
ಮೈಸೂರು: ರಾಜ್ಯ ಸಿವಿಲ್ ಸೇವೆಗಳಲ್ಲಿ ಅರಣ್ಯದ 13 ಬುಡಕಟ್ಟುಗಳಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು 2025–26ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಈ ಅವಕಾಶ ಸಂಕುಚಿತಗೊಳಿಸಿ, ‘ಸಿ’ ಮತ್ತು ‘ಡಿ’ ಗ್ರೂಪ್ ಹುದ್ದೆಗಳಿಗೆ ಮಾತ್ರವೇ ಅನ್ವಯಗೊಳಿಸಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ‘ಘೋಷಿಸಿದ್ದೊಂದು, ಅನುಷ್ಠಾನಕ್ಕೆ ತರುತ್ತಿರುವುದು ಬೇರೊಂದು’ ಎನ್ನುವಂತಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗೆ ಡಿ.9ರಂದು ಪತ್ರ ಬರೆದಿರುವ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ರಂದೀಪ್ ಡಿ. ಅವರು, ಖಾಲಿ ಇರುವ ಗ್ರೂಪ್ ‘ಸಿ’ ಹಾಗೂ ಗ್ರೂಪ್ ‘ಡಿ’ ಹುದ್ದೆಗಳ ವಿವರವನ್ನು ಕೇಳಿದ್ದಾರೆ. ಇದು ಬುಡಕಟ್ಟು ಮುಖಂಡರ ಆಕ್ಷೇಪಕ್ಕೆ ಹಾಗೂ ಅನುಮಾನಗಳಿಗೆ ಕಾರಣವಾಗಿದೆ.
‘ಎ’ಯಿಂದ ‘ಡಿ’ವರೆಗೆ ಎಲ್ಲ ಹುದ್ದೆಗಳಿಗೂ ಒಂದು ಬಾರಿ ನೇಮಕ ಮಾಡಿದರೆ ಮಾತ್ರ ನಾವು ಸಮಾಜದ ಮುಖ್ಯವಾಹಿನಿಗೆ ಬರಲು ಅನುಕೂಲ ಆಗುತ್ತದೆ. ಇಲ್ಲದಿದ್ದರೆ ಅನ್ಯಾಯ ಆಗುತ್ತದೆ’ ಎಂದು ದೂರು ವ್ಯಕ್ತವಾಗಿದೆ.
ಅಂಚಿನಲ್ಲಿರುವವರಿಗಾಗಿ:
‘ಸರ್ಕಾರವು, ಸಮಾಜದ ಅಂಚಿನಲ್ಲಿರುವವರನ್ನು ಮೇಲೆತ್ತುವ ನಿಟ್ಟಿನಲ್ಲಿ ಐತಿಹಾಸಿಕ ಘೋಷಣೆ ಮಾಡಿದೆ. ಆದರೆ, ಇದನ್ನು ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹೇಗಾದರೂ ಈ ಯೋಜನೆ ಕಾರ್ಯಗತಗೊಳ್ಳದಂತೆ ತಡೆಯಲು ಗೊಂದಲಗಳನ್ನು ಸೃಷ್ಟಿಸುತ್ತಿವೆ. ಕಾಡುವಾಸಿಗಳು ಅಭಿವೃದ್ಧಿ ಹೊಂದಬಾರದು ಎಂಬ ದುರುದ್ದೇಶದಿಂದ ಕೇವಲ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಮಾತ್ರವೇ ಈ ಯೋಜನೆ ಜಾರಿಗೆ ಮುಂದಾಗಿ ಅನ್ಯಾಯ ಎಸಗಲಾಗುತ್ತಿದೆ’ ಎಂಬ ಆರೋಪ ಮುಖಂಡರಿಂದ ಕೇಳಿಬಂದಿದೆ.
ರಾಜ್ಯದಲ್ಲಿರುವ ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುತ್ತಿರುವ 13 ಬುಡಕಟ್ಟುಗಳಾದ ಜೇನುಕುರುಬ, ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಸಿದ್ದಿ, ಬೆಟ್ಟಕುರುಬ, ಕಾಡುಕುರುಬ, ಕುಡಿಯ ಮತ್ತು ಮಲೆಕುಡಿಯ–ಈ ಜಾತಿಯವರಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ, ಕೊಡಗು, ರಾಮನಗರ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟುಗಳವರನ್ನು ವಿಶೇಷ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ.
ಮೂಲ ಆದಿವಾಸಿಗಳಲ್ಲಿ ಪಿಎಚ್‌ಡಿ, ಎಂ.ಎ, ಎಂ.ಕಾಂ., ಎಂ.ಎಸ್.ಡಬ್ಲ್ಯು ಮೊದಲಾದ ಉನ್ನತ ಶಿಕ್ಷಣ ಪಡೆದಿದ್ದರೂ ವಿದ್ಯಾರ್ಹತೆಗೆ ತಕ್ಕ ಉದ್ಯೋಗವಿಲ್ಲದೆ ಅತಂತ್ರಗೊಂಡಿರುವವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಹಕ್ಕೊತ್ತಾಯ ಅವರದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.