ADVERTISEMENT

‌ಮೈಸೂರು | ಕರಗದ ‘ತ್ಯಾಜ್ಯ ಬೆಟ್ಟ’: ವಿದ್ಯಾರಣ್ಯಪುರಂ ನಿವಾಸಿಗಳಿಗೆ ರೋಗ ಭೀತಿ

ರಮೇಶ ಕೆ
Published 3 ಮಾರ್ಚ್ 2025, 6:45 IST
Last Updated 3 ಮಾರ್ಚ್ 2025, 6:45 IST
   

ಮೈಸೂರು: ‘ಹೊಗೆಯಿಂದ ವೃದ್ಧರಿಗೆ, ಮಕ್ಕಳಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದೆ’, ಮಳೆಗಾಲದಲ್ಲಂತೂ ಜೋರಾಗಿ ಗಾಳಿ ಬೀಸಿದರೆ ತ್ಯಾಜ್ಯ ಕೊಳೆತು ಕಿಲೋ ಮೀಟರ್‌ವರೆಗೂ ಕೆಟ್ಟ ವಾಸನೆ ಬರುತ್ತದೆ, ಈಚೆಗೆ ಪ್ಲಾಸ್ಟಿಕ್‌ ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದರಿಂದ ವಿಷಕಾರಿ ಅನಿಲ ಆವರಿಸಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು, ಬದುಕು ದುಸ್ತರವಾಗಿದೆ...’

ನಗರದ ವಿದ್ಯಾರಣ್ಯಪುರಂನ ಘನ ತ್ಯಾಜ್ಯ ಸಂಸ್ಕರಣಾ ಘಟಕದ ಅಕ್ಕಪಕ್ಕ ಬಡಾವಣೆಗಳ ನಿವಾಸಿಗಳು ಅಳಲು ತೋಡಿಕೊಂಡಿದ್ದು ಹೀಗೆ.

ಕಣ್ಣು ಹಾಯಿಸಿದಲ್ಲೆಲ್ಲಾ ಬೆಟ್ಟದಂತೆ ಕಾಣಿಸುವ ತ್ಯಾಜ್ಯ ರಾಶಿ, ಅಲ್ಲಿ ಜೆಸಿಬಿ ಯಂತ್ರಗಳಿಂದ ವಿಲೇವಾರಿ ಕಾರ್ಯವೂ ನಡೆಯುತ್ತಿತ್ತು, ಪರ್ವತದಂತೆ ಕಾಣುತ್ತಿದ್ದ ಕಸದ ತುಂಬ ಬಹುಪಾಲು ನಿಷೇಧಿತ ಪ್ಲಾಸ್ಟಿಕ್‌ ಇತ್ತು.

ADVERTISEMENT

ಇಲ್ಲಿನ ತ್ಯಾಜ್ಯ ವಿಲೇವಾರಿ ಘಟಕದ ಕಸದ ರಾಶಿಗೆ ಆಗಾಗ ಬೆಂಕಿ ಬೀಳುತ್ತಿದ್ದು, ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈಚೆಗೆ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಬಿದ್ದು ವಿಷಕಾರಕ ದಟ್ಟ ಹೊಗೆ ಹೊಮ್ಮಿತ್ತು. ಫಾರಂ ಸುತ್ತಲಿನ ವಿದ್ಯಾರಣ್ಯಪುರಂ, ಜೆ.ಪಿ.ನಗರ, ವಿಶ್ವೇಶ್ವರನಗರ, ಮುನೇಶ್ವರ ನಗರ, ಕನಕಗಿರಿ, ಚಾಮುಂಡಿಪುರಂ, ಗುಂಡೂರಾವ್ ನಗರ ಮುಂತಾದೆಡೆ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. 

ಘಟಕ ಪಕ್ಕದ ವಿಶ್ವೇಶ್ವರನಗರದಲ್ಲಿ ಶಾಲಾ, ಕಾಲೇಜುಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿದ್ದು, ತ್ಯಾಜ್ಯದ ಸಮಸ್ಯೆಗೆ ಇಲ್ಲಿನ ಸಾರ್ವಜನಿಕರು ಬೇಸತ್ತಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವಂತೆ ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ.

