ADVERTISEMENT

ನಿಯಂತ್ರಣಕ್ಕೆ ಬಾರದ ಬೆಲೆ ಏರಿಕೆ; ತಗ್ಗದ ತರಕಾರಿ, ಹಣ್ಣಿನ ದರ ಸಸ್ತಾ

ಗ್ರಾಹಕರು ಹೈರಾಣು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 3:00 IST
Last Updated 16 ನವೆಂಬರ್ 2021, 3:00 IST

ಮೈಸೂರು: ತರಕಾರಿಗಳ ದರಗಳ ನಾಗಾಲೋಟ ಈ ವಾರವೂ ಮುಂದುವರಿದಿದೆ. ಎಲ್ಲ ತರಕಾರಿಗಳ ಬೆಲೆಗಳು ಹೆಚ್ಚಾಗಿದ್ದು ಗ್ರಾಹಕರು ಹೈರಣಾಗಿದ್ದಾರೆ. ತರಕಾರಿ ಇಲ್ಲದೇ ಸಾಂಬರು ಮಾಡುವ ಸ್ಥಿತಿ ಬಡವರದ್ದು.

ಸಾಂಬರಿಗೆ ಅತ್ಯಗತ್ಯವಾಗಿ ಬೇಕಾದ ಟೊಮೆಟೊ ಸಗಟು ಬೆಲೆ ₹ 34ರಿಂದ 45ಕ್ಕೆ, ಈರುಳ್ಳಿ ₹ 35ರಿಂದ 38ಕ್ಕೆ, ಬೀನ್ಸ್ ₹ 23ರಿಂದ 35ಕ್ಕೆ, ಬದನೆ ₹ 30ರಿಂದ 36ಕ್ಕೆ ಏರಿಕೆ ಕಂಡಿವೆ. ಇನ್ನುಳಿದ ಎಲ್ಲ ಬಗೆಯ ತರಕಾರಿಗಳ ಬೆಲೆಗಳ ಸ್ಥಿತಿಯೂ ಹೀಗೆಯೇ ಇದೆ.

ಕಾರ್ತೀಕ ಮಾಸದ ಪ್ರಯುಕ್ತ ಬಹುತೇಕ ಕಲ್ಯಾಣಮಂಟಪಗಳಲ್ಲಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿ
ರುವುದರಿಂದ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿದೆ.

ADVERTISEMENT

ಕೇರಳದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಬಿರುಸುಗೊಂಡಿರುವುದರಿಂದ ಆ ಭಾಗದಲ್ಲೂ ಬೇಡಿಕೆ ಹೆಚ್ಚಿದೆ. ನಿತ್ಯ ಹಲವು ವರ್ತಕರು ಕೇರಳದಿಂದ ಇಲ್ಲಿನ ಎಪಿಎಂಸಿಗೆ ಬಂದು ಖರೀದಿಸುತ್ತಿದ್ದಾರೆ. ಬೆಲೆ ಹೆಚ್ಚಲು ಇದೂ ಕಾರಣವಾಗಿದೆ.

ಸತತ ಮಳೆ, ಶೀತಮಯ ಪರಿಸರದಿಂದ ಇಳುವರಿ ಕಡಿಮೆಯಾಗಿದೆ. ಬೇಡಿಕೆಗೆ ತಕ್ಕಷ್ಟು ಮಾರುಕಟ್ಟೆಯಲ್ಲಿ ಪೂರೈಕೆ ಇಲ್ಲ. ಹೆಚ್ಚಾದ ಬೆಲೆಯ ಲಾಭ ರೈತರಿಗೆ ದೊರಕುತ್ತಿಲ್ಲ.

ತರಕಾರಿ ಬದಲಿಗೆ ಸೊಪ್ಪು ಬಳಕೆ ಮಾಡಲು ಹೋದ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ಅಲ್ಲಿಯೂ ತಟ್ಟಿದೆ. ನಿರಂತರವಾಗಿ ಬಿದ್ದ ಮಳೆಯಿಂದ ಸೊಪ್ಪು ನಾಶವಾಗಿ, ಧಾರಣೆ ಗಗನಮುಖಿಯಾಗಿದೆ. ಕೆಲವೊಂದು ಸೊಪ್ಪು ಗಳಂತೂ ಒಂದು ಕಂತೆಗೆ ₹ 10ರವರೆಗೂ ಮುಟ್ಟಿದೆ. ಹಾಪ್‌ಕಾಮ್ಸ್‌ ನಲ್ಲಿ ಕೊತ್ತಂಬರಿ ಹಾಗೂ ಕರಿಬೇವು ಸೊಪ್ಪು ₹ 80ರಿಂದ 100ಕ್ಕೆ, ಮಿಕ್ಸೈಡ್‌ ಸೊಪ್ಪು ₹ 70ರಿಂದ ₹ 80ಕ್ಕೆ ಹೆಚ್ಚಿದೆ.

ಹಾಪ್‌ಕಾಮ್ಸ್‌ನಲ್ಲಿ ಟೊಮೆಟೊ ಕೆ.ಜಿಗೆ ₹ 65, ಬೀನ್ಸ್ ₹ 50, ಬದನೆ ₹ 52, ಬೆಂಡೆ ₹ 52, ದಪ್ಪಮೆಣಸಿನಕಾಯಿ ₹ 118, ಹಸಿಮೆಣಸಿನಕಾಯಿ ₹ 42, ಈರುಳ್ಳಿ ₹ 52, ಆಲುಗೆಡ್ಡೆ ₹ 40 ಇದೆ.

ಬಾಳೆಹಣ್ಣು ಸಸ್ತಾ: ಈ ವಾರ ಬಾಳೆಹಣ್ಣಿನ ದರ ಇಳಿದಿದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ಏಲಕ್ಕಿ ಬಾಳೆಹಣ್ಣಿನ ದರ ₹ 40 ಇತ್ತು. ಈಗ ಇದು ₹ 38ಕ್ಕೆ ಇಳಿಕೆಯಾಗಿದೆ. ಪಚ್ಚಬಾಳೆ ದರವು ₹ 12ರ ಯಥಾಸ್ಥಿತಿಯಲ್ಲೇ ಮುಂದುವರಿದಿದೆ. ಇನ್ನುಳಿದ ಚಿಲ್ಲರೆ ಮಾರುಕಟ್ಟೆಗಳಲ್ಲಿ ಗುಣಮಟ್ಟ ಮತ್ತು ಗಾತ್ರಕ್ಕೆ ತಕ್ಕ ದರ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.