ADVERTISEMENT

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅತಿಕ್ರಮ ಪ್ರವೇಶ: ‍ಐವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2023, 19:14 IST
Last Updated 22 ಅಕ್ಟೋಬರ್ 2023, 19:14 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ ಐವರು ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. 

‘ವನ್ಯಜೀವಿ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿ ಗುರುವಾರ ಸಂಜೆ 7ಕ್ಕೆ ವ್ಯಾಮ್ಸಿ ಮೆರ್ಲಾ, ಮೋಟಾರ್‌ ರೇಸರ್‌ ಚೇತನ್‌ ಶಿವರಾಮ್‌, ವಿಜಯ್‌ ರಾವ್, ಲೋಕೇಶ್‌ ಗೌಡ ಸೇರಿದಂತೆ ಮಹಿಳೆಯೊಬ್ಬರು ಅರಣ್ಯ ಪ್ರವೇಶಿಸಿದ್ದರು’ ಎಂದು ನಾಗರಹೊಳೆ ಹುಲಿ ಯೋಜನಾ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಎಲ್ಲಿಯವರು ಎನ್ನುವುದು ತಿಳಿದುಬಂದಿದೆ.

ADVERTISEMENT

‘ಡಿ.ಬಿ.ಕುಪ್ಪೆ ಅರಣ್ಯ ವಲಯದ ಉದ್ಬೂರು ಗೇಟ್‌ನಿಂದ ಸೂಕ್ಷ್ಮ ಅರಣ್ಯ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿರುವ ಆರೋಪಿಗಳು, ಕೇರಳ ಗಡಿಯ ಕೈಮರಕ್ಕೆ ಹೋಗಿದ್ದಾರೆ. ರಾತ್ರಿ ವೇಳೆ ಅರಣ್ಯ ಮಾರ್ಗಗಳನ್ನು ಬಳಸುವಂತಿಲ್ಲ. ಪಶ್ಚಿಮ ಬಂಗಾಳದಲ್ಲಿ ನೋಂದಣಿಯಾದ ಖಾಸಗಿ ಕಾರಿನಲ್ಲಿ ತೆರಳಿದ್ದರು. ಅರಣ್ಯ ಸಿಬ್ಬಂದಿಯೂ ಇರಲಿಲ್ಲ. ಇದು ನಿಯಮ ಉಲ್ಲಂಘನೆಯಾಗಿದ್ದು, ವಾಹನ ಸಹಿತ ಐವರನ್ನೂ ವಶಕ್ಕೆ ಪಡೆಯಲು ತನಿಖೆ ನಡೆಸಲಾಗಿದೆ. ಪ್ರವೇಶಕ್ಕೆ ಅವಕಾಶ ನೀಡಿದ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಕೆಲವು ವರ್ಷಗಳ ಹಿಂದೆ ಉದ್ಬೂರು ಗೇಟ್‌ ಬಳಿ ಎರಡು ಕಾರ್‌ಗಳು ನಿಯಮ ಉಲ್ಲಂಘಿಸಿ, ಅರಣ್ಯದ ಮೈಸೂರು– ಮಾನಂದವಾಡಿ ರಸ್ತೆಗೆ ಪ್ರವೇಶಿಸಿದ್ದವು. ಆರೋಪಿಗಳು ವೇಗವಾಗಿ ವಾಹನ ಚಲಾಯಿಸಿ ಹುಲಿಗೆ (ಬ್ಯಾಕ್‌ ವಾಟರ್‌ ಮೇಲ್‌) ಡಿಕ್ಕಿ ಹೊಡೆದಿದ್ದರು. ಹುಲಿಯ ಸಾವನ್ನು ಸಹಜವೆಂಬಂತೆ ಬಿಂಬಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.