
ಹುಣಸೂರು: ಬುಡಕಟ್ಟು ಸಮುದಾಯದ ಮಕ್ಕಳಲ್ಲಿ ಕಲಿಕೆ ಮತ್ತು ದೈಹಿಕ ಸಾಮರ್ಥ್ಯ ಇತರರಿಗಿಂತಲೂ ಹೆಚ್ಚಿದ್ದು, ಈ ಮಕ್ಕಳನ್ನು ಸಮಾಜಮುಖಿ ಆಗಿಸುವಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕಾಗಿದೆ ಎಂದು ಉನ್ಮನಾ ಸಂಸ್ಥೆಯ ಮನಶಾಸ್ತ್ರತಜ್ಞೆ ಡಾ.ಜ್ಯೋತಿ ಎಸ್ ಹೇಳಿದರು.
ನಾಗರಹೊಳೆ ಅರಣ್ಯದಲ್ಲಿನ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳ ಸುರಕ್ಷತೆ, ಜಾಗೃತಿ ಮತ್ತು ಜೀವನ ಕೌಶಲ ಕುರಿತು ಒಂದು ದಿನದ ಕಾರ್ಯಗಾರದಲ್ಲಿ ಗಿರಿಜನರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಗಿರಿಜನ ಮಕ್ಕಳಲ್ಲಿ ಗ್ರಹಿಕೆ ಶಕ್ತಿ ಅಧಿಕವಿದ್ದು, ಇವರಲ್ಲಿ ಆತ್ಮವಿಶ್ವಾಸ ಮತ್ತು ಅಭಿವೃದ್ಧಿ ಕೌಶಲಗಳನ್ನು ಒಗ್ಗೂಡಿಸಿ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.
ಸಂವಾದದಲ್ಲಿ ಗಿರಿಜನ ಮಕ್ಕಳು ತಮ್ಮಲ್ಲಿರುವ ಕಥೆ ಹೇಳುವ ಕೌಶಲ, ಪರಿಸರ ಸಂರಕ್ಷಣೆ ಕುರಿತ ಕಾಳಜಿಯನ್ನು ಸಹಪಾಠಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಕಾಳಜಿ ವ್ಯಕ್ತಪಡಿಸಿದರು. ಕಾರ್ಯಗಾರದಲ್ಲಿ 64 ಗಿರಿಜನ ವಿದ್ಯಾರ್ಥಿಗಳೊಂದಿಗೆ ಸ್ವಯಂ ಸೇವಕರಾಗಿ 10ನೇ ತರಗತಿ ವಿದ್ಯಾರ್ಥಿಗಳಾದ ದೀಪಾ. ಬಿ. ಶೆಟ್ಟಿ, ಆಯುಷ್ಕ ಡಿ. ಆಚಾರ್ಯ, ಜಗನ್ನಾಥ್ ಭಾಗವಹಿಸಿದ್ದರು.
ಕ್ರೀಡಾ ಸ್ಪರ್ಧೆ ಹಮ್ಮಿಕೊಂಡು ವಿಜೇತರಿಗೆ ಬಹುಮಾನ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ಮತ್ತು ಪರಿಶಿಷ್ಟ ಪಂಗಡ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.