ADVERTISEMENT

ಸಂಗೀತ ವಿವಿ: ಚಿನ್ನದ ಬೆಳಕಲ್ಲಿ ಹೊಳೆದ ಪ್ರತಿಭೆಗಳು

ಬೈಕ್‌ ಟ್ಯಾಕ್ಸಿ ಓಡಿಸುತ್ತಲೇ ಸಾಧನೆ; ಕೃಷಿ ಕಾರ್ಮಿಕನ ಮಗನಿಗೂ ಬಂಗಾರ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 2:36 IST
Last Updated 9 ನವೆಂಬರ್ 2025, 2:36 IST
ಚಿನ್ನದ ಪದಕದೊಂದಿಗೆ ವಿ. ಲತಾ (5), ಎ. ಶ್ರಾವ್ಯ (6), ಪಿ. ಪುನೀತಾ (5), ಡಿ.ಎನ್. ಇಂದ್ರಕುಮಾರ್ (3), ಎಂ. ಸಂಜಯ್ (2), ಎಸ್. ಶ್ರೀಕಾಂತ್, ಎಂ.ಬಿ. ಸುಜನಾ (1) ಹಾಗೂ ಸಿ. ನಂಜುಂಡ ಸ್ವಾಮಿ (1) – ಪ್ರಜಾವಾಣಿ ಚಿತ್ರ
ಚಿನ್ನದ ಪದಕದೊಂದಿಗೆ ವಿ. ಲತಾ (5), ಎ. ಶ್ರಾವ್ಯ (6), ಪಿ. ಪುನೀತಾ (5), ಡಿ.ಎನ್. ಇಂದ್ರಕುಮಾರ್ (3), ಎಂ. ಸಂಜಯ್ (2), ಎಸ್. ಶ್ರೀಕಾಂತ್, ಎಂ.ಬಿ. ಸುಜನಾ (1) ಹಾಗೂ ಸಿ. ನಂಜುಂಡ ಸ್ವಾಮಿ (1) – ಪ್ರಜಾವಾಣಿ ಚಿತ್ರ   

music gold medal winners

ಮೈಸೂರು: ಕೃಷಿ ಕಾರ್ಮಿಕ ದಂಪತಿಯ ಮಗನಾಗಿ ಹಿಂದೂಸ್ಥಾನಿ ಸಂಗೀತದಲ್ಲಿ ಬಂಗಾರದಂತ ಸಾಧನೆ, ಬೈಕ್‌ ಟ್ಯಾಕ್ಸಿಯಂತಹ ಅರೆಕಾಲಿಕ ಕೆಲಸ ಮಾಡಿಕೊಂಡು ‘ಚಿನ್ನ’ಕ್ಕೆ ಮುತ್ತಿಟ್ಟ ಯುವಕ, ಸಂಗೀತ ಸಾಧನೆಗೆ ಪ್ರೇರಣೆಯಾದ ರೇಡಿಯೊ...

ಶನಿವಾರ ನಡೆದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವದಲ್ಲಿ ಬಂಗಾರದ ಪದಕ ಕೊರಳಿಗೆ ಏರಿಸಿಕೊಂಡವರಲ್ಲಿ ಬಹುತೇಕರ ಹಿಂದೆಯೂ ಒಂದೊಂದು ಸ್ಫೂರ್ತಿದಾಯಕ ಕಥೆ ಕೇಳುತ್ತಿತ್ತು.

ADVERTISEMENT

ಆರು ಬಂಗಾರ:

ಸ್ನಾತಕೋತ್ತರ ಪದವಿ (ಎಂಪಿಎ) ಭರತನಾಟ್ಯ ವಿಭಾಗದಲ್ಲಿ ಕೇರಳದ ಕಣ್ಣೂರಿನ ಎ.ಶ್ರವ್ಯಾ 6 ಚಿನ್ನದ ಪದಕದೊಂದಿಗೆ ಘಟಿಕೋತ್ಸವದಲ್ಲೇ ಅತಿ ಹೆಚ್ಚು ಬಂಗಾರ ತಮ್ಮದಾಗಿಸಿಕೊಂಡರು. ಅನ್ಯ ಭಾಷಿಕರಾಗಿದ್ದರೂ ಇಲ್ಲಿದ್ದ ಎರಡು ವರ್ಷದಲ್ಲೇ ಕನ್ನಡ ಕಲಿತಿದ್ದು, ಸ್ಪಷ್ಟವಾಗಿ ಮಾತನಾಡಿ ಗಮನವನ್ನೂ ಸೆಳೆದರು.

