ಸಿದ್ದರಾಮಯ್ಯ
ಮೈಸೂರು: ‘ನಾವು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ವನ್ನು ಟಾರ್ಗೆಟ್ ಮಾಡುತ್ತಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾವುದೇ ಸಂಘ–ಸಂಸ್ಥೆಯಾಗಲಿ ಸರ್ಕಾರಿ ಜಾಗಗಳಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ಮುನ್ನ ಅನುಮತಿ ಪಡೆಯಬೇಕು. ಈ ನಿಟ್ಟಿನಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿ ಇದ್ದಾಗಲೇ ಆ ಬಗ್ಗೆ ಸುತ್ತೋಲೆ ಹೊರಡಿಸಿದ್ದರು. ಅದನ್ನು ಈಗ ನಾವು ಅನುಷ್ಠಾನಕ್ಕೆ ತಂದಿದ್ದೇವಷ್ಟೆ. ಅವರು ಕ್ರಮ ಕೈಗೊಂಡಿದ್ದಾಗ ಆರ್‌ಎಸ್‌ಎಸ್‌ನವರು ಏಕೆ ವಿರೋಧಿಸಲಿಲ್ಲ?’ ಎಂದು ಕೇಳಿದರು.
‘ಈ ವಿಷಯದಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ. ಜನತೆ, ಬಡವರ ಕೆಲಸವನ್ನು ಅವರು ಮಾಡುವುದೇ ಇಲ್ಲ. ಸದಾ ರಾಜಕಾರಣದಲ್ಲಿ ತೊಡಗುವುದೇ ಅದರ ಕೆಲಸ’ ಎಂದು ದೂರಿದರು.
‘ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ನವರು ಹಾಕಿದ್ದ ಬ್ಯಾನರ್, ಭಗವಾಧ್ವಜ ತೆರವುಗೊಳಿಸಿರುವುದು ನನಗೆ ಗೊತ್ತಿಲ್ಲ. ಮಾಹಿತಿ ಪಡೆದ ನಂತರ ಪ್ರತಿಕ್ರಿಯಿಸುತ್ತೇನೆ. ಬಿಜೆಪಿಯಿಂದ ಕರ್ನಾಟಕದಲ್ಲಿ ಶಾಂತಿ ಭಂಗ ಮಾಡಲು ಸಾಧ್ಯವಿಲ್ಲ. ಪೊಲೀಸರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ’ ಎಂದರು.
‘ಕಮಿಷನ್ ಕೇಳಲಾಗುತ್ತಿದೆ’ ಎಂಬ ಗುತ್ತಿಗೆದಾರರ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅವರನ್ನು ಕರೆಸಿ ಚರ್ಚಿಸುತ್ತೇನೆ’ ಎಂದು ಹೇಳಿದರು.
ನಿಷೇಧಿಸುವ ಪ್ರಸ್ತಾವ ಇಲ್ಲ: ಪಾಟೀಲ
ಬೆಳಗಾವಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿ ರಾಜ್ಯದಲ್ಲಿ ಯಾವುದೇ ಸಂಘಟನೆ ನಿಷೇಧಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.
‘ಸ್ವಯಂಸೇವಕರೇ ರಾಜ್ಯ ಆಳಲಿದ್ದಾರೆ’
ಹಾಸನ: ‘ಯಾವ ಸರ್ಕಾರವೂ ಆರ್‌ಎಸ್‌ಎಸ್ ಹತ್ತಿಕ್ಕಲು ಸಾಧ್ಯವಿಲ್ಲ. ಅಂತಹ ಪ್ರಯತ್ನ ಮೂರ್ಖತನದ ಪರಮಾವಧಿ. ನಾವು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತೇವೆ. ಆರ್‌ಎಸ್‌ಎಸ್‌ನ ಸ್ವಯಂಸೇವಕರೇ ರಾಜ್ಯದಲ್ಲಿ ಮುಂದಿನ ಆಡಳಿತ ನಡೆಸುತ್ತಾರೆ’ ಎಂದು ಶಾಸಕ ವಿ.ಸುನಿಲ್‌ಕುಮಾರ್ ಹೇಳಿದ್ದಾರೆ.
‘ಪರೇಡ್‌ನಲ್ಲಿ ಅವಕಾಶ ನೀಡಿ’
ಬಾಗಲಕೋಟೆ: ‘ನವದೆಹಲಿಯಲ್ಲಿ ಜನವರಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಅವಕಾಶ ನೀಡಬೇಕು’ ಎಂದು ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
‘ದೇಶ ಇಷ್ಟಪಡದವರಿಂದ ವಿರೋಧ’
ಹಾಸನ: ‘ಧರ್ಮ, ಶಿಸ್ತು ಹಾಗೂ ದೇಶವನ್ನು ಇಷ್ಟಪಡದವರು ಮಾತ್ರ ಆರ್‌ಎಸ್‌ಎಸ್ ವಿರೋಧಿಸುತ್ತಾರೆ’ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಪ್ರತಿಪಾದಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಆರ್‌ಎಸ್‌ಎಸ್ ನಿಂದ ದೇಶಕ್ಕಾದ ಒಂದೇ ಒಂದು ಕೆಡಕನ್ನು ಹೇಳಿ. ದೇಶಕ್ಕೆ ನಿಷ್ಠರಾಗಿರಿ. ಕೈಲಾದಷ್ಟು ಸಹಾಯ ಮಾಡಿ ಎಂದು ಸಂಘಟನೆ ಹೇಳುತ್ತದೆ. ಇದು
ತಪ್ಪಾ? ತನಿಖಾ ವರದಿಗಳು ನೆಹರು ಕಾಲದಲ್ಲಿಯೇ ಬಂದಿವೆ. ಆ ಬಗ್ಗೆ ಹರಿಪ್ರಸಾದ್, ಸಂತೋಷ್‌ಲಾಡ್, ಪ್ರಿಯಾಂಕ್ ಏಕೆ ಮಾತನಾಡುತ್ತಿಲ್ಲ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.