ADVERTISEMENT

ರಾಜೀನಾಮೆ ಕೊಡಲು ಬಂದಾಗ ವಿರೂಪಾಕ್ಷಪ್ಪನನ್ನು ಬಂಧಿಸಿಲ್ಲವೇಕೆ?: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2023, 7:12 IST
Last Updated 6 ಮಾರ್ಚ್ 2023, 7:12 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಟೆಂಡರ್‌ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋ‍ಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪನನ್ನು ಸರ್ಕಾರವೇ ರಕ್ಷಿಸುತ್ತಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದಾಗಲೇ ಅವನನ್ನು ಬಂಧಿಸಲಿಲ್ಲವೇಕೆ’ ಎಂದು ಪ್ರಶ್ನಿಸಿದರು.

‘ಆತ ಎಲ್ಲಿದ್ದಾನೆ ಎನ್ನುವುದು ಸರ್ಕಾರಕ್ಕೆ ಗೊತ್ತಿದೆ. ಅವನು ಅವನ ಮನೆಯಲ್ಲೇ ಓಡಾಡಿಕೊಂಡಿದ್ದಾನೆ. ಅವನನ್ನು ಬಂಧಿಸದೇ ಇವರು ನಾಟಕ ಮಾಡುತ್ತಿದ್ದಾರೆ. ಲುಕ್ಔಟ್ ನೋಟಿಸ್‌ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರಷ್ಟೆ’ ಎಂದು ಟೀಕಿಸಿದರು.

ADVERTISEMENT

‘ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗಲೆಲ್ಲಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಕ್ಷಿ ಕೇಳುತ್ತಿದ್ದರು. ಈಗ ಅವರದ್ದೇ ಪಕ್ಷದವರು ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾರೆ. ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಾರೆ? ಇಷ್ಟೆಲ್ಲಾ ಆದರೂ ನಮಗೆ ಮುಜುಗರವಿಲ್ಲ ಎನ್ನುತ್ತಿದ್ದಾರೆ’ ಎಂದು ಟೀಕಿಸಿದರು.

‘ಈ ಪ್ರಕರಣದಲ್ಲಿ ಬಿಜೆಪಿಯವರಿಗೆ ಮುಜುಗರ ಆಗಿದೆ. ಅಪ್ಪ ಅಧ್ಯಕ್ಷ ