ADVERTISEMENT

ಮೈಸೂರು: ಪಾಲಿಕೆ ಮೇಯರ್ ಸ್ಥಾನ ಯಾರಿಗೆ?

ಮಧ್ಯರಾತ್ರಿವರೆಗೂ ಜೆಡಿಎಸ್‌ ಸಭೆ | ಬಿಜೆಪಿ, ಕಾಂಗ್ರೆಸ್‌ನಲ್ಲಿ ಕಾತರ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 8:10 IST
Last Updated 25 ಆಗಸ್ಟ್ 2021, 8:10 IST
ಮೈಸೂರು ಪಾಲಿಕೆ
ಮೈಸೂರು ಪಾಲಿಕೆ   

ಮೈಸೂರು: ಬುಧವಾರ ನಡೆಯಲಿರುವ ಪಾಲಿಕೆಯ ಮೇಯರ್ ಸ್ಥಾನ ಯಾರಿಗೆ ಎಂಬ ಕುರಿತು ನಗರದಲ್ಲಿ ಮಂಗಳವಾರ ಮಧ್ಯರಾತ್ರಿಯವರೆಗೂ ಮೂರು ಪಕ್ಷಗಳಲ್ಲಿ ಸಭೆ ನಡೆದರೂ ಒಮ್ಮತಕ್ಕೆ ಬರಲಾಗಲಿಲ್ಲ.

ಕಾಂಗ್ರೆಸ್ ಅಭ್ಯರ್ಥಿಯಾಗಿ 32ನೇ ವಾರ್ಡ್‌ನ ಎಚ್.ಎಂ.ಶಾಂತಕುಮಾರಿ, ಬಿಜೆಪಿ ಅಭ್ಯರ್ಥಿಯಾಗಿ 59ನೇ ವಾರ್ಡ್‌ನ ಸುನಂದಾ ಪಾಲನೇತ್ರ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಈ ಇಬ್ಬರಲ್ಲಿ ಯಾರನ್ನು ಬೆಂಬಲಿಸಬೇಕೆಂಬುದನ್ನು ಮಧ್ಯರಾತ್ರಿಯಾದರೂ ಜೆಡಿಎಸ್‌ ನಿರ್ಧರಿಸಿರಲಿಲ್ಲ.

ಒಪ್ಪಂದದಂತೆ ಜೆಡಿಎಸ್‌ ಮೇಯರ್ ಸ್ಥಾನ ಬಿಟ್ಟುಕೊಡಬಹುದು ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್‌ ಇದೆ. ಅದಕ್ಕಾಗಿ ಶಾಸಕ ಸಾ.ರಾ.ಮಹೇಶ್‌ ಅವರ ಮನವೊಲಿಸುವ ಕಾರ್ಯವನ್ನು ಡಿ.ಕೆ.ಶಿವಕುಮಾರ್ ಅವರು ಶಾಸಕ ತನ್ವೀರ್‌ಸೇಠ್‌ ಅವರಿಗೆ ವಹಿಸಿದ್ದು, ಈ ಕಾರ್ಯದಲ್ಲಿ ಅವರು ಬಹುತೇಕ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಚಿವ ಎಸ್.ಟಿ.ಸೋಮಶೇಖರ್ ಈಚೆಗೆ ಸಾ.ರಾ.ಮಹೇಶ್ ಬೆಂಬಲ ಕೋರಿದ್ದರಿಂದ ಮೇಯರ್ ಸ್ಥಾನ ಪಡೆಯುವ ಆಶಾಭಾವನೆಯೊಂದಿಗೆ ಇದ್ದ ಬಿಜೆಪಿ ಸದಸ್ಯರು ಮಧ್ಯಾಹ್ನದ ವೇಳೆಗೆ ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದ್ದರು. ಆದರೆ, ಆ ಸಭೆಯಲ್ಲಿ ‘ಜೆಡಿಎಸ್‌ನಿಂದ ಸ್ಪಷ್ಟ ಸಂದೇಶ ಬಂದಿಲ್ಲ’ ಎಂಬ ಕುರಿತು ಚರ್ಚೆ ನಡೆದು, ಅಂತಿಮವಾಗಿ ಸುನಂದಾ ಫಾಲನೇತ್ರವನ್ನು ಕಣಕ್ಕಿಳಿಸಲು ಸರ್ವಾನುಮತದಿಂದ ಸಭೆ ನಿರ್ಣಯಿಸಿತು.

