ADVERTISEMENT

₹15 ಕೋಟಿಯಲ್ಲಿ ₹10 ಕೋಟಿ ಜೇಬಿಗಿಳಿಸಿದ ವಿಶ್ವನಾಥ್: ಶ್ರೀನಿವಾಸ ಪ್ರಸಾದ್ ಆರೋಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 11:00 IST
Last Updated 16 ಡಿಸೆಂಬರ್ 2022, 11:00 IST
ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್
ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್    

ಮೈಸೂರು: ‘ಹುಣಸೂರು ಕ್ಷೇತ್ರದ ಉಪ ಚುನಾವಣೆ ಖರ್ಚಿಗೆಂದು ಬಿಜೆಪಿಯವರು ಕೊಟ್ಟಿದ್ದ ₹ 15 ಕೋಟಿಯಲ್ಲಿ ₹ 10 ಕೋಟಿಯನ್ನು ಜೇಬಿಗಿಳಿಸಿಕೊಂಡ ಎ.ಎಚ್.ವಿಶ್ವನಾಥ್‌ ಅವರಿಂದನಾನು ಕಲಿಯಬೇಕಿಲ್ಲ. ನನ್ನನ್ನು ಟೀಕಿಸುವ ನೈತಿಕತೆ ಅವರಿಗಿಲ್ಲ’ ಎಂದು ಬಿಜೆಪಿಯ ಸಂಸದ ವಿ.ಶ್ರೀನಿವಾಸ ಪ್ರಸಾದ್ ತಿರುಗೇಟು ನೀಡಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಬಿಜೆಪಿಗೆ ಬರುವಂತೆ ನಾನೇನೂ ಆತನನ್ನು ಕರೆದಿರಲಿಲ್ಲ. ಅವನೇ ನನ್ನ ಮನೆಗೆ ಬಂದಿದ್ದ. ಜೆಡಿಎಸ್‌ನಲ್ಲಿ ಇರುವುದಕ್ಕೆ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದ. ಬಿ.ಎಸ್.ಯಡಿಯೂರಪ್ಪ ಜೊತೆ ಚರ್ಚಿಸುವಂತೆ ತಿಳಿಸಿದ್ದೆ. ಜೆಡಿಎಸ್‌–ಕಾಂಗ್ರೆಸ್‌ ಶಾಸಕರನ್ನೆಲ್ಲಾ ಬಾಂಬೆಗೆ ಕರೆದುಕೊಂಡು ಹೋದವನೇ ಆತ. ಉಪ ಚುನಾವಣೆಯಲ್ಲಿ ಸೋತರೂ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿದ ಪಕ್ಷದ ಬಗ್ಗೆ ಕೃತಜ್ಞತೆ ಇಲ್ಲದೇ ಮಾತನಾಡುತ್ತಿದ್ದಾನೆ. ಕೀಟಲೆ ಮಾಡಿಕೊಂಡಿರುವುದೇ ಅವನ ಪ್ರವೃತ್ತಿ’ ಎಂದು ಏಕವಚನದಲ್ಲೇವಾಗ್ದಾಳಿ ನಡೆಸಿದರು.

‘ನನ್ನನ್ನು ಅಲೆಮಾರಿಗಳ ರಾಜ ಎಂದೆಲ್ಲಾ ಟೀಕಿಸಿದ್ದಾನೆ. ನಾನು ಮುತ್ಸದ್ದಿ. ಸ್ವಾಭಿಮಾನದ ಚಕ್ರವರ್ತಿ. ಆ ಕಾರಣದಿಂದಲೇ ಜನರು ಗೌರವಿಸುತ್ತಾರೆ. ವಿಶ್ವನಾಥ್‌ ಬೊಗಳುವ ಹಾಗೂ ಕಚ್ಚುವ ನಾಯಿಯೂ ಆಗಿದ್ದಾನೆ. ಅಂತಹ ಕೊಳಕು ಜೀವನವನ್ನು ನಾನು ನಡೆಸಿಲ್ಲ. ಈಗ, ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾನೆ. ಆತ ದೂರಿರುವಂತೆ, ಕುಟುಂಬ ರಾಜಕಾರಣದ ಅಗತ್ಯ ನನಗಿಲ್ಲ’ ಎಂದು ಗುಡುಗಿದರು.

ADVERTISEMENT

‘ಕಾಂಗ್ರೆಸ್‌ನಲ್ಲಿದ್ದಾಗ, ಸೋತರೆ ಪಾಠ ಮಾಡಿಕೊಂಡಿರುತ್ತೇನೆ ಎಂದು ಹೇಳಿ ಸಿದ್ದರಾಮಯ್ಯ ಬಳಿ ಟಿಕೆಟ್ ಪಡೆದಿದ್ದರು. ಆದರೆ, ಪಾಠ ಮಾಡಲು ಹೋಗಲಿಲ್ಲ; ಕೀಟಲೆ ಮಾಡುತ್ತಿದ್ದಾರೆ. ಸೋತ ನಂತರವೂ ಸಿದ್ದರಾಮಯ್ಯ ಬಳಿ ಹಣ‌ಕ್ಕೆ ಬೇಡಿಕೆ ಇಡಲಿಲ್ಲವಾ? ಅಧಿಕಾರ ಕೇಳಲಿಲ್ಲವಾ? ಕಾಂಗ್ರೆಸ್‌ನಲ್ಲಿ ಅವರಿಗೆ ಆಗಿದ್ದ ಅನ್ಯಾಯವಾದರೂ ಏನು?’ ಎಂದು ಕೇಳಿದರು.

‘ಅವರಿಗೆ ಟಿಕೆಟ್ ಕೊಡಿಸಿ, ಮಂತ್ರಿ ಮಾಡಿದವ ನಾನು. ಅದು ನೆನಪಿಲ್ಲವೇ’ ಎಂದುಶ್ರೀನಿವಾಸ ಪ್ರಸಾದ್ ಪ್ರಶ್ನಿಸಿದರು.

‘ವೇಷ ಬದಲಿಸಿಕೊಂಡು ಶಿಕಾರಿಗೆ ಹೋಗುತ್ತಿದ್ದಾನೆ. ಅವನನ್ನು ಎಲ್ಲ ಕಡೆಯಿಂದಲೂ ಗೂಳಿಗಳು ಅಟ್ಟಿಸಿಕೊಂಡು ಬರುತ್ತಿವೆ’ ಎಂದು ನೀತಿಪಾಠವೊಂದನ್ನು ಹೇಳಿ ಕುಟುಕಿದರು.

‘ನನಗೆ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸಂವಿಧಾನ ಮುಖ್ಯವೇ ಹೊರತು ಪಕ್ಷ, ಅಧಿಕಾರವಲ್ಲ. ಸಂವಿಧಾನಕ್ಕೆ ಧಕ್ಕೆಯಾದಾಗ ಬಿಜೆಪಿಯವರನ್ನೂ ಪ್ರಶ್ನಿಸಿದ್ದೇನೆ, ಪ್ರಶ್ನಿಸುತ್ತೇನೆ. ಆ ಬದ್ಧತೆ ಉಳಿಸಿಕೊಂಡಿದ್ದೇನೆ’ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.