ಮೈಸೂರು: ನಗರದ ಹೊರವಲಯದಲ್ಲಿ ಇರುವ ‘ವಿಷ್ಣು ಸ್ಮಾರಕ’ಕ್ಕೂ ವಿವಾದಗಳು ಬೆನ್ನು ಹತ್ತಿವೆ. ಸ್ಮಾರಕಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಕಂದಾಯ ಭೂಮಿ ನೀಡುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ಧೋರಣೆ ತಾಳಿದೆ.
ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದ ‘ಉದ್ಬೂರು ಗೇಟ್’ ಬಳಿ ಸುಂದರ ಸ್ಮಾರಕ ರೂಪುಗೊಂಡಿದೆ. ಆದರೆ, ಇಲ್ಲಿಗೆ ಮಣ್ಣಿನ ರಸ್ತೆಯಲ್ಲೇ ಸಾಗಬೇಕು. ಸಾಂಸ್ಕೃತಿಕ ರಾಜಾನಿಯ ವಿಷ್ಣು ಸ್ಮಾರಕವೂ ವಿವಾದದ ಸುಳಿಯಲ್ಲಿರುವುದು ಅಭಿಮಾನಿಗಳಲ್ಲಿ ಬೇಸರ ತಂದಿದೆ.
ಮೈಸೂರು ತಾಲ್ಲೂಕು ಜಯಪುರ ಹೋಬಳಿಯ ಹಾಲಾಳು ಗ್ರಾಮದ ಸರ್ವೆ ಸಂಖ್ಯೆ 8ರಲ್ಲಿ ಸ್ಮಾರಕವಿದೆ. ಸಂಪರ್ಕ ಕಲ್ಲಿಸುವ ರಸ್ತೆ ಸರ್ವೆ ಸಂಖ್ಯೆ 69 ಹಾಗೂ 67ರಲ್ಲಿ ಹಂಚಿಹೋಗಿದೆ. ಇದರಲ್ಲಿ ಕಂದಾಯ ಭೂಮಿ ಇದ್ದು, ಗಡಿ ಗುರುತಿಸಿ, ರಸ್ತೆ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಬೇಕಿತ್ತು. ಸ್ಮಾರಕ ಉದ್ಘಾಟನೆಯಾಗಿ 2 ವರ್ಷ ಕಳೆದರೂ ಈ ಕೆಲಸವಾಗಿಲ್ಲ.
‘ಇಲ್ಲಿ ಸ್ಮಾರಕವಿದೆ ಎಂಬುದೇ ಗೊತ್ತಾಗುವುದಿಲ್ಲ. ಸ್ವಾಗತ ಕಮಾನು, ನಾಮ ಫಲಕವೂ ಇಲ್ಲ. ಸರ್ಕಾರವು ಎಲ್ಲ ಮೂಲಸೌಲಭ್ಯ ಒದಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕು’ ಎಂದು ಆಗ್ರಹಿಸುತ್ತಾರೆ ವಿಷ್ಣು ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ.
ಮುಗಿಯದ ತೊಡಕು: ಸ್ಮಾರಕ ಇರುವ 5 ಎಕರೆ ಭೂಮಿಯೂ ಕಾನೂನು ತೊಡಕಿನಲ್ಲಿದೆ. ಈ ಜಾಗ ಗೋಮಾಳವಾಗಿದೆ. ಅದನ್ನು ಲೇ.ಮಹದೇವಮ್ಮ ಮತ್ತು ಇತರರು ಸಾಗುವಳಿ ಮಾಡುತ್ತಿದ್ದರು. ಅವರು ಭೂಮಿಯ ಹಕ್ಕಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
‘ಪ್ರಕರಣ ಕೋರ್ಟ್‌ನಲ್ಲಿದೆ. ಆರೇಳು ತಿಂಗಳಲ್ಲಿ ಸ್ಮಾರಕ ಪ್ರತಿಷ್ಠಾನದ ಪರವಾಗಿಯೇ ಆದೇಶ ಬರುವ ವಿಶ್ವಾಸವಿದೆ’ ಎಂದು ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.
‘ಸ್ಮಾರಕಕ್ಕೆ ತೆರಳುವ ಜಾಗ ಕಂದಾಯ ಇಲಾಖೆಗೆ ಸೇರಿದೆ. ತಾಲ್ಲೂಕು ಆಡಳಿತಕ್ಕೆ ಜಾಗ ವಹಿಸಿಕೊಡುವಂತೆ ಮನವಿ ಮಾಡಿದ್ದು, ಶೀಘ್ರ ಗುರುತಿಸಿ ನೀಡುವುದಾಗಿ ತಿಳಿಸಿದೆ’ ಎಂದರು.
ಸ್ಮಾರಕದ ದಾರಿ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರ ಕ್ರಮವಹಿಸುವಂತೆ ತಾಲ್ಲೂಕು ಆಡಳಿತಕ್ಕೆ ಸೂಚಿಸುವೆಪಿ.ಶಿವರಾಜು ಹೆಚ್ಚುವರಿ ಜಿಲ್ಲಾಧಿಕಾರಿ
ಮೈಸೂರಿನಲ್ಲಿ ಆದರೂ ವಿಷ್ಣು ಸ್ಮಾರಕಕ್ಕೆ ಯಾವುದೇ ಸಮಸ್ಯೆ ತಲೆದೋರದಂತೆ ಸರ್ಕಾರದವರು ನೋಡಿಕೊಳ್ಳಬೇಕುಮಹದೇವ್ ವಿಷ್ಣುವರ್ಧನ್ ಅಭಿಮಾನಿ ಬನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.