ADVERTISEMENT

ಸಮಾಜಮುಖಿ ಕಾರ್ಯ| ಸಂಸ್ಥೆಗಳಿಗೆ ಸಲಹೆ: ಡಾ.ಡಿ. ತಿಮ್ಮಯ್ಯ

ವಿಧಾನ‍ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಆಶಯ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 12:59 IST
Last Updated 26 ಮಾರ್ಚ್ 2023, 12:59 IST
ಮೈಸೂರಿನಲ್ಲಿ ಕಲ್ಪತರು ಚಾರಿಟಬಲ್ ಟ್ರಸ್ಟ್‌ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಭಾನುವಾರ ನೆರವೇರಿಸಿದರು/ ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ಕಲ್ಪತರು ಚಾರಿಟಬಲ್ ಟ್ರಸ್ಟ್‌ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಭಾನುವಾರ ನೆರವೇರಿಸಿದರು/ ಪ್ರಜಾವಾಣಿ ಚಿತ್ರ   

ಮೈಸೂರು: ‘ಸಂಘ–ಸಂಸ್ಥೆಗಳು, ಟ್ರಸ್ಟ್‌ಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಆಶಯ ವ್ಯಕ್ತಪಡಿಸಿದರು.

ಇಲ್ಲಿನ ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆ ಸಭಾಂಗಣದಲ್ಲಿ ಭಾನುವಾರ ಕಲ್ಪತರು ಚಾರಿಟಬಲ್ ಟ್ರಸ್ಟ್‌ನ ಮತ್ತು ಎಚ್.ಡಿ.ಕೋಟೆ ತಾಲ್ಲೂಕು ಆನೆಮಾಳ ಹಾಡಿ ಸರ್ಕಾರಿ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವುಗಳನ್ನು ಅಭಿವೃದ್ಧಿಪಡಿಸಬೇಕು’ ಎಂದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್. ಶಿವರಾಮು ಮಾತನಾಡಿ, ‘ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳು ವಾಸಿಸುವ ಹಾಡಿಗಳಲ್ಲಿ ಇರುವ ಸರ್ಕಾರಿ ಶಾಲೆಗಳು ಮೂಲಸೌಕರ್ಯದಿಂದ ವಂಚಿತವಾಗಿವೆ. ಆದಿವಾಸಿಗಳು ವಾಸಿಸುವ ಹಾಡಿಗಳು ಮೂಲ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ನೈರ್ಮಲ್ಯ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಗಳನ್ನು ಆದಿವಾಸಿಗಳು ಎದುರಿಸುತ್ತಿದ್ದಾರೆ’ ಎಂದು ಹೇಳಿದರು.

ಎಚ್.ಡಿ.ಕೋಟೆ ಬಿಇಒ ಎಂ. ಉದಯಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆ ಇದೆ. ಆದಿವಾಸಿಗಳು ವಾಸಿಸುವ ಹಾಡಿಗಳಲ್ಲಿ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿವೆ. ಅವುಗಳನ್ನು ದುರಸ್ತಿ ಮಾಡಲು ಮತ್ತು ಕೆಲವು ಕಡೆ ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಹಾಗಾಗಿ ಶಾಲಾ ಕೊಠಡಿಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

ಎಚ್.ಡಿ.ಕೋಟೆ ತಾಲ್ಲೂಕು ಆನೆಮಾಳ ಹಾಡಿಯ ಮುಖಂಡ ರಾಜು ಮಾತನಾಡಿ, ‘ಆದಿವಾಸಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಇದುವರೆಗೂ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ. ಹಾಡಿಗಳಲ್ಲಿರುವ ಸರ್ಕಾರಿ ಶಾಲೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಶಾಲೆಗಳಿಗೆ ಆಟದ ಮೈದಾನ, ಶೌಚಾಲಯ ಸೇರಿದಂತೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಆದಿವಾಸಿಗಳು ವಾಸಿಸುವ ಪ್ರದೇಶಗಳಲ್ಲಿ ಶಾಲೆ, ಅಂಗನವಾಡಿ, ಆಸ್ಪತ್ರೆ ಮತ್ತು ಸಮುಧಾಯ ಭವನಗಳನ್ನು ನಿರ್ಮಿಸಬಹುದೆಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಅರಣ್ಯ ಇಲಾಖೆ ಸಕಾರಣವಿಲ್ಲದೆ ಇಂತಹ ಕೆಲಸಗಳಿಗೆ ಅಡ್ಡಿಪಡಿಸುತ್ತಿದೆ. ಕೆಲವು ಸರ್ಕಾರಿ ಶಾಲೆಗಳನ್ನು ಎತ್ತಂಗಡಿ ಮಾಡುವ ಹುನ್ನಾರಗಳು ನಡೆಯುತ್ತಿವೆ’ ಎಂದು ಆರೋಪಿಸಿದರು.

ಸಾಮಾಜಿಕ ಕಾರ್ಯಕರ್ತ ಜೀವಿಕ ಉಮೇಶ್ ಮಾತನಾಡಿ, ‘ಎಚ್‌.ಡಿ. ಕೋಟೆ ಮತ್ತು ಸರಗೂರು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಆದಿವಾಸಿಗಳು ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಮತ್ತು ಟ್ರಸ್ಟ್‌ಗಳು ಸಹಾಯ ಮಾಡಬೇಕು’ ಎಂದು ಕೋರಿದರು.

ಕಲ್ಪತರು ಚಾರಿಟಲ್ ಟ್ರಸ್ ಅಧ್ಯಕ್ಷ ಡಾ.ಅಮ್ಮಸಂದ್ರ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯ ಅತಿಥಿಯಾಗಿದ್ದರು.

ಟ್ರಸ್ಟ್ ಉಪಾಧ್ಯಕ್ಷ ಪಿ.ಕುಮಾರ್, ಕಾರ್ಯದರ್ಶಿ ಜಗದೀಶ್, ಸಹ ಕಾರ್ಯದರ್ಶಿ ಕೆಂಡಗಣ್ಣ, ಸಂಘಟನಾ ಕಾರ್ಯದರ್ಶಿ ಮಹಿಮಾ ಶ್ರೀನಿವಾಸ್, ಖಜಾಂಚಿ ಪುರುಷೋತ್ತಮ, ಧರ್ಮದರ್ಶಿಗಳಾದ ಲಕ್ಷ್ಮೀಕಾಂತ್, ಜಿ.ಟಿ. ನವೀನ್‌ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಪಾಲನೇತ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.