ನಗರದಲ್ಲಿ ನಿತ್ಯ 500ರಿಂದ 600 ಟನ್‌ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಶೇ 55ರಷ್ಟು ಹಸಿ ಹಾಗೂ ಶೇ 45ರಷ್ಟು ಒಣ ಕಸ ಸೇರಿರುತ್ತದೆ. ವಿದ್ಯಾರಣ್ಯಪುರಂ, ಕೆಸರೆ ಹಾಗೂ ರಾಯನಕೆರೆಗಳಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. ಜೊತೆಗೆ ಶೂನ್ಯ ಘನ ತ್ಯಾಜ್ಯ ನಿರ್ವಹಣಾ ಘಟಕಗಳೂ ಇವೆ. ಆದರೂ ಕಸದ ರಾಶಿ ಕರಗುತ್ತಿಲ್ಲ. ಸುಮಾರು 22 ಎಕರೆ ಜಾಗದಲ್ಲಿ ತ್ಯಾಜ್ಯ ಸಂಗ್ರಹವಾಗಿದೆ.

ಸಂಸ್ಕರಣೆ, ವಿಲೇವಾರಿಗೆ ಗುತ್ತಿಗೆ: ವಿದ್ಯಾರಣ್ಯಪುರಂ ಘಟಕದಲ್ಲಿ ಕಳೆದ ಹದಿನೈದು ವರ್ಷಗಳಿಂದ ಉಳಿದ 6 ಲಕ್ಷ ಟನ್‌ ‘ಪಾರಂಪರಿಕ ತ್ಯಾಜ್ಯ’ ಸಂಸ್ಕರಣೆಗೆ ಈಗಾಗಲೇ ಪಾಲಿಕೆಯು ಖಾಸಗಿಯವರಿಗೆ ಗುತ್ತಿಗೆ ನೀಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಟನ್‌ ಸಂಸ್ಕರಣೆಯಾಗಿ ವಿಲೇವಾರಿಯಾಗಿದೆ.

‘ಗುತ್ತಿಗೆದಾರರು ಕಳೆದ ಸೆಪ್ಟೆಂಬರ್‌ನಿಂದ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿ ಕೆಲಸವನ್ನು ಆರಂಭಿಸಿದ್ದಾರೆ. ವಿದ್ಯಾರಣ್ಯಪುರಂ ಘಟಕ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಶೆಡ್‌ ನಿರ್ಮಾಣ ಕೆಲಸ ನಡೆಯುತ್ತಿದೆ. ನಗರದ ಖಾಲಿ ಸ್ಥಳಗಳಲ್ಲಿ ಕಸ ಸುರಿಯುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪಾಲಿಕೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ಪಿ.ಕೆ. ಮೋಹನ ಕುಮಾರ ಹಾಗೂ ಮಧುಕರ್‌ ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದರು. 

ಕಸ ವಿಲೇವಾರಿಗೆ ಕ್ರಮ

‘ಕಸದ ರಾಶಿಗೆ ಬೆಂಕಿ ಬೀಳದಂತೆ ಮುನ್ನೆಚ್ಚರಿಕೆಯಾಗಿ ನೀರಿನ ಪಂಪ್‌ ಹಾಗೂ ಹೈಡ್ರೇಟ್ಸ್‌ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಗ್ನಿ ಅವಘಡಗಳಾಗದಂತೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರಣ್ಯಪುರಂ ಘಟಕದಲ್ಲಿರುವ ಪಾರಂಪರಿಕ ತ್ಯಾಜ್ಯದ‌ಲ್ಲಿ ಶೇ 20ರಷ್ಟು ಸಂಸ್ಕರಣೆ ಮಾಡಿರುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಎರಡು ವರ್ಷದಲ್ಲಿ ಮುಗಿಸುವ ಲೆಕ್ಕಾಚಾರವಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಹಂತ ಹಂತವಾಗಿ ತ್ಯಾಜ್ಯ ನಿರ್ವಹಣೆಗೆ ಗಮನ ಹರಿಸುತ್ತೇನೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಶೇಖ್‌ ತನ್ವೀರ್ ಆಸೀಫ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಂಚೆ ಸಂಗ್ರಹವಾಗುತ್ತಿದ್ದ ಮಿಶ್ರ ತ್ಯಾಜ್ಯ ಪ್ರಮಾಣ ಕಡಿಮೆಯಾಗಿ, ಬೇರ್ಪಡಿಸುವಿಕೆ ಸುಧಾರಿಸಿದೆ. ಕಳೆದ ಹದಿನೈದು ದಿನಗಳಿಂದ ಪ್ರತಿ ದಿನ ಬೆಳಿಗ್ಗೆ ವಾರ್ಡ್‌ಗಳಿಗೆ ಹೋಗಿ ಪರಿಶೀಲಿಸುತ್ತಿದ್ದೇನೆ. ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ದಂಡ ಹಾಕುವುದು, ಫ್ಲೆಕ್ಸ್‌ ತೆರವು ಕೆಲಸವೂ ನಡೆಯುತ್ತಿದೆ. ಮೂರು ತಿಂಗಳಲ್ಲಿ ಹಳೆ ತ್ಯಾಜ್ಯಕ್ಕೆ ಹೊಸ ಕಸ ಸೇರದಂತೆ ನೋಡಿಕೊಳ್ಳುತ್ತೇವೆ’ ಎಂದರು.

