
ಮೈಸೂರು: ‘ಹಾಸ್ಟೆಲ್‌ಗಳ ಮಕ್ಕಳನ್ನು ನಿಲಯ ಪಾಲಕರು ತಾಯಿಯಂತೆ ನೋಡಿಕೊಳ್ಳಬೇಕು. ಅವರ ಪ್ರತಿಭೆಯನ್ನು ಬೆಳೆಸುವ ಕೆಲಸ ಮಾಡಬೇಕು’ ಎಂದು ರಾಮಕೃಷ್ಣ ಆಶ್ರಮದ ಸಂಚಾಲಕ ಮಹಾಮೇದಾನಂದ ಸ್ವಾಮೀಜಿ ಹೇಳಿದರು.
ಯಾದವಗಿರಿಯ ಆಶ್ರಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಹಾಸ್ಟೆಲ್‌ಗಳ ಅಡುಗೆ ಸಿಬ್ಬಂದಿ ಹಾಗೂ ನಿಲಯಪಾಲಕರಿಗೆ ಆಯೋಜಿಸಿದ್ದ ‘ಪುನಶ್ಚೇತನ ಕಾರ್ಯಾಗಾರ’ದ ಸಮಾರೋಪದಲ್ಲಿ ಮಾತನಾಡಿದರು.
‘ವಿದ್ಯಾರ್ಥಿಗಳ ಮುಂದೆ ಅಹಂಕಾರ ತೋರಿಸಬಾರದು. ಸಿಬ್ಬಂದಿ ಸಮಯ ಪ್ರಜ್ಞೆ, ತಾಳ್ಮೆಯಿಂದ ಕೆಲಸ ಮಾಡಬೇಕು. ಮಾಡುವ ಕೆಲಸ ಹಾಗೂ ಸೇವೆಯಲ್ಲಿ ಆತ್ಮತೃಪ್ತಿ ಇರಬೇಕು. ಅದರಿಂದ ಸರ್ಕಾರ ಹಾಗೂ ಇಲಾಖೆಗೆ ಒಳ್ಳೆಯ ಹೆಸರು ಬರುತ್ತದೆ’ ಎಂದರು.
ಇಲಾಖೆಯ ಜಿಲ್ಲಾ ಅಧಿಕಾರಿ ರಾಘವೇಂದ್ರ ಮಾತನಾಡಿ, ‘ಕಾರ್ಯಾಗಾರದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ 300ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ, ನಿಲಯಪಾಲಕರು ಭಾಗವಹಿಸಿದ್ದು, ಉತ್ತಮ ತರಬೇತಿ ನೀಡಲಾಗಿದೆ’ ಎಂದು ತಿಳಿಸಿದರು.
ತಾಲ್ಲೂಕು ಕಲ್ಯಾಣಾಧಿಕಾರಿಗಳಾದ ಚಂದ್ರಕಲಾ, ಸ್ವರ್ಣಲತಾ, ಸತೀಶ್, ಸುಚೇಂದ್ರ ಕುಮಾರ್, ಸುಕನ್ಯಾ, ಶಶಿಕಲಾ, ಕೃಷ್ಣೇಗೌಡ, ಪ್ರೇಮ್‍ಕುಮಾರ್, ಮೇಘನಾ, ರಾಜಣ್ಣ, ನಿಲಯಪಾಲಕರಾದ ಜಗದೀಶ್ ಕೋರಿ, ಮಹಾಲಕ್ಷ್ಮಿ, ವೀರಬಸಪ್ಪ, ರನ್ಯಾ, ವಿನೋದ, ಪರಶುರಾಂ, ನಾಗರತ್ನ, ಪೂರ್ಣಿಮಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.