
ಮೈಸೂರು: ‘ಮಕ್ಕಳ ಬಗ್ಗೆ ಸಮಾಜದ ದೃಷ್ಟಿಕೋನ ಹಾಗೂ ಆದ್ಯತೆಗಳು ಬದಲಾಗಬೇಕಿದೆ’ ಎಂದು ಯುನಿಸೆಫ್ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಸ್ಥ ಡಾ. ಜೆಲಾಲೆಂ ಟಫೆಸ್ಸಿ ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಮೈಸೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಯುನಿಸೆಫ್ ಸಹಭಾಗಿತ್ವದಲ್ಲಿ ಮೈಸೂರು ವಿಭಾಗದ ಪತ್ರಕರ್ತರಿಗಾಗಿ ಆಯೋಜಿಸಿದ್ದ ‘ಹದಿಹರೆಯದವರ ಆರೋಗ್ಯ, ಪೌಷ್ಟಿಕತೆ: ಸಾಂಕ್ರಾಮಿಕವಲ್ಲದ ಕಾಯಿಲೆ ಮತ್ತು ರಸ್ತೆ ಸುರಕ್ಷತೆ’ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದಲ್ಲಿ ಪ್ರತಿ ಮೂವರಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ. ಗ್ರಾಮೀಣರಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿದೆ. ಮಕ್ಕಳಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಜಂಕ್ ಫುಡ್ ಸೇವನೆ ಹೆಚ್ಚಿದ್ದು, ಮಕ್ಕಳು ಚಿಕ್ಕ ವಯಸ್ಸಿಗೆ ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಅಸ್ತಮಾ, ಕಿಡ್ನಿ ಸಮಸ್ಯೆ ಹೆಚ್ಚು ಬಾಧಿಸುತ್ತಿದೆ. ಜೀವನ ಪದ್ಧತಿ ಬದಲಾವಣೆ, ವ್ಯಾಯಾಮ ಹಾಗೂ ಚಟುವಟಿಕೆ ಇಲ್ಲದ ಬದುಕು ನಡೆಸುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ’ ಎಂದು ವಿವರಿಸಿದರು.
‘ಪೋಷಕರು ಮಕ್ಕಳ ಬದುಕು ಮತ್ತು ಆರೋಗ್ಯದ ಕಾಳಜಿ ವಹಿಸಬೇಕು. ಪ್ರಾಥಮಿಕ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಬೇಕು’ ಎಂದು ಸಲಹೆ ನೀಡಿದರು.
‘ದೇಶದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವಿನ ಕೊರತೆ ಇದೆ. ಇದರಿಂದ ಅಪಘಾತಗಳು ಹೆಚ್ಚುತ್ತಲೇ ಇವೆ. ಕಠಿಣ ಕಾನೂನುಗಳ ಜೊತೆಗೆ ಸಾರ್ವಜನಿಕ ಜಾಗೃತಿಗಾಗಿ ವಿಶ್ವವಿದ್ಯಾಲಯಗಳು ಹಾಗೂ ಮಾಧ್ಯಮಗಳು ಕೈ ಜೋಡಿಸಬೇಕು’ ಎಂದು ಕೋರಿದರು.
ಮೈಸೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ. ಎನ್. ನಾಗರಾಜ್, ‘ಎಷ್ಟೋ ಮನೆಗಳಲ್ಲಿ ಪೋಷಕರಿಬ್ಬರು ಹೊರಗಡೆ ದುಡಿಯುತ್ತಿದ್ದು, ಇದರಿಂದ ಮಕ್ಕಳು ಜಂಕ್ ಆಹಾರದ ಮೊರೆ ಹೋಗುತ್ತಿದ್ದಾರೆ. ಇದರಿಂದ ಮಕ್ಕಳು ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸಬೇಕಾಗಬಹುದು’ ಎಂದು ಎಚ್ಚರಿಸಿದರು.
