ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಬಿ.ಎ, ಬಿ.ಕಾಂ, ಬಿ.ಎಸ್ಸಿ ಸೇರಿದಂತೆ ವಿವಿಧ ಪದವಿಗಳ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆಗಳು ನ.27ರಿಂದ ಆರಂಭವಾಗಿದ್ದು, ಪರೀಕ್ಷಾ ಕೇಂದ್ರಗಳಿಗೆ ಉಪ ಮುಖ್ಯಸ್ಥರು (ಡೆಪ್ಯೂಟಿ ಚೀಫ್) ಹಾಗೂ ಪರಿವೀಕ್ಷಕ ತಂಡಗಳನ್ನು (ಸ್ಕ್ವಾಡ್) ನಿಯೋಜಿಸಿಲ್ಲ.
‘ಎಸ್ಸೆಸ್ಸೆಲ್ಸಿ ಹಾಗೂ ಪಿಯು ಮಾದರಿಯಲ್ಲಿಯೇ ಪದವಿ ಪರೀಕ್ಷೆಗಳನ್ನು ಗುಣಮಟ್ಟ ಹಾಗೂ ಪಾರದರ್ಶಕವಾಗಿ ನಡೆಸಬೇಕು. ವಿಶ್ವವಿದ್ಯಾಲಯವು ಆರ್ಥಿಕವಾಗಿ ದುಸ್ಥಿತಿಯಲ್ಲಿದೆ ಎಂಬ ಕಾರಣಕ್ಕೆ ನಿಯಮಾವಳಿಯನ್ನು ಗಾಳಿಗೆ ತೂರಿ, ತರಗತಿ ಪರೀಕ್ಷೆಗಳಂತೆ ನಡೆಸಲಾಗುತ್ತಿದೆ’ ಎಂಬ ಆಕ್ಷೇಪ ಬೋಧಕ ವಲಯದಲ್ಲಿ ವ್ಯಕ್ತವಾಗಿದೆ.
ಜಿಲ್ಲೆಯ ಕಾಲೇಜುಗಳ ಮೂರೂ ವರ್ಷದ ಪರೀಕ್ಷೆ ಜೊತೆಗೆ, ಎರಡು ವರ್ಷದ ಹಿಂದೆ ಜಿಲ್ಲೆಗೊಂದು ವಿಶ್ವವಿದ್ಯಾಲಯವಾದ್ದರಿಂದ ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪದವಿ ಕಾಲೇಜುಗಳ ಅಂತಿಮ ವರ್ಷದ ಪದವಿ ಪರೀಕ್ಷೆಗಳು ನಡೆಸುವ ಜವಾಬ್ದಾರಿ ಮೈಸೂರು ವಿಶ್ವವಿದ್ಯಾಲಯದ ಮೇಲಿದೆ. ಈಗ ನಡೆಯುತ್ತಿರುವ ಪರೀಕ್ಷೆ ಮೇಲ್ವಿಚಾರಣೆಗೆ ಅಧಿಕಾರಿ ತಂಡವನ್ನು ನಿಯೋಜಿಸಿಲ್ಲ.
‘ವಿಶ್ವವಿದ್ಯಾಲಯವು ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕಾಲೇಜಿನ ಅಂತಿಮ ವರ್ಷದ ಪರೀಕ್ಷೆಗಳ ಕೊನೆಯ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸದಿರುವುದು, ಗುಣಮಟ್ಟಕ್ಕೆ ಹೆಸರಾಗಿದ್ದ ವಿಶ್ವವಿದ್ಯಾಲಯಕ್ಕೊಂದು ಕಪ್ಪುಚುಕ್ಕೆ’ ಎಂಬ ಅಭಿಪ್ರಾಯ ಬೋಧಕ ವಲಯದಿಂದ ಮೂಡಿದೆ.
ಪರೀಕ್ಷಾ ಶುಲ್ಕ ಕಡಿಮೆ ಮಾಡಿಲ್ಲ: ‘ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ವಿಶ್ವವಿದ್ಯಾಲಯವೇನೂ ಕಡಿಮೆ ಮಾಡಿಲ್ಲ. ಪರೀಕ್ಷೆ ನಡೆಸುವುದು, ಮಾರ್ಕ್ಸ್ ಕಾರ್ಡ್ ನೀಡಿಕೆಗೆ ಹೆಚ್ಚು ಶುಲ್ಕವನ್ನು ವಸೂಲಿ ಮಾಡುವುದಾದರೂ ಏಕೆ? ವಿಶ್ವವಿದ್ಯಾಲಯವು ಸಿಬ್ಬಂದಿ, ವಾಹನ ಸೌಕರ್ಯ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ವೆಚ್ಚ ಮಾಡುವುದನ್ನು ತಗ್ಗಿಸಿ, ಗುಣಮಟ್ಟಕ್ಕೆ ಆದ್ಯತೆ ನೀಡಲಿ’ ಎಂದು ಬೋಧಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಪರೀಕ್ಷಾ ಭಯ ಇಲ್ಲದ್ದರಿಂದ ವಿದ್ಯಾರ್ಥಿಗಳು ನಕಲು ಮಾಡಲು ಮುಂದಾಗುತ್ತಾರೆ. ಬೋಧಕರು, ಅತಿಥಿ ಉಪನ್ಯಾಸಕರಲ್ಲೂ ಆಲಸ್ಯ ಮನೋಭಾವನೆ ಮೂಡುತ್ತಿದೆ. ಕಾಲೇಜುಗಳು ಪರೀಕ್ಷೆಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಿವೆ. ವಿಶ್ವವಿದ್ಯಾಲಯದ ಘನತೆ, ವೈಭವಕ್ಕೆ ಕುಂದುಂಟಾಗುತ್ತಿದೆ’ ಎಂದರು.
