ADVERTISEMENT

ಸಾಮಾನ್ಯ ವಿಶ್ವಕೋಶದ 8, 9ನೇ ಸಂಪುಟ ಪ್ರಕಟಣೆಗೆ ಸಿದ್ಧ

ವಿಶ್ವಕೋಶ ಯೋಜನೆಗೆ ಮತ್ತೆ ಚಾಲನೆ, ನವೆಂಬರ್‌ ಅಂತ್ಯದೊಳಗೆ 2 ಸಂಪುಟ ಬಿಡುಗಡೆ

ಎನ್.ನವೀನ್ ಕುಮಾರ್
Published 13 ಅಕ್ಟೋಬರ್ 2019, 5:49 IST
Last Updated 13 ಅಕ್ಟೋಬರ್ 2019, 5:49 IST
ಕನ್ನಡ ವಿಶ್ವಕೋಶ ಸಂಪುಟಗಳು
ಕನ್ನಡ ವಿಶ್ವಕೋಶ ಸಂಪುಟಗಳು   

ಮೈಸೂರು: ಲೋಕಜ್ಞಾನದ ಎಲ್ಲ ವಿಷಯಗಳ ಕುರಿತು ಪೂರ್ಣ ಹಾಗೂ ನಿಖರ ಮಾಹಿತಿಯನ್ನು ಕನ್ನಡದಲ್ಲಿ ನೀಡುವ ಉದ್ದೇಶದಿಂದ ಆರಂಭವಾದ, ‘ವಿಶ್ವಕೋಶ‌’ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದೆ.

ಸಾಮಾನ್ಯ ವಿಶ್ವಕೋಶದ 8 ಮತ್ತು 9ನೇ ಸಂಪುಟಗಳ ಪರಿಷ್ಕರಣೆ ಕಾರ್ಯ ಭರದಿಂದ ಸಾಗಿದ್ದು, ನವೆಂಬರ್‌ ಅಂತ್ಯದೊಳಗೆ ಈ ಕೃತಿಗಳನ್ನು ಹೊರತರಲು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಿದ್ಧತೆ ನಡೆಸಿದೆ.

1973ರಲ್ಲಿ ಆರಂಭವಾದ ವಿಶ್ವಕೋಶ ಯೋಜನೆಯಲ್ಲಿ ‘ಸಾಮಾನ್ಯ ವಿಶ್ವಕೋಶ’ ಹಾಗೂ ‘ವಿಷಯ ವಿಶ್ವಕೋಶ’ ಎಂಬ ವಿಭಾಗಗಳಿದ್ದು, 2001ರ ವೇಳೆಗೆ ಸಾಮಾನ್ಯ ವಿಶ್ವಕೋಶದ 14 ಸಂಪುಟಗಳು ಪೂರ್ಣಗೊಂಡಿವೆ. ‘ವಿಷಯ ವಿಶ್ವಕೋಶ’ ಯೋಜನೆಯಡಿ ‌30 ಸಂಪುಟಗಳನ್ನು ಹೊರತರುವ ಉದ್ದೇಶವಿದ್ದು, ‘ಕರ್ನಾಟಕ’ ಸಂಪುಟ 1979ರಲ್ಲಿ ಪ್ರಕಟವಾಗಿತ್ತು. ಅದು 2007ರಲ್ಲಿ ಪರಿಷ್ಕರಣೆಯಾಗಿ ಎರಡು ಸಂಪುಟಗಳಲ್ಲಿ ಪ್ರಕಟವಾಯಿತು. ಆನಂತರ ಇತಿಹಾಸ ಮತ್ತು ಪುರಾತತ್ವ, ಭೂಗೋಳ ವಿಜ್ಞಾನ, ಪ್ರಾಣಿ ವಿಜ್ಞಾನ ವಿಶ್ವಕೋಶಗಳು ಪ್ರಕಟಗೊಂಡವು.

ADVERTISEMENT

2006ರಲ್ಲಿ ಸುವರ್ಣ ಕರ್ನಾಟಕ ಮಹೋತ್ಸವ ಪ್ರಯುಕ್ತ ವಿಶ್ವಕೋಶ ಸಂಪುಟಗಳ ಪರಿಷ್ಕರಣೆ ಹಾಗೂ ಮರುಮುದ್ರಣಕ್ಕೆ ಅಂದಿನ ಸರ್ಕಾರ ಅನುದಾನ ನೀಡಿತ್ತು. ಹೀಗಾಗಿ, ಸಾಮಾನ್ಯ ವಿಶ್ವಕೋಶದ 7 ಸಂಪುಟಗಳು ಪರಿಷ್ಕರಣೆಗೊಂಡು, 2014ರಲ್ಲಿ ಪುನರ್‌ ಮುದ್ರಣಗೊಂಡವು. ಆದರೆ, ಇದರ ಸಾರಥ್ಯ ವಹಿಸಿದ್ದ ಪ್ರೊ.ಹಾ.ತಿ.ಕೃಷ್ಣೇಗೌಡ ಅವರು ನಿವೃತ್ತರಾದದ್ದು, ವಿಷಯ ಪರಿಣತರ ಕೊರತೆ, ಸಂಸ್ಥೆಯ ನಿರ್ದೇಶಕರ ನಿರಾಸಕ್ತಿಯಿಂದಾಗಿ ಈ ಯೋಜನೆಗೆ ಗ್ರಹಣ ಹಿಡಿದಿತ್ತು. ಬಳಿಕ, ಸಂಸ್ಥೆಯ ನಿರ್ದೇಶಕರಾಗಿ ಬಂದ ಪ್ರೊ.ನೀಲಗಿರಿ ತಳವಾರ ಅವರ ಆಸಕ್ತಿಯಿಂದಾಗಿ ಈ ಯೋಜನೆಗೆ ಚಾಲನೆ ಸಿಕ್ಕಿದೆ.‌