‘ಮಕ್ಕಳ ವಿಚಾರದಲ್ಲಿ ಮಾಧ್ಯಮಗಳು ಹೆಚ್ಚು ಜವಾಬ್ದಾರಿಯುತವಾಗಿ ಬರೆಯಬೇಕು. ಅಪೌಷ್ಟಿಕತೆ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹದಂತಹ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ.ಎನ್. ಮಮತಾ, ಪ್ರಾಧ್ಯಾಪಕರಾದ ಪ್ರೊ. ಎಂ.ಎಸ್. ಸಪ್ನಾ, ಪ್ರೊ. ಸಿ.ಕೆ. ಪುಟ್ಟಸ್ವಾಮಿ, ಯುನಿಸೆಫ್ ಪ್ರತಿನಿಧಿ ಪ್ರೊಸುನ್ ಸೇನ್ ಪಾಲ್ಗೊಂಡಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ವಾಸುದೇವ ಶರ್ಮ, ಡಾ. ಶ್ರೀಧರ್ ಪ್ರಹ್ಲಾದ್ ರೇವಂಕಿ ಉಪನ್ಯಾಸ ನೀಡಿದರು.
ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಜಿಲ್ಲೆಗಳ ಆಯ್ದ ಪತ್ರಕರ್ತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.
‘ಮಕ್ಕಳ ಹಕ್ಕಗಳ ರಕ್ಷಣೆಗಾಗಿ ರಾಜ್ಯದಲ್ಲಿ ಹತ್ತು ಹಲವು ಕಾನೂನುಗಳು ಜಾರಿಯಲ್ಲಿದ್ದು ಅವುಗಳ ಕುರಿತು ಹೆಚ್ಚಿನ ಅರಿವು ಹಾಗೂ ಪರಿಣಾಮಕಾರಿ ಅನುಷ್ಠಾನದ ಅಗತ್ಯ ಇದೆ’ ಎಂದು ಕರ್ನಾಟಕ ಮಕ್ಕಳ ಹಕ್ಕುಗಳ ವೀಕ್ಷಣಾಲಯದ ರಾಜ್ಯ ಸಂಚಾಲಕ ಎನ್.ವಿ. ವಾಸುದೇವ ಶರ್ಮ ಹೇಳಿದರು. ‘ಮಕ್ಕಳ ಹಕ್ಕುಗಳ ಚೌಕಟ್ಟು ಮತ್ತು ಕಾನೂನುಗಳು: ಅಳವಡಿಕೆ ಮತ್ತು ಜಾರಿ’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
‘ಮಕ್ಕಳ ಬಾಲ್ಯವನ್ನು ಕಸಿಯುವ ಶೋಷಿಸುವ ಚಟುವಟಿಕೆಗಳ ವಿರುದ್ಧ ಕಾನೂನಾತ್ಮಕ ರಕ್ಷಣೆ ಇದೆ. ಈಚೆಗೆ ರಾಜ್ಯ ಸರ್ಕಾರ ಅಪ್ರಾಪ್ತರ ವಿವಾಹ ನಿಶ್ಚಿತಾರ್ಥವನ್ನು ನಿಷೇಧಿಸಿರುವುದು ಒಳ್ಳೆಯ ಬೆಳವಣಿಗೆ. ಮಾಧ್ಯಮಗಳು ಪೋಕ್ಸೊದಂತಹ ಪ್ರಕರಣಗಳ ವರದಿ ಮಾಡುವಾಗ ಎಲ್ಲಿಯೂ ಸಂತ್ರಸ್ತರ ಗುರುತು ಬಹಿರಂಗವಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸಲಹೆ ನೀಡಿದರು.
ಯುನಿಸೆಫ್ ಪ್ರತಿನಿಧಿ ಡಾ. ಶ್ರೀಧರ್ ಪ್ರಹ್ಲಾದ್ ರೇವಂಕಿ ‘ಮೈಸೂರು ಚಾಮರಾಜನಗರ ಕೊಡಗು ಭಾಗದ ಬುಡಕಟ್ಟು ಸಮುದಾಯಗಳಲ್ಲಿ ಸಿಕಲ್‌ಸೆಲ್ ಕಾಯಿಲೆ ಹೆಚ್ಚಿದ್ದು ಅನುವಂಶೀಯವಾಗಿ ಬರುವ ಈ ತೊಂದರೆ ವಿರುದ್ಧ ಮಾಧ್ಯಮಗಳು ಇನ್ನಷ್ಟು ಜಾಗೃತಿ ಮೂಡಿಸಬೇಕು. ಈ ಬಗೆಗಿನ ತಪ್ಪುಕಲ್ಪನೆಗಳನ್ನು ಹೋಗಲಾಡಿಸಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.