
ಸರಗೂರು: ಸಮೀಪದ ಹುಲಿಕುರ ಗ್ರಾಮದಲ್ಲಿ ಈಚೆಗೆ ವೇಣುಗೋಪಾಲಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಬಣ್ಣ ಬಳಿದು, ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ವೇಣುಗೋಪಾಲಸ್ವಾಮಿ ಉತ್ಸವಮೂರ್ತಿಯನ್ನು ಕಪಿಲಾ ನದಿವರೆಗೆ ಉತ್ಸವದಲ್ಲಿ ಕರೆದೊಯ್ದು ಅಲ್ಲಿ ಗಂಗೆ ಪೂಜೆ ಸಲ್ಲಿಸಿ ನಂತರ ದೇವಸ್ಥಾನಕ್ಕೆ ಮರಳಿತು. ಸತ್ತಿಗೆ ಮೆರವಣಿಗೆ ನಡೆಸಲಾಯಿತು. ಭಕ್ತರು ಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.
ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ‘ಗೋವಿಂದ.. ಗೋವಿಂದ..’ ನಾಮ ಪಠಿಸುತ್ತಾ ದಾಸ ಗುಡ್ಡರು ದೊಣ್ಣೆ ವರಸೆ ಹಾಡಿದರು. ಕೆಲವರು ದೇವರಿಗೆ ಹರಕೆ ತಿರಿಸಿದರು. ಸರಗೂರು ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಪ್ರಧಾನ ಆರ್ಚಕ ವೇಣುಗೋಪಾಲ ಅವರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು.
ಕಪಿಲಾ ನದಿಯಲ್ಲಿ ರಾತ್ರಿ ವೇಣುಗೋಪಾಲ ಸ್ವಾಮಿ ತೆಪ್ಪೋತ್ಸವ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಜಿ.ಸ್ವಾಮಿ, ಉಪಾಧ್ಯಕ್ಷ ಸಣ್ಣನಾಯಕ, ಕಾರ್ಯದರ್ಶಿ ಎಚ್.ಬಿ.ಬಾಲಕೃಷ್ಣ, ಗೌರವಾಧ್ಯಕ್ಷ ಚಿಕ್ಕವೀರನಾಯಕ, ಪದ್ಮರಾಜ್, ನಿರ್ದೇಶಕರಾದ ಎಸ್.ವಿ. ವೇಣುಗೋಪಾಲ್, ಬಿ.ಸಿ.ಬಸಪ್ಪ, ಖಜಾಂಚಿ ಮೋಹನ್‌ರಾಜ್, ನಂಜೇಗೌಡ, ಪಾಟೇಲ್ ಎಚ್.ಎಲ್.ನಂಜೇಗೌಡ, ಕೆ.ಗೋಪಾಲ್, ಎನ್.ರಮೇಶ್, ಚಿಕ್ಕದೇವನಾಯಕ, ನವನೀತ್, ನಿರಂಜನ್‌ರಾಜ್ ಅರಸ್, ಗೋವಿಂದೇಗೌಡ, ರವಿಕುಮಾರ್, ಶ್ರೀನಿವಾಸ್, ಅಭಿಕುಮಾರ್, ಬಾಲಕೃಷ್ಣ, ಗೋಪಾಲಯ್ಯ, ಗೋವಿಂದನಾಯಕ, ಹುಲಿಕುರ ಅಕ್ಕಪಕ್ಕದ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.