
ಪ್ರಾತಿನಿಧಿಕ ಚಿತ್ರ
ಮೈಸೂರು: ‘ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಸಂಜೆ ನಡೆದ ವೀರಶೈವ ಲಿಂಗಾಯತ ಮುಖಂಡರ ಸಭೆಯಲ್ಲಿ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಯಾರೋ ಅತೃಪ್ತರು ಮಾಧ್ಯಮಗಳಿಗೆ ತಪ್ಪು ಹೇಳಿಕೆ ನೀಡಿದ್ದಾರೆ’ ಎಂದು ಬಿಜೆಪಿಯ ವೀರಶೈವ ಲಿಂಗಾಯತ ಮುಖಂಡರು ಸ್ಪಷ್ಟನೆ ನೀಡಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಮುಖಂಡ ಬಿ.ಎನ್. ಸದಾನಂದ, ‘ಬಿಜೆಪಿ ನಾಯಕರ ಬಗ್ಗೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು ಎಂಬ ಸುದ್ದಿ ಸತ್ಯಕ್ಕೆ ದೂರವಾದುದು. ನಾವೆಲ್ಲರೂ ಸಭೆಯಲ್ಲಿ ಭಾಗವಹಿಸಿದ್ದು ನಿಜ. ಆದರೆ, ಅಲ್ಲಿ ಪಕ್ಷದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಕೇವಲ ಸಮುದಾಯ ಚಿಂತನ ಮಂಥನ ಸಭೆ ನಡೆಸಲಾಯಿತು’ ಎಂದರು.
ಪಕ್ಷದ ಗ್ರಾಮಾಂತರ ಘಟಕದ ಪ್ರಧಾನ ಕಾರ್ಯದರ್ಶಿ ನಂಜನಗೂಡಿನ ಎನ್.ವಿ.ವಿನಯ್ ಕುಮಾರ್, ‘ಬಿಜೆಪಿಯಲ್ಲಿ ಲಿಂಗಾಯತರಿಗೆ ಅನ್ಯಾಯ ಆಗಿಲ್ಲ. ಪಕ್ಷದ ನಾಯಕರು ಗ್ರಾಮಾಂತರ ಘಟಕದಲ್ಲಿ ಹೆಚ್ಚುವರಿಯಾಗಿ ಹುದ್ದೆಗಳನ್ನು ನೀಡಿದ್ದಾರೆ. ನಗರ ಘಟಕದ ಅಧ್ಯಕ್ಷರು ಸಹ ಸಮನಾಗಿ ಹುದ್ದೆಗಳನ್ನು ನೀಡಿದ್ದಾರೆ. ಯಾರಿಗೂ ದ್ರೋಹ ಬಗೆದಿಲ್ಲ. ಯಾರಿಗೆ ಪಕ್ಷದ ಬಗ್ಗೆ ಅಸಮಾಧಾನವಿದೆ, ಅವರು ನೇರವಾಗಿ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ನಿಮ್ಮ ಬೇಸರ ತೋಡಿಕೊಳ್ಳಿ. ಆದರೆ, ಈ ರೀತಿ ಸಮಾಜಕ್ಕೆ ತಪ್ಪು ಸಂದೇಶ ನೀಡಬೇಡಿ’ ಎಂದು ಹೇಳಿದರು.
‘ಸಭೆಯಲ್ಲಿ ಭಾಗವಹಿಸುವಂತೆ ಬಹುತೇಕರಿಗೆ ಶರತ್ ಪುಟ್ಟಬುದ್ದಿ, ಗೆಜ್ಜಗಳ್ಳಿ ಮಹೇಶ್ ಅವರೇ ಆಹ್ವಾನ ನೀಡಿದ್ದರು. ಬಿಜೆಪಿ ಜೊತೆಗೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರೂ ಸಭೆಯಲ್ಲಿದ್ದರು. ಅಲ್ಲಿ ಪಕ್ಷದ ಬಗ್ಗೆ ಚರ್ಚೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.
ಮುಖಂಡರಾದ ಸಿದ್ದಪ್ಪ, ಸ್ವಪ್ನಾ ನಾಗೇಶ್, ಕೆಂಪಣ್ಣ, ರೇಣುಕಾ ರಾಜು, ರುದ್ರ ಮೂರ್ತಿ, ದಯಾನಂದ ಪಾಟೀಲ್, ದಾಕ್ಷಾಯಿಣಿ, ಅರ್ಜುನ್ ಪಾರ್ಥ, ಪವಿತ್ರಾ, ಮಾಲಿನಿ ಫಾಲಾಕ್ಷ, ಸಂತೋಷ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.