
ಹುಣಸೂರು: ನೇರಳಕುಪ್ಪೆ ಪಂಚಾಯಿತಿ ನೇಗತ್ತೂರು ಗ್ರಾಮದ ಸೈಯದ್ ಪೀರ್ ಅವರ ಹೊಲದಲ್ಲಿ ಮಂಗಳವಾರ ಮಧ್ಯಾಹ್ನ ಎರಡು ಹುಲಿಗಳು ಜಾನುವಾರಿನ ಮೇಲೆ ದಾಳಿ ನಡೆಸಿ ಅರಣ್ಯಕ್ಕೆ ಹಿಂದಿರುಗಿವೆ.
ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ನೇಗತ್ತೂರು ಗ್ರಾಮದಲ್ಲಿ ಮೂರು ತಿಂಗಳ ನಂತರ ಗದ್ದೆ ಬಯಲಿನಲ್ಲಿ ಹುಲಿಗಳು ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ ಎಂದು ಸ್ಥಳೀಯರಾದ ನೇಗತ್ತೂರು ಲೋಕೇಶ್ ತಿಳಿಸಿದ್ದಾರೆ.
ಸೈಯದ್ ಪೀರ್ ಅವರು ಹೊಲದಲ್ಲಿ ಉಕ್ಕೆ ಕೆಲಸ ಮಾಡುವಾಗ ಹುಲಿಗಳು ಜಾನುವಾರಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿವೆ ಎಂದು ತಿಳಿಸಿದ್ದಾರೆ.
‘ಹುಲಿ ದಾಳಿಗೆ ಒಳಗಾದ ಜಾನುವಾರಿಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ. ಅರಣ್ಯದಂಚಿನಲ್ಲಿ 4 ಕ್ಯಾಮೆರಾ ಅಳವಡಿಸಿದ್ದು, ಹುಲಿ ಚಲನವಲನ ಆಧರಿಸಿ ಸೆರೆ ಹಿಡಿಯಲು ಕ್ರಮ ವಹಿಸುತ್ತೇವೆ’ ಎಂದು ನಾಗರಹೊಳೆ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಮ್ಮಿಗೆ ಗ್ರಾಮದಲ್ಲಿ 10 ದಿನಗಳಿಂದ ಆನೆ ಮತ್ತು ಥರ್ಮಲ್ ಡ್ರೋನ್ ಬಳಸಿ ನಿರಂತರವಾಗಿ ಕೂಂಬಿಂಗ್ ನಡೆದಿದೆ. ಹೆಜ್ಜೆ ಪತ್ತೆ ಆಗುತ್ತಿದ್ದು, ಹುಲಿ ಕಾಣಿಸಿಕೊಂಡಿಲ್ಲ. ಕಾರ್ಯಾಚರಣೆಗೆ ಸ್ಥಳೀಯರು ಸಹಕರಿಸಿದ್ದಾರೆ’ ಎಂದು ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.