ತರಗತಿ ಪರೀಕ್ಷೆಯಂತಾದ ಮುಖ್ಯ ಪರೀಕ್ಷೆ ಹಗುರವಾಗಿ ತೆಗೆದುಕೊಂಡ ವಿದ್ಯಾರ್ಥಿಗಳು ನಿಯಮಾವಳಿಯಂತೆ ನಡೆಸಲು ಒತ್ತಾಯ
ಪ್ರತಿ ಪರೀಕ್ಷಾ ಕೇಂದ್ರಕ್ಕೂ ಉಪ ಮುಖ್ಯಸ್ಥರ ಜೊತೆ ಪಾರದರ್ಶಕ ಪರೀಕ್ಷೆಗಾಗಿ ಪರಿವೀಕ್ಷಕ ತಂಡಗಳನ್ನು (ಸ್ಕ್ವಾಡ್) ನೇಮಿಸಲಾಗುತ್ತಿತ್ತು
ಪ್ರತಿ ಜಿಲ್ಲೆಯಲ್ಲಿ 2 ತಂಡಗಳು ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಕ್ರಮ ನಡೆಯುತ್ತಿದ್ದರೆ ಸ್ಥಳದಲ್ಲೇ ವಿದ್ಯಾರ್ಥಿಯನ್ನು ಡಿಬಾರ್ ಮಾಡುತ್ತಿತ್ತು.
ಪ್ರತಿ ಕಾಲೇಜಿನ ಕೇಂದ್ರಕ್ಕೆ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಬೇರೊಂದು ಕಾಲೇಜಿನ ಅಧ್ಯಾಪಕರನ್ನು ಉಪ ಮುಖ್ಯಸ್ಥರಾಗಿ ನೇಮಿಸಲಾಗುತ್ತಿತ್ತು. ಅವರು ಪರೀಕ್ಷೆ ನಡೆಯುವ ಒಂದು ತಿಂಗಳು ಕಾಲೇಜಿನಲ್ಲಿಯೇ ಕರ್ತವ್ಯ ನಿರ್ವಹಿಸಬೇಕಿತ್ತು.
ಪ್ರತಿ ಪ್ರಶ್ನೆ ಪತ್ರಿಕೆಯನ್ನೂ ಉಪ ಮುಖ್ಯಸ್ಥರೇ ತೆರೆದು ಪರೀಕ್ಷೆ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳುತ್ತಿದ್ದರು. ಅಕ್ರಮ ನಡೆದರೆ ಅದನ್ನು ವಿಶ್ವವಿದ್ಯಾಲಯದ ಗಮನಕ್ಕೆ ತರುತ್ತಿದ್ದರು. ಅವರ ಕರ್ತವ್ಯ ನಿರ್ವಹಣೆಗೆ ಭತ್ಯೆ ನೀಡಲಾಗುತ್ತಿತ್ತು.
ಜಿಲ್ಲಾ ಕೇಂದ್ರಕ್ಕೆ ಪರೀಕ್ಷಾ ಸ್ಥಳ ದೂರವಿದ್ದರೆ ಪ್ರಶ್ನೆಪತ್ರಿಕೆಗಳನ್ನು ತಾಲ್ಲೂಕು ಖಜಾನೆ ಹಾಗೂ ಹೋಬಳಿ ಪೊಲೀಸ್ ಠಾಣೆಗಳಲ್ಲಿ ಇಡಲಾಗುತ್ತಿತ್ತು. ಅಲ್ಲಿಂದ ಕಾಲೇಜಿಗೆ ಬರುವ ಪ್ರಶ್ನೆಪತ್ರಿಕೆಗಳ ಬಂಡಲ್ ಅನ್ನು ಉಪಮುಖ್ಯಸ್ಥರ ಸಮಕ್ಷಮದಲ್ಲಿಯೇ ಪರೀಕ್ಷೆ ಆರಂಭವಾಗುವ 10 ನಿಮಿಷದ ಮುನ್ನ ತೆರೆಯಲಾಗುತ್ತಿತ್ತು.
ಪರೀಕ್ಷೆ ನಡೆದ ನಂತರ ಉತ್ತರ ಪತ್ರಿಕೆಗಳನ್ನು ಸುರಕ್ಷಿತವಾಗಿ ಬೀರುವಿನಲ್ಲಿ ಇರಿಸಿ ಬೀಗ ಹಾಕಿ ಪ್ರಾಂಶುಪಾಲರು ಹಾಗೂ ಅವರ ಸಹಿಯೊಂದಿಗೆ ಸೀಲ್ ಮಾಡಬೇಕಿತ್ತು. ಪರೀಕ್ಷೆ ನಡೆದು ಎರಡ್ಮೂರು ದಿನದ ನಂತರ ಬೀರುವಿನಿಂದ ವಿಶ್ವವಿದ್ಯಾಲಯದ ಸಿಬ್ಬಂದಿ ತೆಗೆದುಕೊಂಡು ಹೋಗುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.