‘ವೈದ್ಯಕೀಯ ವಿಜ್ಞಾನದಲ್ಲಿ ಪದವಿ ಪಡೆದರೂ ಮನಸ್ಸು ಮಾತ್ರ ಭರತನಾಟ್ಯ– ಸಂಗೀತದ ಕಲೆ ವಾಲುತ್ತಿತ್ತು. ಇದೀಗ ಈ ವಿಷಯದಲ್ಲೇ ಸ್ನಾತಕೋತ್ತರ ಪದವಿ ಜೊತೆಗೆ ಬಂಗಾರ ಪಡೆದಿರುವುದು ಹೆಮ್ಮೆಯ ಕ್ಷಣ’ ಎಂದ ಶ್ರವ್ಯಾ, ಪಿಎಚ್‌ಡಿ ಮಾಡುವ ಹಂಬಲವನ್ನೂ ವ್ಯಕ್ತಪಡಿಸಿದರು.

ಕಾರ್ಮಿಕ ದಂಪತಿಯ ಮಗ:

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಪ್ರಕಾಶಪಾಳ್ಯದ ಹುಡುಗ ಎಂ.ಸಂಜಯ್ ಹಿಂದೂಸ್ಥಾನಿ ಸಂಗೀತ ಗಾಯನ ವಿಷಯದಲ್ಲಿ ಸ್ನಾತಕ ಪದವಿ ಜೊತೆಗೆ ಎರಡು ಬಂಗಾರದ ಸಾಧನೆ ಮಾಡಿದ್ದಾರೆ.

ಅವರ ತಂದೆ ಮಾದೇಶ್ ಹಾಗೂ ತಾಯಿ ಪ್ರಸಿಲ್ಲಾ ಇಬ್ಬರು ಕೃಷಿ ಕಾರ್ಮಿಕರು. ಚಾಮರಾಜನಗರದ ನವೋದಯ ಶಾಲೆಯಲ್ಲಿ ಪಿ.ಯು. ಓದುವಾಗ ರಾಹುಲ್ ಎಂಬ ಶಿಕ್ಷಕರ ಪ್ರಭಾವದಿಂದ ಸಂಗೀತದ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದು, ನಂತರ ಅದೇ ಕ್ಷೇತ್ರದಲ್ಲಿ ಪದವಿ ಪಡೆದಿದ್ದಾರೆ. ತಮ್ಮೂರಿನ ಮೊದಲ ಪದವೀಧರ ಎಂಬ ಹೆಗ್ಗಳಿಕೆಯೂ ಅವರದ್ದು.

ಗೃಹಿಣಿಯ ಸಾಧನೆ:

ಬೆಂಗಳೂರಿನ ವಿ.ಲತಾ ಸ್ನಾತಕೋತ್ತರ ಕರ್ನಾಟಕ ಸಂಗೀತ ಗಾಯನ ವಿಭಾಗದಲ್ಲಿ ಪದವಿ ಜೊತೆಗೆ 5 ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಪದವೀಧರೆಯಾಗಿರುವ ಲತಾ ಸಂಗೀತದೆಡೆಗೆ ಒಲವು ಬೆಳೆಸಿಕೊಂಡು, ಖಾಸಗಿ ಸಂಸ್ಥೆಯಲ್ಲಿನ ಉದ್ಯೋಗಕ್ಕೆ ರಾಜೀನಾಮೆ ನೀಡಿ, ನಂತರ ಕರ್ನಾಟಕ ಸಂಗೀತ ಗಾಯನದಲ್ಲಿ ಸಾಧನೆಯ ಹಾದಿ ಹಿಡಿದಿದ್ದಾರೆ. ನಿತ್ಯ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಿದ್ದು, ಶಾಸ್ತ್ರೀಯ ಸಂಗೀತದ ಕಡೆಗೆ ಅವರನ್ನು ಸೆಳೆಯುತ್ತಿದ್ದಾರೆ. ಈ ಸಾಧನೆಗೆ ಪತಿ ಹಾಗೂ ಮಕ್ಕಳ ನೆರವನ್ನೂ ನೆನೆಯುತ್ತಾರೆ.

ಅರೆಕಾಲಿಕ ಉದ್ಯೋಗ:

ಎಂಪಿಎ ಹಿಂದುಸ್ತಾನಿ ಸಂಗೀತ ವಿಷಯದಲ್ಲಿ 3 ಚಿನ್ನದ ಪದಕ ಪಡೆದ ಬಳ್ಳಾರಿಯ ಡಿ.ಎನ್.ಇಂದ್ರಕುಮಾರ್, ಸಂಗೀತ ನಿರ್ದೇಶಕನಾಗುವ ಕನಸು ಹೊತ್ತಿದ್ದಾರೆ.

