
ಸುತ್ತೂರು (ಮೈಸೂರು ಜಿಲ್ಲೆ): ‘ಇಲ್ಲಿ ಜ.15ರಿಂದ 20ವರೆರೆಗೆ ನಡೆಯಲಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ತ್ರಿಕಾಲ ಪ್ರಸಾದದ ವ್ಯವಸ್ಥೆ ಇರಲಿದೆ’ ಎಂದು ದಾಸೋಹ ಸಮಿತಿಯ ಸಂಚಾಲಕ ಪ್ರೊ.ಸುಬ್ಬಪ್ಪ ತಿಳಿಸಿದರು.
‘ಹೋದ ವರ್ಷ 20 ಲಕ್ಷ ಮಂದಿಗೆ ಪ್ರಸಾದ ನೀಡಲಾಗಿತ್ತು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಆಶಯದಂತೆ ಈ ಬಾರಿಯೂ ದಿನದ ಮೂರು ಹೊತ್ತೂ ಪ್ರಸಾದ ಇರಲಿದೆ. ಈ ಬಾರಿ 25 ಲಕ್ಷಕೂ ಹೆಚ್ಚಿನ ಮಂದಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದ್ದು, ಅದಕ್ಕೆ ತಕ್ಕಂತೆ ದಸವ–ಧಾನ್ಯಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಇಲ್ಲಿ ಸೋಮವಾರ ಮಾಹಿತಿ ನೀಡಿದರು.
‘ಒಂದು ಸಾವಿರ ಕ್ವಿಂಟಲ್ ಅಕ್ಕಿಯನ್ನು ರಾಯಚೂರಿನಿಂದ ತರಿಸಲಾಗಿದೆ (ಎರಡು ವರ್ಷ ಹಳೆಯದು), 250 ಕ್ವಿಂಟಲ್ ತೊಗರಿಬೇಳೆ, 1,600 ಕ್ಯಾನ್ ಅಡುಗೆ ಎಣ್ಣೆ, 20 ಟನ್ ಬೆಲ್ಲ, 3,500 ಕೆ.ಜಿ. ಖಾರದಪುಡಿ, 160 ಕ್ವಿಂಟಲ್ ಕಡ್ಲೆಹಿಟ್ಟು, 200 ಕ್ವಿಂಟಲ್ ಸಕ್ಕರೆ, 600 ಕೆ.ಜಿ. ನಂದಿನಿ ತುಪ್ಪ, ತಲಾ 750 ಕೆ.ಜಿ. ದ್ರಾಕ್ಷಿ ಹಾಗೂ ಗೋಡಂಬಿ, 9 ಸಾವಿರ ಲೀಟರ್ ಹಾಲು, 28ಸಾವಿರ ಲೀಟರ್ ಮೊಸರು, 25 ಸಾವಿರ ತೆಂಗಿನಕಾಯಿ ಸಂಗ್ರಹಿಸಲಾಗಿದೆ. 5 ಸಾವಿರ ಕೆ.ಜಿ. ಉಪ್ಪಿನಕಾಯಿ ಬಳಸಲಾಗುವುದು. ಈವರೆಗೆ 10 ಲಕ್ಷ ಲಡ್ಡು ಹಾಗೂ ಮೈಸೂರು ಪಾಕ್ ಸಿದ್ಧಪಡಿಸಲಾಗಿದೆ. ಸಿಹಿ ಬೂಂದಿ ಹಾಗೂ ಖಾರ ಬೂಂದಿ ಬಡಿಸಲಾಗುವುದು. ಮೂರು ಅವಧಿಗೂ ಸಿಹಿ ಇರಲಿದೆ. ಪಾಯಸ ಕೊಡಲಾಗುವುದು’ ಎಂದು ತಿಳಿಸಿದರು.
‘ವಿವಿಧ ಮಾರುಕಟ್ಟೆಗಳಿಂದ ದಾನಿಗಳು, ರೈತರು ತರಕಾರಿಗಳನ್ನು ಉಚಿತವಾಗಿ ನಿತ್ಯವೂ ತಂದುಕೊಡುತ್ತಾರೆ. ನಾವೂ ಖರೀದಿಸುತ್ತೇವೆ. 5 ಸಾವಿರ ಮಂದಿ ಬಾಣಸಿಗರು ಕೆಲಸ ಮಾಡಲಿದ್ದಾರೆ. ಜೆಎಸ್‌ಎಸ್ ಸಂಸ್ಥೆಯ 5 ಸಾವಿರ ಸ್ವಯಂ ಸೇವಕರೊಂದಿಗೆ 5 ಸಾವಿರ ಮಂದಿ ವಿವಿಧ ಗ್ರಾಮಗಳ ಭಕ್ತರು ಪ್ರಸಾದ ಬಡಿಸುವುದಕ್ಕೆ ಸಹಕಾರ ನೀಡಲಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.