ADVERTISEMENT

ಮೈಸೂರು | ಡಿಸಿ ಕಚೇರಿ ಆವರಣ: ವಾಲ್ಮೀಕಿ ಪ್ರತಿಮೆಗೆ ₹1.50 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 5:03 IST
Last Updated 9 ಸೆಪ್ಟೆಂಬರ್ 2025, 5:03 IST
<div class="paragraphs"><p>ವಾಲ್ಮೀಕಿ ಪ್ರತಿಮೆ.</p></div>

ವಾಲ್ಮೀಕಿ ಪ್ರತಿಮೆ.

   

ಮೈಸೂರು: ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನೂ ಒಳಗೊಂಡ ಜಿಲ್ಲಾಮಟ್ಟದ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಸರ್ಕಾರ ₹ 1.50 ಕೋಟಿ ಅನುದಾನ ಒದಗಿಸಿದೆ. ಇದರೊಂದಿಗೆ ನಾಯಕ ಸಮಾಜದ ಬಹುದಿನಗಳ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಿದಂತಾಗಿದೆ.

ಸ್ಥಾಪನೆಯ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ.

ADVERTISEMENT

ಈ ಸಂಬಂಧ ಎಚ್‌.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಅವರ ನಿವಾಸದಲ್ಲಿ ಚರ್ಚಿಸಲಾಯಿತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜು, ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು, ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಅಧ್ಯಕ್ಷ ದೇವರಾಜ್ ಟಿ. ಕಾಟೂರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಯೋಜನಾಧಿಕಾರಿ ಮಲ್ಲೇಶ್, ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾಧಿಕಾರಿ ಮಹೇಶ್‌ ಪಾಲ್ಗೊಂಡಿದ್ದರು.

ಪ್ರತಿಮೆಯ ನಕ್ಷೆ, ಎತ್ತರ, ಪೀಠ ನಿರ್ಮಾಣ ಮೊದಲಾದ ಮಾಹಿತಿಯನ್ನು ಮಹೇಶ್ ನೀಡಿದರು. ಕಾಮಗಾರಿ ಪ್ರಾರಂಭಿಸಲು ಅನುಮತಿ ಕೋರಿದರು.

‘ಪ್ರತಿಮೆ ಕೆತ್ತನೆಯ ಕೆಲಸವನ್ನು ಅಯೋಧ್ಯೆಯ ಬಾಲ ರಾಮನ ಮೂರ್ತಿ ಸಿದ್ಧಪಡಿಸಿದ ಅರುಣ್ ಯೋಗಿರಾಜ್‌ ಅವರಿಗೆ ಕೊಡಬೇಕು. ಆದಷ್ಟು ಬೇಗ ಕಾಮಗಾರಿ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದ ಮಧ್ಯಭಾಗದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆ ಸ್ಥಾಪಿಸಲಾಗಿದ್ದು, ಅನಾವರಣ ಕಾರ್ಯಕ್ರಮ ಇನ್ನೂ ನಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.