ಆರ್. ಜಿತೇಂದ್ರ
ಮೈಸೂರು: ಜಂಬೂ ಸವಾರಿಯೊಂದಿಗೆ ನಾಡಹಬ್ಬ ದಸರಾ ಸಂಪನ್ನಗೊಂಡರೂ ಸಾಂಸ್ಕೃತಿಕ ನಗರಿಯಲ್ಲಿ ಇನ್ನೂ ಸಂಭ್ರಮ ಮಾತ್ರ ನಿಂತಿಲ್ಲ. ಆಹಾರ ಮೇಳ, ದೀಪಾಲಂಕಾರ ಸೇರಿದಂತೆ ಹಲವು ಕಾರ್ಯಕ್ರಮಗಳು ಮುಂದುವರಿದಿದ್ದು, ವಾರಾಂತ್ಯದಲ್ಲಿ ಜನಜಾತ್ರೆಯೇ ಸೇರುತ್ತಿದೆ.
ದಸರೆಯ ಪ್ರಮುಖ ಆಕರ್ಷಣೆಗಳಲ್ಲಿ ದೀಪಾಲಂಕಾರ ಸಹ ಒಂದಾಗಿದೆ. ದಸರೆಯ ನಂತರವೂ ‘ಬೆಳಕಿನ ದಸರೆ’ ಮುಂದುವರಿದಿದ್ದು, ಅ. 12ರವರೆಗೂ ದೀಪಾಲಂಕಾರವೂ ಜನರನ್ನು ರಂಜಿಸಲಿದೆ. ಈ ಬಾರಿ ನಗರದ 136 ಕಿ.ಮೀ. ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಪ್ರಮುಖ ಕಡೆಗಳಲ್ಲಿ ಎಲ್ಇಡಿ ಬಲ್ಬ್‌ಗಳಿಂದ ನಿರ್ಮಿಸಲಾದ 80 ವಿವಿಧ ಪ್ರತಿಕೃತಿಗಳನ್ನು ಇರಿಸಲಾಗಿದೆ. ರಾತ್ರಿ ದೀಪಗಳ ಬೆಳಕಿನಲ್ಲಿ ಹೊಳೆಯುವ ನಗರಿಯನ್ನು ಕಣ್ತುಂಬಿಕೊಳ್ಳಲು ಜನರ ದಂಡೇ ಸೇರುತ್ತಿದೆ.
ದಸರೆಯ ಸಂದರ್ಭ ಜನಜಂಗುಳಿಯಲ್ಲಿ ಓಡಾಡಲು ಆಗದವರು ಈಗ ರಸ್ತೆಗೆ ಇಳಿಯುತ್ತಿದ್ದಾರೆ. ಹೀಗಾಗಿ ಶನಿವಾರವೂ ನಗರದ ರಸ್ತೆಗಳು ಪ್ರವಾಸಿಗರು– ಸ್ಥಳೀಯರಿಂದ ತುಂಬಿತ್ತು. ಸಯ್ಯಾಜಿರಾವ್ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು–ಮೈಸೂರು ಹೆದ್ದಾರಿ ಪೂರ್ತಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ.
ಕೆ.ಆರ್.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್‌ಹೌಸ್ ಸೇರಿದಂತೆ ನಗರದ ಹೃದಯಭಾಗದ ವೃತ್ತಗಳು ದಸರೆಯ ನಂತರವೂ ಜನರಿಂದ ತುಂಬಿವೆ.
ದೀಪಾಲಂಕಾರದ ವೀಕ್ಷಣೆಗೆಂದೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ‘ಅಂಬಾರಿ’ ಬಸ್‌ಗಳ ವ್ಯವಸ್ಥೆ ಮಾಡಿದೆ. ದೀಪಾಲಂಕಾರ ನಡೆಯುವಷ್ಟು ದಿನವೂ ಪ್ರತಿನಿತ್ಯ ಸಂಜೆ ಈ ಬಸ್‌ಗಳು ಪ್ರವಾಸಿಗರನ್ನು ‘ನಗರ ಪ್ರದಕ್ಷಿಣೆ’ ಮಾಡಿಸಲಿವೆ.