ಇತ್ತ ಜೆಡಿಎಸ್‌ ಸದಸ್ಯರೊಂದಿಗೆ ರಾತ್ರಿ ಸಾ.ರಾ.ಮಹೇಶ್ ‘ರುಚಿ ದ ಪ್ರಿನ್ಸ್‌’ ಹೋಟೆಲ್‌ನಲ್ಲಿ ಸಭೆ ನಡೆಸಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕೋ ಅಥವಾ ಮೇಯರ್ ಸ್ಥಾನ ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಉಭಯ ಪಕ್ಷದವರನ್ನು ಕೇಳಬೇಕೋ ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಒಂದು ವೇಳೆ ಜೆಡಿಎಸ್‌ ಏನಾದರೂ ಕಾಂಗ್ರೆಸ್‌ ಅಭ್ಯರ್ಥಿಗೆ ಬೆಂಬಲ ನೀಡಿದರೆ ಬಿಜೆಪಿ ಕೊನೆಗಳಿಗೆಯಲ್ಲಿ ಆಪರೇಷನ್‌ ಕಮಲ ನಡೆಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಮೂಲಗಳು ತಿಳಿಸಿವೆ. ಅಂತಿಮ ಗಳಿಗೆಯಲ್ಲಿ ಜೆಡಿಎಸ್‌ ಬಂಡಾಯ ಅಭ್ಯರ್ಥಿಗೆ ಬಿಜೆಪಿ ಬೆಂಬಲ ನೀಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎನ್ನಲಾಗಿದೆ. ಹೀಗಾಗಿಯೇ, ಜೆಡಿಎಸ್‌ ವರಿಷ್ಠರು ತಮ್ಮ ನಿರ್ಧಾರದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಜೆಡಿಎಸ್‌ ಜತೆ ತನ್ವೀರ್‌ಸೇಠ್‌ ತಡರಾತ್ರಿ ಸಭೆ: ಜೆಡಿಎಸ್‌ನ ಪಾಲಿಕೆ ಸದಸ್ಯರ ಜತೆ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಶಾಸಕರಾದ ತನ್ವೀರ್‌ಸೇಠ್‌ ಹಾಗೂ ಸಾ.ರಾ.ಮಹೇಶ್ ಅಂತಿಮ ನಿರ್ಧಾರಕ್ಕೆ ಬರುವಲ್ಲಿ ವಿಫಲರಾದರು. ಜೆಡಿಎಸ್‌ ಸದಸ್ಯರು ಮೇಯರ್ ಸ್ಥಾನ ತಮಗೆ ಬೇಕು ಎಂದು ಪಟ್ಟು ಹಿಡಿದರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಿಲ್ಲ ಎಂದರು. ಹೀಗಾಗಿ, ಬೆಂಬಲ ಕೋರಲು ಬಂದಿದ್ದ ತನ್ವೀರ್‌ಸೇಠ್‌ ವಿಷಯವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿ ನಿರ್ಗಮಿಸಿದರು. ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಪ್ರೇಮಾಶಂಕರೇಗೌಡ ಹಾಗೂ ಅಶ್ವಿನಿ ಅನಂತು ಮಧ್ಯೆ ಪ್ರಬಲ ‌ಸ್ಪರ್ಧೆ ಏರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ಶಾಸಕ ಸಾ.ರಾ.ಮಹೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ತನ್ವೀರ್‌ಸೇಠ್‌ ಅವರು ಕೈಗೊಳ್ಳುವ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.