ADVERTISEMENT

‘ವಿವೇಕಾನಂದ ಆಧುನಿಕ ವಿಜ್ಞಾನಿ’

ವಿವೇಕ ಗಾಥಾ– ಸ್ವಾಮಿ ವಿವೇಕಾನಂದ ಕುರಿತ ಬಹುಮಾಧ್ಯಮ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 3:11 IST
Last Updated 25 ನವೆಂಬರ್ 2025, 3:11 IST
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭ ಸಮಾರೋಪದಲ್ಲಿ ಸ್ವಾಮಿ ಮುಕ್ತಿದಾನಂದ, ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸ್ವಾಮಿ ಯುಕ್ತೇಶಾನಂದ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ
ಮೈಸೂರಿನ ಶ್ರೀರಾಮಕೃಷ್ಣ ಆಶ್ರಮದ ಶತಮಾನೋತ್ಸವ ಸಮಾರಂಭ ಸಮಾರೋಪದಲ್ಲಿ ಸ್ವಾಮಿ ಮುಕ್ತಿದಾನಂದ, ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಸ್ವಾಮಿ ಯುಕ್ತೇಶಾನಂದ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ   

ಮೈಸೂರು: ‘ವಿವೇಕಾನಂದರು ಆಧುನಿಕ ಸನ್ಯಾಸಿ ಮಾತ್ರವಲ್ಲ, ಆಧುನಿಕ ವಿಜ್ಞಾನಿಯೂ ಆಗಿದ್ದರು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ರಾಮಕೃಷ್ಣ ಆಶ್ರಮ ಶತಮಾನೋತ್ಸವ ಪ್ರಯುಕ್ತ ವಿದ್ಯಾಶಾಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿವೇಕ ಗಾಥಾ– ಸ್ವಾಮಿ ವಿವೇಕಾನಂದ ಕುರಿತ ಬಹುಮಾಧ್ಯಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಕ್ವಾಂಟಂ ವಿಜ್ಞಾನದ ಬಗ್ಗೆ ಸ್ವಾಮೀಜಿಗೆ ಅರಿವಿತ್ತು. ತಮ್ಮ ಅಧ್ಯಾತ್ಮ ಕ್ಷೇತ್ರದಲ್ಲೂ ಅತ್ಯಂತ ವೈಜ್ಞಾನಿಕವಾಗಿ ಸಾಧನೆ ಮಾಡಿ ಮಾರ್ಗದರ್ಶನ ನೀಡಿದ್ದಾರೆ’ ಎಂದರು.

‘ಭಾರತ ಉಳಿದರೆ ಅಳಿಯುವವರು ಯಾರು, ಭಾರತ ಅಳಿದರೆ ಉಳಿಯುವವರಾರು ಎಂಬ ಸ್ವಾಮೀಜಿಯ ಮಾತು ನಮ್ಮನ್ನು ಸದಾ ಎಚ್ಚರಿಸಬೇಕು. ವೇದಾಂತವನ್ನು ಮಾತನಾಡುವುದಲ್ಲ, ಅನುಷ್ಠಾನವೇ ಪ್ರಮುಖ ಎಂದು ಸಾರಿದ್ದಾರೆ’ ಎಂದು ಹೇಳಿದರು.

ADVERTISEMENT

‘ಆಧುನಿಕ ವಿಜ್ಞಾನದ ಆವಿಷ್ಕಾರವಾದ ರೋಬೊಟ್‌ಗಳು, ಮನುಷ್ಯ ತನ್ನನ್ನು ತಾನೇ ನಾಶಮಾಡಿಕೊಳ್ಳುವ ಹಾದಿಯಲ್ಲಿದ್ದಾನೆ ಎಂದು ಗುರುತಿಸುತ್ತಿವೆ, ನಾವು ನಮ್ಮ ಸೃಷ್ಟಿಕರ್ತನ ಉದ್ದೇಶವನ್ನು ಪೂರೈಸಲು ಜಗತ್ತಿಗೆ ಬಂದಿದ್ದೇವೆ ಎಂಬುದನ್ನು ಮರೆಯಬಾರದು. ಸ್ವಾಮಿ ವಿವೇಕಾನಂದರು ಹಾಗೂ ಆಶ್ರಮ ತೋರಿದ ಸೇವಾ ಮನೋಭಾವವನ್ನು ಹೊಂದಬೇಕು’ ಎಂದರು.

ಸ್ವಾಮಿ ಮುಕ್ತಿದಾನಂದ ಮಾತನಾಡಿ, ‘ಸ್ವಾಮೀಜಿಯವರು ತಮ್ಮ ಬದುಕಿನ ಮೇಲೆ ದಕ್ಷಿಣ ಭಾರತದ ಪ್ರಭಾವ ಅತ್ಯಂತ ಎಂದು ಹೇಳಿದ್ದರು. ಅದರಲ್ಲಿಯೂ ಮೈಸೂರನ್ನು ಹೆಚ್ಚು ಪ್ರಸ್ತಾಪಿಸಿದ್ದರು. ಗುರು ರಾಮಕೃಷ್ಣ ಹಾಗೂ ಸ್ವಾಮೀಜಿಯೂ ಸೇರಿದಂತೆ ದೇಶದಲ್ಲಿರುವ ಅನೇಕ ಮಹನೀಯರ ಆದರ್ಶಮಯ ಚಿಂತನೆಯನ್ನು ಪ್ರತಿಯೊಬ್ಬರೂ ಅನುಷ್ಠಾನಕ್ಕೆ ತಂದಲ್ಲಿ ವಿಶ್ವಗುರು ಆಗುವುದು ಸಾಧ್ಯ’ ಎಂದರು.

ಕಾರ್ತಿಕ್‌ ಸರಗೂರು ಪರಿಕಲ್ಪನೆ ಮತ್ತು ಪ್ರವೀಣ್‌ ಡಿ.ರಾವ್‌ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ವಿವೇಕ ಗಾಥಾ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನಸೆಳೆಯಿತು. 60 ಕಲಾವಿದರು ನಾಟಕ, ಸಂಗೀತ, ಎ.ಐ ತಂತ್ರಜ್ಞಾನ ಬಳಕೆ ಮೂಲಕ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಸಂದೇಶ ಅನಾವರಣಗೊಳಿಸಿದರು.

ವಿಶ್ರಾಂತ ಕುಲಪತಿಗಳಾದ ಕೆ.ಚಿದಾನಂದಗೌಡ, ಜೆ.ಶಶಿಧರ ಪ್ರಸಾದ್‌, ಜಿ.ಹೇಮಂತ ಕುಮಾರ್‌, ಸಾಹಿತಿ ಸಿ.ನಾಗಣ್ಣ, ತಾರಿಣಿ ಚಿದಾನಂದಗೌಡ, ಆರ್‌ಎಸ್‌ಎಸ್‌ ಮುಖಂಡ ಮಾ.ವೆಂಕಟರಾಮು, ವಿಜಯ ವಿಠ್ಠಲ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಾಸುದೇವ ಭಟ್‌, ರಾಮಕೃಷ್ಣ ವಿದ್ಯಾಶಾಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಸುಜಯ್‌ಕುಮಾರ್‌, ಸಂಘದ ಕೆ.ನರೇಂದ್ರ, ಎನ್‌.ಆರ್‌.ಅಶೋಕ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.