
ಪ್ರಜಾವಾಣಿ ವಾರ್ತೆ
ಮೈಸೂರು: ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ 106ನೇ ವಾರ್ಷಿಕ ಘಟಿಕೋತ್ಸವ ಜ.5ರಂದು ಬೆಳಿಗ್ಗೆ 11.30ಕ್ಕೆ ಕ್ರಾಫರ್ಡ್ ಭವನದಲ್ಲಿ ನಡೆಯಲಿದ್ದು, ಒಟ್ಟು 30,966 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು. ಇವರಲ್ಲಿ 18,612 (ಶೇ 60.10) ಮಹಿಳೆಯರು ಹಾಗೂ 12,354 (ಶೇ 39.88) ಪುರುಷರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಈ ವಿವರ ನೀಡಿದರು.
‘ವಿವಿಧ ವಿಷಯಗಳಲ್ಲಿ 449 ಅಭ್ಯರ್ಥಿಗಳಿಗೆ (211 ಮಹಿಳೆಯರು ಹಾಗೂ 238 ಪುರುಷರು) ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗುವುದು. ಒಟ್ಟು 442 ಪದಕಗಳು ಮತ್ತು ನಗದು ಬಹುಮಾನಗಳನ್ನು 213 ಅಭ್ಯರ್ಥಿಗಳು ಪಡೆದಿದ್ದು, ಇವರಲ್ಲಿ 158 ಮಂದಿ ಮಹಿಳೆಯರು’ ಎಂದು ತಿಳಿಸಿದರು.
‘3,551 ಮಹಿಳೆಯರು ಸೇರಿದಂತೆ ಒಟ್ಟು 5,796 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಮತ್ತು 14,850 ಮಹಿಳೆಯರು ಸೇರಿದಂತೆ 24,721 ಮಂದಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುತ್ತದೆ’ ಎಂದು ವಿವರಿಸಿದರು.
‘ಎಂ.ಎಸ್ಸಿ ರಸಾಯನವಿಜ್ಞಾನದಲ್ಲಿ ಎನ್.ಅದಿತಿ 24 ಪದಕ ಹಾಗೂ 8 ನಗದು ಬಹುಮಾನಗಳನ್ನು ಪಡೆದು ‘ಪದಕ ಪಟ್ಟಿ’ಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ವಿಭಾಗದಲ್ಲಿ ದಾನಿಗಳು ಹೆಚ್ಚಿನ ಪದಕಗಳನ್ನು ಸ್ಥಾಪಿಸಿದ್ದಾರೆ. ಅದಿತಿ ಹೆಚ್ಚು ಅಂಕ ಗಳಿಸಿ ಅವುಗಳನ್ನು ಗಳಿಸಿಕೊಂಡಿದ್ದಾರೆ’ ಎಂದು ಲೋಕನಾಥ್ ತಿಳಿಸಿದರು.
‘ಬಿಎ ಪದವಿಯಲ್ಲಿ ವರ್ಣಿಕಾ ಬಿ.ಎಸ್. 5 ಪದಕ, 6 ನಗದು ಬಹುಮಾನ, ಎಂ.ಸಿ. ತ್ರಿವೇಣಿ ತಲಾ 2 ಪದಕ ಹಾಗೂ ನಗದು ಬಹುಮಾನ ಪಡೆದಿದ್ದಾರೆ. ಎಂ.ಎ. ಭಾಷಾ ವಿಜ್ಞಾನದಲ್ಲಿ ಅಹಮದ್ ಮನ್ಸೂರ್ ಎಸ್. 6 ಪದಕ, 2 ನಗದು ಬಹುಮಾನ, ಎಂ.ಎ. ಕನ್ನಡದಲ್ಲಿ ಚಂದ್ರಶೇಖರ 13 ಪದಕ, 2 ನಗದು ಬಹುಮಾನ, ಬಿ.ಕಾಂ.ನಲ್ಲಿ ಬುಶ್ರಾ ಕೌಸರ್ ತಲಾ 3 ಚಿನ್ನ, ನಗದು ಬಹುಮಾನ, ಎಂ.ಕಾಂ.ನಲ್ಲಿ ಸುಮಲತಾ ಎಂ. 7 ಚಿನ್ನ ಹಾಗೂ 2 ನಗದು ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಬಿ.ಪಿ.ಇಡಿ ಪದವಿಯಲ್ಲಿ ಅವಿನಾಶ್ ಎನ್. 5 ಪದಕ, 1 ನಗದು ಬಹುಮಾನ, ಎಂ.ಪಿ. ಇಡಿಯಲ್ಲಿ ದಿವಾಕರ ಎಚ್.ಪಿ. 5 ಪದಕ ಹಾಗೂ 3 ನಗದು ಬಹುಮಾನ ಗಳಿಸಿದ್ದಾರೆ. ಬಿ.ಎ. ಎಲ್‌ಎಲ್‌ಬಿಯಲ್ಲಿ ನಯನ್ ಪಾಂಡೆ 1 ಪದಕ, ಎಲ್ಎಲ್‌ಎಂನಲ್ಲಿ ಸ್ಮೃತಿ ಕೆ. 4 ಪದಕ, 3 ನಗದು ಬಹುಮಾನ ಪಡೆದಿದ್ದಾರೆ. ಬಿ.ಎಸ್ಸಿಯಲ್ಲಿ ಹರ್ಮೇನ್ ಟಿ. 6 ಪದಕ, 3 ನಗದು ಬಹುಮಾನ, ಮದಿಹಾ ಕುಲ್ಸುಮ್ 3 ಪದಕ, 6 ನಗದು ಬಹುಮಾನ, ಎಂ.ಎಸ್ಸಿ ಗಣಿತ ವಿಜ್ಞಾನದಲ್ಲಿ ಪುನೀತ್ ಆರ್. 6 ಪದಕ ಹಾಗೂ 2 ನಗದು ಬಹುಮಾನ ಗಳಿಸಿದ್ದಾರೆ’ ಎಂದು ತಿಳಿಸಿದರು.
ಕುಲಸಚಿವ ಪ್ರೊ.ನಾಗರಾಜ್ ಇದ್ದರು.