ADVERTISEMENT

ಮಾನಸಿಕ ದೌರ್ಬಲ್ಯ ಹೊಂದಿದ ರೈತರಿಂದ ಆತ್ಮಹತ್ಯೆ: ಬಿ.ಸಿ.ಪಾಟೀಲ

ಘೇರಾವ್ ಹಾಕಿದ ರೈತರಿಂದ ತೀವ್ರ ತರಾಟೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 11:16 IST
Last Updated 19 ಜನವರಿ 2021, 11:16 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಮೈಸೂರು: ಕೇವಲ ಮಾನಸಿಕ ದೌರ್ಬಲ್ಯ ಹೊಂದಿದ ರೈತರು ಮಾತ್ರವೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಉದ್ಯಮಿಗಳು ಸೇರಿದಂತೆ ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಗಳ ಕೃಷಿ ನೀತಿಯಿಂದ ಬೇಸರಗೊಂಡು ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಮಾನಸಿಕ ದೌರ್ಬಲ್ಯ ಹೊಂದಿರುವವರಷ್ಟೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಹೋಗಿ ಹಾರ ಹಾಕಿದರೆ ಆತ್ಮಹತ್ಯೆ ನಿಲ್ಲದು. ರೈತರ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ. ಇದಕ್ಕಾಗಿಯೇ ಪ್ರಧಾನಮಂತ್ರಿ ಅವರು ಆತ್ಮನಿರ್ಭರ್‌ ಭಾರತ ಯೋಜನೆಯಡಿ ₹ 493 ಕೋಟಿಯನ್ನು ಆಹಾರ ಸಂಸ್ಕರಣೆಗೆ ಕೊಟ್ಟಿದ್ದಾರೆ ಎಂದರು.

ADVERTISEMENT

ಈ ಯೋಜನೆಯಡಿ ದೇಶದಲ್ಲಿ ಮೊದಲ ಹೆಜ್ಜೆ ಇಟ್ಟಿರುವ ರಾಜ್ಯ ಈಗಾಗಲೇ ಒಂದು ಜಿಲ್ಲೆ, ಒಂದು ಬೆಳೆ ಎಂಬುದನ್ನು ಗುರುತಿಸಿ, ಪ್ರತಿ ವಾರ 50 ರೈತರಿಗೆ ಆಹಾರ ಸಂಸ್ಕರಣೆ ವಿಷಯದಲ್ಲಿ ತರಬೇತಿ ನೀಡಲು ಇಲ್ಲಿನ ಸಿಎಫ್‌ಟಿಆರ್‌ಐ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.

ನವದೆಹಲಿಯ ಸಮೀಪ ಪಂಜಾಬ್ ಮತ್ತು ಹರಿಯಾಣದ ರೈತರಷ್ಟೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೇ ರೈತರು ಶರದ್‌ಪವಾರ್ ಕೃಷಿ ಸಚಿವರಾಗಿದ್ದಾಗ ಬೆಂಬಲ ಬೆಲೆ, ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆ ವಿರೋಧಿಸಿ ಪ್ರತಿಭಟಿಸಿದ್ದರು. ಈಗಲೂ ರೈತರಿಗೆ ಅನುಕೂಲವಾಗುವಂತಹ ತಿದ್ದುಪಡಿಗಳನ್ನು ವಿರೋಧಿಸಿ ಅವೈಜ್ಞಾನಿಕವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹೆದರಿ ಮುಂಬೈಗೆ ಹೋಗಿದ್ದೆವು!

‘ಬಾಂಬೆ ಟೀಂ’ ಎಂದೇನೂ ನಾವು ಕಟ್ಟಿಕೊಂಡಿಲ್ಲ. ಸುಧಾಕರ್ ಅವರು ರಾಜೀನಾಮೆ ಕೊಟ್ಟಾಗ ಅವರ ಮೇಲೆ ಹಲ್ಲೆ ಆಯಿತು. ಅವರನ್ನು ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಕೂಡಿ ಹಾಕುವ ಪ್ರಯತ್ನ ನಡೆಯಿತು. ಇದರಿಂದ ಹೆದರಿ ಎಲ್ಲರೂ ಮುಂಬೈಗೆ ಹೋದೆವು. ಮಾಧ್ಯಮದವರು ‘ಬಾಂಬೆ ಟೀಂ’ ಎಂದು ನಾಮಕರಣ ಮಾಡಿದರು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈಗಲೂ ಮುನಿರತ್ನ ಸೇರಿದಂತೆ ಇನ್ನುಳಿದವರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೊಡದಂತೆ ನ್ಯಾಯಾಲಯವೇ ಆದೇಶ ನೀಡಿದೆ. ರೇಣುಕಾಚಾರ್ಯ ಸಹ ಮುಖ್ಯಮಂತ್ರಿ ವಿರುದ್ಧ ಬಂಡೆದ್ದು ದೆಹಲಿಗೆ ಹೋಗಿಲ್ಲ ಎಂದು ಸಮರ್ಥಿಸಿಕೊಂಡರು.

ಕರ್ನಾಟಕದಿಂದ ಒಂದು ಸೂಜಿಮೊನೆಯಷ್ಟು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮತಿಭ್ರಮಣೆಯಾಗಿದ್ದು, ಅವರು ಮನೋರೋಗಕ್ಕೆ ಚಿಕಿತ್ಸೆ ಪಡೆಯಬೇಕು ಎಂದು ಚಾಟಿ ಬೀಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.