‘ತ್ಯಾಜ್ಯ ನಿರ್ವಹಣೆಯೇ ತಲೆನೋವು’

ಹುಣಸೂರು: ನಗರ ಬೆಳೆದಂತೆ ತ್ಯಾಜ್ಯ ಸಂಗ್ರಹ ಪ್ರಮಾಣ ಹೆಚ್ಚಾಗುತ್ತಿದ್ದು, ನಗರಸಭೆಗೆ ನಿರ್ವಹಣೆಯೇ ತಲೆನೋವಾಗಿದೆ. ನಗರದಿಂದ ಮೂರು ಕಿ.ಮೀ. ದೂರದ 4.20 ಎಕರೆ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಅಲ್ಲಿ ವೈಜ್ಞಾನಿಕ ನಿರ್ವಹಣೆ ಆಗದ ಕಾರಣ ಕೇಂದ್ರದ 1 ಕಿ.ಮೀ. ವ್ಯಾಪ್ತಿಯಲ್ಲಿ ದುರ್ವಾಸನೆ ಆವರಿಸಿಕೊಂಡು ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಸಾವಯವ ಗೊಬ್ಬರ ಉತ್ಪತ್ತಿ ಮಾಡುವ ಘಟಕ ಸ್ಥಗಿತವಾಗಿ ನಿರ್ವಹಣೆ ಮತ್ತಷ್ಟು ಜಟಿಲವಾಗಿದೆ.

‘ತ್ಯಾಜ್ಯ ಸಂಗ್ರಹ ಕೇಂದ್ರದ ಸುತ್ತಲಿನ ಕೃಷಿಕರು ಬೇಸಾಯ ಮಾಡಲು ಆಗದಷ್ಟು ದುರ್ವಾಸನೆ ಬೀರುತ್ತಿದೆ. ಸಮಸ್ಯೆ ಬಗೆಹರಿಸಲು ನಗರಸಭೆ ಅಗತ್ಯ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ರೈತರು ಅನಾರೋಗ್ಯಕ್ಕೆ ಒಳಗಾಗಬೇಕಾಗುತ್ತದೆ’ ಎಂದು ಪ್ರಗತಿಪರ ರೈತ ಧರ್ಮರಾಜ್ ಅಳಲು ತೋಡಿಕೊಂಡರು.

‘ಘಟಕದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಜೈವಿಕ ವಿಧಾನದಲ್ಲಿ ಸಂಸ್ಕರಣೆ ಮಾಡಬೇಕಿದೆ, ಶೀಘ್ರ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರದಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಬಡಾವಣೆ ನಿರ್ಮಾಣ ಹಾಗೂ ಅಂಗಡಿಗಳನ್ನು ತೆರೆಯದಂತೆ ಸೂಚನೆ ನೋಡಲಾಗಿದೆ’ ಎಂದು ಪರಿಸರ ಎಂಜಿನಿಯರ್ ಸೌಮ್ಯಾ ತಿಳಿಸಿದರು.

‘13 ಟನ್ ಕಸ ಸಂಗ್ರಹ’

ಕೆ.ಆರ್.ನಗರ: ಪಟ್ಟಣದಲ್ಲಿ ನಿತ್ಯ ಸುಮಾರು 13 ಟನ್ ಕಸ ಸಂಗ್ರಹವಾಗುತ್ತಿದ್ದು, ಪಟ್ಟಣದಿಂದ 4 ಕಿ.ಮೀ. ದೂರದ ಮೂಡಲಕೊಪ್ಪಲು ಬಳಿಯ ಘನ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಸಂಸ್ಕರಣೆ ಮಾಡಲಾಗುತ್ತಿದೆ.