ಇಂದು ಕೊನೆ:
ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದಿರುವ ಆಹಾರ ಮೇಳವು ಗ್ರಾಹಕರಿಗಾಗಿ ತೆರೆದಿದ್ದು, ಭಾನುವಾರವೂ ಖಾದ್ಯ ವೈವಿಧ್ಯ ಸವಿಯಲು ಗ್ರಾಹಕರಿಗೆ ಅವಕಾಶ ಇರಲಿದೆ. ಸೆ. 22ರಂದು ಮೇಳಕ್ಕೆ ಚಾಲನೆ ದೊರೆತಿದ್ದು, 160 ಮಳಿಗೆಗಳಲ್ಲಿ ಬಗೆಬಗೆಯ ಖಾದ್ಯ ವೈವಿಧ್ಯಗಳು ಜನರನ್ನು ತಲುಪಿವೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಖಾದ್ಯಗಳಿಗೂ ಜನರು ಒಲವು ತೋರಿದ್ದಾರೆ.
‘ದಸರಾ ಮುಗಿದರೂ ಆಹಾರ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಇದೆ. ಶನಿವಾರವೂ 60 ಸಾವಿರದಿಂದ 75 ಸಾವಿರದಷ್ಟು ಮಂದಿ ಭೇಟಿ ನೀಡಿದ್ದಾರೆ. ಸಂಜೆ ಹೊತ್ತು ಪ್ರತಿ ಗಂಟೆಗೆ ಹತ್ತು ಸಾವಿರದಷ್ಟು ಜನರು ಬರುತ್ತಿದ್ದಾರೆ’ ಎನ್ನುತ್ತಾರೆ ಆಹಾರ ಮೇಳ ಉಪಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ್.
ಪರಿಸರ ಪಾಠ:
‘ಆಹಾರ ಮೇಳದಲ್ಲಿ ಒಟ್ಟಾರೆ 1200 ಟನ್‌ನಷ್ಟು ಪ್ಲಾಸ್ಟಿಕ್ ಬಾಟಲ್‌ಗಳು ಸಂಗ್ರಹ ಆಗಿದ್ದು, ಇದನ್ನು ಪರಿಸರ ಸ್ನೇಹಿ ಮರುಬಳಕೆಗೆ ಯೋಜಿಸಲಾಗಿದೆ. ಇದಲ್ಲದೇ ನಿತ್ಯ 12 ಟನ್ ಕಸ ಸಂಗ್ರಹಣೆ ಆಗಿದೆ. ಕಾರ್ಯಕ್ರಮದ ವೇದಿಕೆಯಲ್ಲಿ ಪ್ರತಿನಿತ್ಯ ಪರಿಸರ ಪಾಠ, ಅರಣ್ಯ ಸಂರಕ್ಷಣೆ, ಸೈಬರ್ ಸುರಕ್ಷತೆ ಮೊದಲಾದ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿದ್ದೇವೆ. ಭಾನುವಾರ ಸಂಜೆ ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿ ಅವಘಡ ಸಂದರ್ಭದಲ್ಲಿನ ಎಚ್ಚರಿಕೆ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಲಿದ್ದಾರೆ’ ಎನ್ನುತ್ತಾರೆ ಅವರು.
ಈ ಬಾರಿಯ ಆಹಾರ ಮೇಳಕ್ಕೆ ಅಂದಾಜು 15 ಲಕ್ಷ ಮಂದಿ ಭೇಟಿ ನೀಡಿದ್ದಾರೆ. ಆಯುಧಪೂಜೆಯ ಆಚೀಚಿನ ದಿನಗಳಲ್ಲಿ ನಿತ್ಯ ಲಕ್ಷಕ್ಕೂ ಅಧಿಕ ಜನರು ಬಂದಿದ್ದಾರೆಚಂದ್ರಶೇಖರ್ ಕಾರ್ಯಾಧ್ಯಕ್ಷ ಆಹಾರ ಮೇಳ ಉಪಸಮಿತಿ
ಮೈಸೂರಿನ ರಸ್ತೆಗಳನ್ನು ದೀಪಾಲಂಕಾರದಲ್ಲಿ ನೋಡುವುದು ವಿಶಿಷ್ಟ ಅನುಭವ. ದಸರೆ ಮುಗಿದ ಬಳಿಕ ಇಲ್ಲಿನ ಬೆಳಕಿನ ಸಿರಿಯನ್ನು ವೀಕ್ಷಿಸಲು ಬಂದಿದ್ದೇವೆಪವನ್ ಪ್ರವಾಸಿಗ ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.