ADVERTISEMENT

ಹುಣಸೂರು: ರಸ್ತೆ ದುರಸ್ಥಿಗೆ ಗ್ರಾಮಸ್ಥರ ಆಗ್ರಹ

ಬನ್ನಿಕುಪ್ಪೆ: ಶಾಲೆ, ಕಾಲೇಜಿಗೆ ತೆರಳಲು ಮಕ್ಕಳ ಪರದಾಟ

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 14:03 IST
Last Updated 15 ಜುಲೈ 2024, 14:03 IST
ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು
ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದು   

ಹುಣಸೂರು: ‘ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಸಂಪರ್ಕಿಸುವ ರಸ್ತೆಯು ಹದಗೆಟ್ಟಿದ್ದು, ಅಭಿವೃದ್ಧಿ ಕಾಮಗಾರಿಯಿಲ್ಲದೆ ಗ್ರಾಮದ ಮಕ್ಕಳು ನಿತ್ಯ ಯಮಯಾತನೆ ಅನುಭವಿಸುತ್ತಿದ್ದಾರೆ’ ಎಂದು ಪಂಚಾಯಿತಿ ಸದಸ್ಯ ಸುರೇಶ್ ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಪದವಿಪೂರ್ವ ಕಾಲೇಜಿಗೂ ಸಂಪರ್ಕಿಸುವ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು, ನರೇಗಾ ಯೋಜನೆಯಲ್ಲಿ ರಸ್ತೆ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿದರು ಕ್ರಮವಹಿಸಿಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

‘ಕಳೆದ ಸಾಲಿನಲ್ಲಿ ಸತ್ಯ ಫೌಂಡೇಶನ್‌ ಅಧ್ಯಕ್ಷ ಸತ್ಯಪ್ಪ ಅವರ ನೇತೃತ್ವದಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಲಾಗಿತ್ತು. ಈ ಮುಂಗಾರಿನಲ್ಲೂ ಅದೇ ಪರಿಸ್ಥಿತಿ ಎದುರಾಗಿದ್ದು, ಕೂಡಲೇ ಕ್ರಮಕೈಗೊಳ್ಳದಿದ್ದರೆ ಪಂಚಾಯಿತಿ ಎದುರು ಪ್ರತಿಭಟನೆಗೆ ಮುಂದಾಗುತ್ತೇವೆ’ ಎಂದು ಎಚ್ಚರಿಸಿದ್ದಾರೆ.

ADVERTISEMENT

‘ಗ್ರಾಮದ ಅಂಗನವಾಡಿ ಕೇಂದ್ರದ ಸುತ್ತಲೂ ಮಳೆ ನೀರು ನಿಲ್ಲುತ್ತಿದೆ. ರಸ್ತೆಯಲ್ಲಿಯೂ ನೀರು ನಿಂತು ಡೆಂಗಿ, ಮಲೇರಿಯಾ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಆತಂಕ ಸೃಷ್ಟಿಸುತ್ತಿದೆ’ ಎಂದು ಸ್ಥಳಿಯ ನಿವಾಸಿಗಳಾದ ರಾಧಾ, ಸರೋಜಮ್ಮ, ರಮೇಶ್ ತಿಳಿಸಿದ್ದಾರೆ.

ಕಾಮಗಾರಿಗೆ ಯೋಜನೆ: ‘ನರೇಗಾ ಯೋಜನೆಯಲ್ಲಿ ಕಳೆದ ಸಾಲಿನಲ್ಲಿ ರಸ್ತೆ ಅಭಿವೃದ್ಧಿಗೆ ಮೆಟಲಿಂಗ್ ಕಾಮಗಾರಿ ನಡೆಸಲು ಮುಂದಾಗಿದ್ದೆವು, ಸ್ಥಳೀಯರು ಕಾಂಕ್ರೀಟ್ ಅಥವಾ ಡಾಂಬಾರು ರಸ್ತೆ ಮಾಡುವಂತೆ ಪಟ್ಟು ಹಿಡಿದ ಕಾರಣ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಈ ಸಾಲಿನಲ್ಲಿ ಸ್ಥಳೀಯರನ್ನು ಮನವೊಲಿಸಿ ಮೆಟಲಿಂಗ್ ಕಾಮಗಾರಿಗೆ ಸೇರಿಸಲಾಗಿದೆ’ ಎಂದು ಬನ್ನಿಕುಪ್ಪೆ ಪಿಡಿಒ ರಾಘವೇಂದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.