‘ಘಟಕದಲ್ಲಿ ಗೊಬ್ಬರ ತಯಾರಿಸಲಾಗುತ್ತಿದೆ. ಈ ಹಿಂದೆ ಸಂಗ್ರಹವಾದ ಸುಮಾರು 6ಸಾವಿರ ಟನ್ ತಾಜ್ಯ ವಿಲೇವಾರಿಗೆ ಟೆಂಡರ್ ಕರೆಯಲಾಗಿದೆ. ಸಂಸ್ಕರಣೆಗೆ ಈಗಿರುವ ಸ್ಥಳ ಸಾಕಾಗುತ್ತಿಲ್ಲ. ಘಟಕದ ಪಕ್ಕದಲ್ಲಿಯೇ ರೈತರೊಬ್ಬರು 1ಎಕರೆ ಜಮೀನು ಕೊಡಲು ಮುಂದೆ ಬಂದಿದ್ದರಿಂದ ಅವರ ಜಮೀನು ಖರೀದಿಗಾಗಿ ಕ್ರಮ ಕೈಗೊಳ್ಳಲಾಗಿದೆ. 4 ವರ್ಷಗಳ ಹಿಂದೆ ಕಸದ ರಾಶಿಗೆ ಬೆಂಕಿ ಬಿದ್ದು ತೊಂದರೆಯಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಅಂತಹ ಘಟನೆ ನಡೆದಿಲ್ಲ’ ಎಂದು ಕೆ.ಆರ್.ನಗರ ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್ ಹೇಳಿದರು

‘ಗ್ರಾಮದ ಸಮೀಪ ಘನ ತ್ಯಾಜ್ಯ ಸಂಸ್ಕರಣಾ ಘಟಕವಿದೆ. ಸಂಜೆ ಆಗುತ್ತಿದ್ದಂತೆ ದುರ್ವಾಸನೆ ಬೀರುತ್ತದೆ. ಇದರಿಂದ ಮಕ್ಕಳು, ವೃದ್ಧರು ಸೇರಿದಂತೆ ಹಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ಘಟಕದ ಅಕ್ಕಪಕ್ಕದ ರೈತರಿಗೂ ತೊಂದರೆಯಾಗಿದೆ’ ಎಂದು ಮೂಡಲಕೊಪ್ಪಲು ಗ್ರಾಮದ ಕೃಷ್ಣೇಗೌಡ ಸಮಸ್ಯೆ ಹೇಳಿಕೊಂಡರು.

ಯಾರು ಏನಂದರು?

ಜಾಗೃತಿ ಮೂಡಿಸಬೇಕು

ವಿದ್ಯಾರಣ್ಯಪುರಂ ಘಟಕಕ್ಕೆ ಹೆಚ್ಚು ಪ್ರಮಾಣದ ಕಸ ಬರುತ್ತಿದೆ. ಕೊಳವೆ ಬಾವಿಗಳ ಅಂತರ್ಜಲ ಮಲಿನ ವಾಗುತ್ತಿದೆ. ವಾಯುಮಾಲಿನ್ಯವೂ ಆಗುತ್ತಿದೆ. ಈಚೆಗೆ ಬೆಂಕಿ ಬಿದ್ದು ಹಾರಿಸಲು ಒಂದು ವಾರ ಸಮಯ ತೆಗೆದುಕೊಂಡರು. ಈ ಭಾಗದ ಜನರಿಗೆ ಉಸಿರಾಟ, ಚರ್ಮದ ಸಮಸ್ಯೆ ಆಗುತ್ತಿದೆ. ಪ್ಲಾಸ್ಟಿಕ್‌ ಬಳಕೆ ಕುರಿತು ಜಾಗೃತಿ ಮೂಡಿಸಬೇಕು. ಜಿಲ್ಲಾಡಳಿತ ಹಾಗೂ ಪಾಲಿಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗಳ್ಳಬೇಕು.

ಭೈರಪ್ಪ, ಮಾಜಿ ಮೇಯರ್‌

ಕಾಡಿದ ಉಸಿರಾಟ ಸಮಸ್ಯೆ

ಶೇ 60ರಷ್ಟು ಹಿರಿಯ ನಾಗರಿಕರಿದ್ದಾರೆ. ತ್ಯಾಜ್ಯಕ್ಕೆ ಬೆಂಕಿ ಬಿದ್ದಿದ್ದರಿಂದ ಹೊಗೆ ಆವರಿಸಿತ್ತು, ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತು. ಕೆಲವರಿಗೆ ಆಸ್ತಮಾ ಇದೆ. ಸೊಳ್ಳೆ ಕಾಟ, ಆದಷ್ಟು ಬೇಗ ಪಾಲಿಕೆಯವರು ತ್ಯಾಜ್ಯದ ಗುಡ್ಡವನ್ನು ಸಂಸ್ಕರಿಸಿ ವಿಲೇವಾರಿ ಮಾಡಬೇಕು. ಈ ಬಗ್ಗೆ ನಿವಾಸಿಗಳೆಲ್ಲಾ ಜನಪ್ರತಿನಿಧಿಗಳ ಗಮಕ್ಕೂ ತಂದಿದ್ದೇವೆ, ಶೀಘ್ರ ಪರಿಹಾರ ಕಂಡುಹಿಡಿಯಬೇಕು.

