಲಿ ಸೇವೆ ನೀಡಲಿದೆ. ಪಾರಂಪರಿಕವಾಗಿ ಪುರುಷರಿಗಷ್ಟೇ ಸೀಮಿತ ಎನ್ನುವ ಈ ವಲಯದಲ್ಲಿ ಮಹಿಳೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೂ ಗೌರವಯುತ ಉದ್ಯೋಗ ಒದಗಿಸುವ ಉದ್ದೇಶ ಹೊಂದಿದ್ದಾರೆ.

‘3 ತಿಂಗಳೊಳಗೆ ಸಂಸ್ಥೆ ಸ್ಥಾಪಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೇನೆ. ಹಲವು ಸಂಘ, ಸಂಸ್ಥೆಗಳೊಂದಿಗೆ ಸಹಭಾಗಿತ್ವಕ್ಕೂ ಪ್ರಯತ್ನ ನಡೆದಿದೆ. ಲಿಂಗತ್ವ ಅಲ್ಪಸಂಖ್ಯಾತರು, ಮಹಿಳೆಯರು ಬಸ್‌, ಸರಕು ಸಾಗಣೆ ವಾಹನಗಳನ್ನು ಓಡಿಸುವ ಮೂಲಕ ವೃತ್ತಿ ಜೀವನ ಕಟ್ಟಿಕೊಳ್ಳಬೇಕು. ಇತರರಿಗೆ ಅವಲಂಬಿತರಾಗುವುದು, ತಾರತಮ್ಯ ಅನುಭವಿಸುವುದು ತಪ್ಪಬೇಕು’ ಎಂದು ಅನಿತಾ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸ ಸಾರಿಗೆ ಉದ್ಯಮವು ಸುರಕ್ಷಿತ ಮತ್ತು ವಿಶ್ವಾಸಾರ್ಹ ಸೇವೆಯನ್ನು ನೀಡಲಿದೆ. ಸಿಬ್ಬಂದಿ ಆಯ್ಕೆ ಮತ್ತು ತರಬೇತಿ ವೇಳೆ ಸಮಾಜದ ಅಂಚಿನಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರನ್ನು ಗುರುತಿಸಿ ಅಗತ್ಯ ಕೌಶಲ, ದಾಖಲೆಗಳನ್ನು ಒದಗಿಸುವುದು. ವಾಣಿಜ್ಯ ಉದ್ದೇಶದ ಚಾಲಕರು, ಸರಕು ಸೇವಾ ಕ್ಷೇತ್ರ ಪರಿಣತರ ತಯಾರಿ ಮಾಡಲಾಗುವುದು’ ಎಂದರು.

ನಾನು ಪಡೆದಿರುವ ಭಾರಿ ವಾಹನ ಚಾಲನಾ ಪರವಾನಗಿಯು ಕೇವಲ ವೈಯುಕ್ತಿಕವಾದದ್ದಲ್ಲ. ನನ್ನಂತೆ ನೂರಾರು ಜನರಿಗೆ ಅವಕಾಶ ಒದಗಿಸುವ ಭರವಸೆಯಂತೆ ಕಂಡಿದೆ
ಅನಿತಾ ಪ್ರಸಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.