ಮೈಸೂರು: ‘ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ‘ಏಕತಾಮಾಲ್’ (ಯೂನಿಟಿ ಮಾಲ್) ನಿರ್ಮಾಣ ಮಾಡಲಾಗುತ್ತಿದೆ’ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
‘₹ 193 ಕೋಟಿ ಮೊತ್ತದ ಯೋಜನೆ ಇದಾಗಿದೆ. 6.5 ಎಕರೆಯಲ್ಲಿ ಕೆಎಸ್‌ಐಡಿಸಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಗೆ ಮೈಸೂರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಚಾರ. ದೇಶದ ಏಕತೆಗಾಗಿ, ವೈವಿಧ್ಯವನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯದ ಪ್ರತಿ ಜಿಲ್ಲೆಯ ಉತ್ಪನ್ನಗಳನ್ನೂ ಪ್ರೋತ್ಸಾಹಿಸುವುದು ಹಾಗೂ ಮಾರುಕಟ್ಟೆ ಕಲ್ಪಿಸುವುದು ಯೋಜನೆಯ ಉದ್ದೇಶವಾಗಿದೆ’ ಎಂದರು.
‘ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮೈಸೂರು ಮಾದರಿಯಾಗಿದೆ. ಮೈಸೂರು ಸ್ಯಾಂಡಲ್‌ಸೋಪ್, ಮೈಸೂರು ಸಿಲ್ಕ್ ಮೊದಲಾದವುಗಳಿಗೆ ಉತ್ತೇಜನ ದೊರೆತಿದೆ. ಇದೇ ಮಾದರಿಯಲ್ಲಿ ಇಡೀ ಭಾರತದಲ್ಲಿ ಇರುವ ಅನೇಕ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿಯೇ ಏಕತಾಮಾಲ್ ನಿರ್ಮಾಣ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.
ಪ್ರತಿ ಜಿಲ್ಲೆಯ ಉತ್ಪನ್ನಕ್ಕೂ ಪ್ರೋತ್ಸಾಹ: ‘ಇಲ್ಲಿ ಪ್ರತಿ ಜಿಲ್ಲೆಯ ಒಂದು ವಿಶೇಷ ಉತ್ಪನ್ನಕ್ಕೆ ವಿಶೇಷವಾದ ಪ್ರೋತ್ಸಾಹ ಸಿಗುತ್ತದೆ. ಗ್ರಾಮೀಣ ಕಲಾವಿದರಿಗೆ ಅವಕಾಶವಿರುತ್ತದೆ. ಮೈಸೂರು-ಕೊಡಗು ಜಿಲ್ಲೆಯಲ್ಲಿ ಪ್ರವಾಸ ಮಾಡುವಾಗ ಒಂದೊಂದು ಊರಿನಲ್ಲೂ ಅನನ್ಯವಾದ ಕಲೆ ಇರುವುದನ್ನು ಗಮನಿಸಿದ್ದೇನೆ. ಹೀಗಾಗಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಬೆಂಬಲ ನೀಡಲಾಗುವುದು’ ಎಂದು ತಿಳಿಸಿದರು.
‘ಈ ಮಾಲ್ ನಿರ್ಮಾಣದಿಂದ ಮೈಸೂರು ಪ್ರವಾಸೋದ್ಯಮ ಉತ್ತೇಜಿಸುವ ಜೊತೆಗೆ ಉದ್ಯೋಗಗಳೂ ಸೃಷ್ಟಿಯಾಗಲಿವೆ. ತಮಿಳುನಾಡು, ಗುಜರಾತ್ ಸೇರಿದಂತೆ ಪ್ರತಿ ರಾಜ್ಯದಲ್ಲೂ ಈ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಮೈಸೂರಿನಲ್ಲಿ ವಿಶೇಷವಾಗಿ ಕುಸ್ತಿಗೆ ದೊಡ್ಡ ಪರಂಪರೆ ಇದೆ. ಹೀಗಾಗಿ ಕುಸ್ತಿಯನ್ನೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಮಾದರಿಯಲ್ಲಿ ಕುಸ್ತಿ ಕಾಂಪ್ಲೆಕ್ಸ್ ಕೂಡ ನಿರ್ಮಿಸಲಾಗುವುದು’ ಎಂದು ಹೇಳಿದರು.
‘ಹಸಿರು ಹೊದಿಕೆ ಕಡಿಮೆ ಆಗಬಾರದೆಂಬ ಕಾರಣದಿಂದ ಮರಗಳನ್ನು ಉಳಿಸಿಕೊಂಡೇ ಅಭಿವೃದ್ಧಿ ಮಾಡಲಾಗುತ್ತಿದೆ. ಕೆಲವು ಮರಗಳನ್ನು ಸ್ಥಳಾಂತರಿಸಲು ಎನ್‌ಜಿಒಗಳೊಂದಿಗೆ ಚರ್ಚಿಸಲಾಗುತ್ತಿದೆ. ನಗರದ ಪಾರಂಪರಿಕ ಕಟ್ಟಡಗಳ ಮಾದರಿಯಲ್ಲಿಯೇ ಮಾಲ್ ನಿರ್ಮಾಣಗೊಳ್ಳಲಿದೆ. ಈ ಯೋಜನೆಯು 2027ರೊಳಗೆ ಪೂರ್ಣಗೊಳ್ಳುವ ವಿಶ್ವಾಸವಿದೆ. 99 ಮಳಿಗೆಗಳು ಇರಲಿವೆ. ಫುಡ್‌ಪಾರ್ಕ್ ಕೂಡ ಒಳಗೊಂಡಿರಲಿದೆ. ಪ್ರವೇಶ ಉಚಿತ ಇರಲಿದ್ದು, ವಾಹನಗಳ ನಿಲುಗಡೆ ಶುಕ್ಕವನ್ನು ಮಾತ್ರ ಪಡೆದುಕೊಳ್ಳಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಎಂಜಿನಿಯರ್‌ಗಳಾದ ಹೇಮಂತ್ ಕುಮಾರ್, ಕಲೀಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.