ಗೋಪಿನಾಥ್‌, ಅಪಾರ್ಟ್‌ಮೆಂಟ್‌ ನಿವಾಸಿ, ವಿಶ್ವೇಶ್ವರನಗರ

ದಟ್ಟ ಹೊಗೆ ಬಂತು

ಈಚೆಗೆ ಕಸಕ್ಕೆ ಬೆಂಕಿ ಬಿದ್ದಿದ್ದರಿಂದ ದಟ್ಟ ಹೊಗೆ, ದೂಳು ಬಂತು. ಒಂದು ವಾರ ಸಮಸ್ಯೆ ಇತ್ತು, ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿತ್ತು. ಮಳೆಗಾಲದಲ್ಲಂತೂ ವಿಪರೀತ ವಾಸನೆ ಬರುತ್ತದೆ. ಕೆಲವರಿಗೆ ಚರ್ಮದ ಅಲರ್ಜಿ ಆಗಿದೆ. ಅಪಾರ್ಟ್‌ಮೆಂಟ್‌ನಲ್ಲಿದ್ದ ನನ್ನ ಮಗ ತ್ಯಾಜ್ಯದ ಸಮಸ್ಯೆಯಿಂದ ಬೇಸತ್ತು ಪ್ಲಾಟ್‌ಅನ್ನೇ ಮಾರಾಟ ಮಾಡಿ ಬೇರೆ ಕಡೆ ಹೋಗಿ ನೆಲೆಸಿದ. ಈ ಬಗ್ಗೆ ದೂರು ನೀಡಲು ಪಾಲಿಕೆ ಸದಸ್ಯರಿಲ್ಲ, ಸಂಬಂಧಪಟ್ಟವರು ಗಮನಹರಿಸಬೇಕು, ವೃದ್ಧರು, ಮಕ್ಕಳ ಆರೋಗ್ಯ ಕಾಪಾಡಬೇಕು.

- ವಿ.ಸತ್ಯನಾರಾಯಣ, ಜೆ.ಪಿ.ನಗರ ನಿವಾಸಿ

ವಾಸಿಸಲು ಕಷ್ಟದ ಸ್ಥಿತಿ

ವಿಲೇವಾರಿ ಮಾಡಲಾಗದಷ್ಟು ಗುಡ್ಡದ ರೀತಿ ಕಸ ಸಂಗ್ರಹವಾಗಿದೆ. ಜೆ.ಪಿ.ನಗರ, ನಂಜನಗೂಡು ರಸ್ತೆ ಭಾಗದ ನಿವಾಸಿಗಳು ವಾಸಿಸಲು ಕಷ್ಟವಾಗುತ್ತಿದೆ. ಈ ಭಾಗದ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು. ಸ್ವಚ್ಛನಗರಿ ಹೆಸರಿಗೆ ಕಳಂಕ ಬರದಂತೆ ನೋಡಿಕೊಳ್ಳಬೇಕು.

- ಕೆ.ಎ.ಸಿದ್ಧಲಿಂಗಪ್ಪ, ಲಯನ್ಸ್‌ ಕ್ಲಬ್‌ ಅಧ್ಯಕ್ಷ, ಜೆ.ಪಿ ನಗರ

ನಿರ್ಜನ ಪ್ರದೇಶದಲ್ಲಿ ನಿರ್ವಹಣೆ

ತಿ.ನರಸೀಪುರ‌ ತಾಲ್ಲೂಕಿನ ಕೂಡ್ಲೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಘನ ತ್ಯಾಜ್ಯ ಸಂಸ್ಕರಣೆ ಮಾಡಲಾಗುತ್ತಿದೆ. ಸುತ್ತಮುತ್ತ ಸಾರ್ವಜನಿಕರು ವಾಸಿಸುತ್ತಿಲ್ಲ. ರಾಸಾಯನಿಕ ಸಿಂಪಡಿಸಿ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. 

- ವಸಂತಕುಮಾರಿ, ಪುರಸಭಾ ಮುಖ್ಯಾಧಿಕಾರಿ, ತಿ.ನರಸೀಪುರ‌

ಪೂರಕ ಮಾಹಿತಿ: ಎಚ್‌.ಎಸ್‌.ಸಚ್ಚಿತ್, ಪಂಡಿತ್ ನಾಟೀಕರ್, ಎಂ.ಮಹದೇವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.