
ಕೆ.ಆರ್.ನಗರ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಿವಂಗತ ಅರ್ಜುನಹಳ್ಳಿ ರಾಜಯ್ಯ ಅವರು ಸರಳ ಸಜ್ಜನಿಕೆಯ ರಾಜಕಾರಿಣಿಯಾಗಿದ್ದರು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್ ಕುಮಾರ್ ಹೇಳಿದರು.
ತಾಲ್ಲೂಕಿನ ಅರ್ಜುನಹಳ್ಳಿಯಲ್ಲಿ ಭಾನುವಾರ ನಡೆದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅರ್ಜುನಹಳ್ಳಿ ರಾಜಯ್ಯ ಮತ್ತು ಅವರ ಪತ್ನಿ ಗೌರಮ್ಮ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದಲಿತ ಚಳವಳಿ ಮೂಲಕ ಬೆಳೆದು ಬಂದಿದ್ದ ರಾಜಯ್ಯ ಅವರು, ಎಲ್ಲ ವರ್ಗದವರೊಂದಿಗೆ ಬೆರೆಯುತ್ತಿದ್ದರು, ಅವರ ನಡವಳಿಕೆ ಜನ ಬಹಳಷ್ಟು ಇಷ್ಟಪಡುತ್ತಿದ್ದರು. ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ದಿವಂಗತ ವಿ.ಶ್ರೀನಿವಾಸ್ ಪ್ರಸಾದ್ ಅವರ ಗರಡಿಯಲ್ಲಿ ಬೆಳೆದು ಜನಪರ ಆಡಳಿತ ನೀಡಿ ಜನಮನ್ನಣೆ ಗಳಿಸಿದ್ದರು’ ಎಂದರು.
ಶಾಸಕ.ಡಿ.ರವಿಶಂಕರ್ ಮಾತನಾಡಿ, ‘ದಿ.ರಾಜಯ್ಯ ಅವರು ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿಯಾಗಿದ್ದರು. ಅವರ ಪುತ್ರ ಎ.ಆರ್.ಕಾಂತರಾಜ್ ಅವರಿಗೆ ಪಕ್ಷದ ಜವಾಬ್ದಾರಿ ಕೊಡಲಾಗುತ್ತದೆ’ ಎಂದು ಭರವಸೆ ನೀಡಿದರು.
‘ಅರ್ಜುನಹಳ್ಳಿ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ರಸ್ತೆ ಅಥವಾ ವೃತ್ತಕ್ಕೆ ಅರ್ಜುನಹಳ್ಳಿ ರಾಜಯ್ಯ ಹಾಗೂ ಗೌರಮ್ಮ ಅವರ ಹೆಸರನ್ನು ನಾಮಕರಣ ಮಾಡಲಾಗುವುದು’ ಎಂದು ಹೇಳಿದರು.
ಮುಖಂಡ ಹನಸೋಗೆ ನಾಗರಾಜ್ ಮಾತನಾಡಿದರು. ಕಾಂಗ್ರೆಸ್ ಸಮಿತಿ ಸದಸ್ಯ ಸಿ.ಪಿ. ರಮೇಶ್, ಮಾಜಿ ಮೇಯರ್ ಪುರುಷೋತ್ತಮ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದಪ್ಪ, ಮಾಜಿ ಸದಸ್ಯ ಮಾರ್ಚಹಳ್ಳಿ ಶಿವರಾಂ, ಮುಖಂಡರಾದ ಹೆಬ್ಬಾಳು ವೇಣು, ಕುರುಬರ ಸಂಘದ ಅಧ್ಯಕ್ಷ ಚೀರನಹಳ್ಳಿ ಶಿವಣ್ಣ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಸಿದ್ದೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯ್ ಶಂಕರ್, ವಕ್ತಾರ ಸಯ್ಯದ್ ಜಾಬೀರ್, ರಕ್ಷಾ ಸಮಿತಿ ಸದಸ್ಯ ಅರ್ಜುನಹಳ್ಳಿ ಮಧುಕುಮಾರ್, ಲಾಲನಹಳ್ಳಿ ರವಿಕುಮಾರ್, ಕಳ್ಳಿ ಮುದ್ದನಹಳ್ಳಿ ಚಂದ್ರು, ರಾಜಯ್ಯ, ನಂಜಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.