ಸಂಗೀತದ ಸೆಳೆತದಿಂದಾಗಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಓದು ಅರ್ಧಕ್ಕೆ ಬಿಟ್ಟ ಅವರು, ಪೋಷಕರಿಂದ ಹೆಚ್ಚಿನ ನೆರವು ಬಯಸದೇ ಸ್ವಿಗ್ಗಿ, ರ್‍ಯಾಪಿಡೊ ದಂತಹ ಕಂಪನಿಗಳಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತ ಸಂಪಾದನೆಯಲ್ಲೇ ಓದಿಕೊಂಡಿದ್ದಾರೆ. ತಂದೆ–ತಾಯಿ ಸಹಕಾರ ನೆನೆಯುವ ಅವರು, ಇದೇ ಕ್ಷೇತ್ರದಲ್ಲಿ ಹೆಸರು ಮಾಡುವ ಹಂಬಲ ಹೊಂದಿದ್ದಾರೆ.

ಎಂಪಿಎ ನಾಟಕ ವಿಷಯದಲ್ಲಿ ಎರಡು ಚಿನ್ನದ ಪದಕ ಪಡೆದ ಎಸ್. ಶ್ರೀಕಾಂತ ಮೂಲತಃ ಬೆಂಗಳೂರಿನವರಾಗಿದ್ದು. 2017ರಿಂದ ರಂಗಾಯಣ ಸೇರಿದಂತೆ ಹಲವು ಸಂಸ್ಥೆಗಳ ಜೊತೆಗೆ ಒಡನಾಟ ಹೊಂದಿದ್ದಾರೆ. ಅರಿವು ಶಾಲೆಯಲ್ಲಿ ರಂಗ ಶಿಕ್ಷಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಇದೇ ವಿಷಯದಲ್ಲಿ ಚಿನ್ನದ ಪದಕ ಪಡೆದಿರುವ ಮಳವಳ್ಳಿಯ ಸಿ. ನಂಜುಂಡಸ್ವಾಮಿ ‘ಸುನಚಿ’ ರಂಗ ಫೌಂಡೇಷನ್ ಮೂಲಕ ರಂಗ ಸೇವೆ ಸಲ್ಲಿಸಿದ್ದು, ‘ಮಲೆಗಳಲ್ಲಿ ಮದುಮಗಳು’ ಸೇರಿದಂತೆ ಹಲವು ರಂಗಪ್ರಯೋಗಗಳಲ್ಲಿ ಭಾಗಿಯಾಗಿದ್ದಾರೆ.

ರೇಡಿಯೊ ಪ್ರೇರಣೆ

ಪದವಿ ವಿಭಾಗದಲ್ಲಿ ಕರ್ನಾಟಕ ಸಂಗೀತ ಗಾಯನ ಹಾಗೂ ನಾಟಕ ವಿಷಯದಲ್ಲಿ ಪದವಿಯೊಂದಿಗೆ ಐದು ಬಂಗಾರ ಕೊರಳಿಗೆ ಏರಿಸಿಕೊಂಡ ಪಿ. ಪುನೀತಾಗೆ ಬಾಲ್ಯದಲ್ಲಿ ರೇಡಿಯೊದಲ್ಲಿ ಕೇಳುತ್ತಿದ್ದ ಸಂಗೀತವೇ ಪ್ರೇರಣೆಯಂತೆ. ಬೆಂಗಳೂರಿನವರಾದ ಅವರು ಸಿ.ಎ. ನಾಗರಾಜು ಶ್ರುತಿ ರಂಜಿನಿ ಸೇರಿದಂತೆ ಹಲವು ಗುರುಗಳ ಬಳಿ ಅಭ್ಯಾಸ ಮಾಡಿದ್ದು ಇನ್ನಷ್ಟು ಯುವಜನರನ್ನು ಸಂಗೀತದತ್ತ ಸೆಳೆಯುವ ಹಂಬಲ ಹೊಂದಿದ್ದಾರೆ. ಇದೇ ವಿಷಯದಲ್ಲಿ ಪದವಿ ಜೊತೆಗೆ ಚಿನ್ನದ ಪದಕ ಪಡೆದಿರುವ ಎಂ.ಬಿ. ಸುಜನಾ ಬಿ.ಎಸ್ಸಿ ಓದನ್ನು ಅರ್ಧಕ್ಕೆ ಬಿಟ್ಟು ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡಿದ್ದು ಇದೇ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.