ಸದ್ಯ, ವಿಷಯ ವಿಶ್ವಕೋಶದಲ್ಲಿ ಮಾನವಶಾಸ್ತ್ರ, ವೈದ್ಯ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಭೂವಿಜ್ಞಾನ, ಸಸ್ಯವಿಜ್ಞಾನ ಸಂಪುಟಗಳ ಕೆಲಸ ನಡೆದಿದ್ದು, ಈ ಐದೂ ಸಂಪುಟಗಳನ್ನು ಆರು ತಿಂಗಳಲ್ಲಿ ಹೊರತರುವ ಉದ್ದೇಶವಿದೆ. ಭಾಷಾ ವಿಜ್ಞಾನ, ರಂಗಭೂಮಿ, ಅರ್ಥಶಾಸ್ತ್ರ, ಲಲಿತಕಲೆಗಳು, ಮನೋವಿಜ್ಞಾನ, ಪತ್ರಿಕೋದ್ಯಮ ಸಂಪುಟಗಳಿಗೆ ಸಂಬಂಧಿಸಿದಂತೆ ಸೆ. 30ರಂದು ಸಂಪಾದಕ ಮಂಡಳಿ ಸಭೆ ನಡೆದಿದ್ದು, ವಿಷಯ ಆಯ್ಕೆ, ವ್ಯಾಪ್ತಿ, ವಿಸ್ತಾರಗಳ ಬಗ್ಗೆ ಚರ್ಚಿಸಲಾಗಿದೆ.

‘ವಿಶ್ವಕೋಶ ಯೋಜನೆಗೆ ಮರು ಚಾಲನೆ ನೀಡುವ ಪ್ರಸ್ತಾವಕ್ಕೆ ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಒಪ್ಪಿಗೆ ನೀಡಿದರು. ಈ ಯೋಜನೆಯ ಸಾರಥ್ಯ ವಹಿಸುವಂತೆ ನಿವೃತ್ತ ಪ್ರಾಧ್ಯಾಪಕ ಹಾ.ತಿ.ಕೃಷ್ಣೇಗೌಡ ಅವರಿಗೆ ಮನವಿ ಮಾಡಿದೆ. ವಿಜ್ಞಾನ ಉಪನ್ಯಾಸಕ ಸಾತನೂರು ದೇವರಾಜ್‌ ಸ್ವಇಚ್ಛೆಯಿಂದ ಮುಂದೆ ಬಂದರು’ ಎಂದು ನೀಲಗಿರಿ ತಳವಾರ ತಿಳಿಸಿದರು.

ಪ್ರತಿ ಸಂಪುಟವೂ 1,000– 1,200 ಪುಟಗಳನ್ನು ಒಳಗೊಂಡಿರುತ್ತದೆ. ಸಾಮಾನ್ಯ ವಿಶ್ವಕೋಶದಲ್ಲಿ ರಾಜ್ಯ, ದೇಶ ಹಾಗೂ ವಿದೇಶಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳ ಲೇಖನಗಳನ್ನು ಅಕಾರಾದಿಯಾಗಿ ನೀಡಲಾಗಿರುತ್ತದೆ. ವಿಷಯ ವಿಶ್ವಕೋಶದಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ ಎಂದರು.

10 ವರ್ಷಗಳಿಗೊಮ್ಮೆ ಪರಿಷ್ಕರಣೆ, ಮರುಮುದ್ರಣ

‘ವಿಶ್ವಕೋಶವನ್ನು ಪ್ರತಿ 10 ವರ್ಷಗಳಿಗೊಮ್ಮೆ ಪರಿಷ್ಕರಿಸಿ ಮರುಮುದ್ರಿಸಬೇಕೆಂಬ ನಿಯಮವಿದೆ. ಸಾಮಾನ್ಯ ವಿಶ್ವಕೋಶವು 14 ಸಂಪುಟಗಳನ್ನು ಒಳಗೊಂಡಿದ್ದರೂ, ಅದನ್ನು ಇನ್ನೂ ಒಂದು ಸಂಪುಟಕ್ಕೆ ವಿಸ್ತರಿಸಲಾಗುತ್ತದೆ. ಈ ಯೋಜನೆ ಮುಗಿಯುವ ಹೊತ್ತಿಗೆ 2,000ಕ್ಕೂ ಹೆಚ್ಚಿನ ಲೇಖನಗಳು ಉಳಿದಿದ್ದವು. ಅವುಗಳನ್ನು ಸೇರಿಸಿ ಮತ್ತೊಂದು ಸಂಪುಟ ಹೊರತರಲಾಗುವುದು’ ಎಂದು ಪ್ರೊ.ಹಾ.ತಿ.ಕೃಷ್ಣೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.