ADVERTISEMENT

ವಿವೇಕಾನಂದ, ಸಾವಿತ್ರಿಬಾಯಿ ಜೀವನ ಸ್ಫೂರ್ತಿ: ಈ.ಸಿ. ನಿಂಗರಾಜ್‌ ಗೌಡ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 13:12 IST
Last Updated 14 ಫೆಬ್ರುವರಿ 2026, 13:12 IST
   

ಮೈಸೂರು: ‘ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿಗೂ ಶಿಕ್ಷಣ, ಸೇವೆ ಮತ್ತು ಸ್ವಾಭಿಮಾನದ ಮೂಲಕ ಸಮಾಜವನ್ನು ಮುನ್ನಡೆಸುವ ಶಕ್ತಿಯಾಗಿವೆ. ಸಾವಿತ್ರಿಬಾಯಿ ಫುಲೆ ಅವರ ಜೀವನವು ಶಿಕ್ಷಣವೇ ಸಾಮಾಜಿಕ ಕ್ರಾಂತಿಯ ಮೂಲ ಎಂಬ ಸಂದೇಶ ನೀಡುತ್ತದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ. ನಿಂಗರಾಜ್‌ ಗೌಡ ಸ್ಮರಿಸಿದರು.

ಇಲ್ಲಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ಮೈಸೂರು ಕನ್ನಡ ವೇದಿಕೆಯಿಂದ ಶನಿವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ವಿವೇಕಾನಂದ ಭಾರತೀಯ ಆತ್ಮಚಿಂತನೆಯ ಜಾಗತಿಕ ರಾಯಭಾರಿ, ಯುವಶಕ್ತಿಗೆ ದಾರಿ ತೋರಿದ ಗುರು ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಆಧ್ಯಾತ್ಮಿಕ ನೆಲೆ ನೀಡಿದ ಚಿಂತಕ. ಭಾರತ ದೇಶ ಹಾಗೂ ಹಿಂದೂ ಧರ್ಮದ ತಾಕತ್ತನ್ನು ಇಡೀ ವಿಶ್ವಕ್ಕೆ ಸಾರಿದವರು. ಯುವಕರಿಗೆ ಸ್ಫೂರ್ತಿದಾತರು. ಅವರು ಕಟ್ಟಿದ ರಾಮಕೃಷ್ಣ ಆಶ್ರಮ ದೇಶದ ಉನ್ನತಿಗೆ ಕೆಲಸ ‌ಮಾಡುತ್ತಿದೆ. ಭಾರತ ವಿಶ್ವಗುರು ಆಗಬೇಕು ಎಂಬುದು ಅವರ ಕನಸಾಗಿತ್ತು’ ಎಂದರು.

ADVERTISEMENT

ಮೈಗೂಡಿಸಿಕೊಳ್ಳಬೇಕು: ‘ಸಾವಿತ್ರಿಬಾಯಿ ದೇಶದ ಮೊದಲ ಶಿಕ್ಷಕಿ. ಮಹಾನ್ ಸಮಾಜ ಸುಧಾರಕಿ. ಮಹಿಳಾ ಶಿಕ್ಷಣ, ದಲಿತರ ಹಕ್ಕುಗಳು ಮತ್ತು ಸಾಮಾಜಿಕ ಸಮಾನತೆಗಾಗಿ ಜೀವನವನ್ನೇ ಸಮರ್ಪಿಸಿದವರು. ಇಂತಹ ಮಹನೀಯರ ತತ್ವ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾ.ಸಿ. ದೊರೆಸ್ವಾಮಿ, ‘ರಾಜ್ಯದ ಯಾವುದೇ ಭಾಗದಲ್ಲಿ ಕನ್ನಡ ನೆಲ, ಜಲ, ಭಾಷೆ, ಗಡಿಯ ವಿಚಾರದಲ್ಲಿ ಧಕ್ಕೆ ಎದುರಾದಾಗ ಮೊದಲಿಗೆ ಧ್ವನಿ ಎತ್ತುವ ಕೆಲಸವನ್ನು ಮೈಸೂರು ಕನ್ನಡ ವೇದಿಕೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಪ್ರಧಾನ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ವೈಚಾರಿಕ ಚಿಂತಕರ ವೇದಿಕೆಯ ಅಧ್ಯಕ್ಷ ಕ್ಯಾತನಹಳ್ಖಿ ಪ್ರಕಾಶ್, ರೈತ ಮುಖಂಡ ಅರುಣ್‌ಕುಮಾರ್ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಮೈ.ಕ.ವೇ ಅಧ್ಯಕ್ಷ ಎಸ್.ಬಾಲಕೃಷ್ಣ, ‘ನಾಡು–ನುಡಿಗೆ ಧಕ್ಕೆಯಾದಾಗ ಸುಮ್ಮನಿರುವುದಿಲ್ಲ. ಎಲ್ಲ ಮಹನೀಯರ ಬಗ್ಗೆಯೂ ನಮಗೆ ಗೌರವವಿದೆ. ಅವರ ಜಯಂತಿ ಆಚರಿಸುತ್ತಿದ್ದೇವೆ. ಸಾಧಕರನ್ನು ಗೌರವಿಸುವ ಕೆಲಸವನ್ನೂ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸ್ವಾಮಿ ವಿವೇಕಾನಂದ ಹಾಗೂ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಭವಾನಿ ಹಾಡಿದರು. ನಿವೃತ್ತ ಶಿಕ್ಷಕ ಮನೋಹರ್‌ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.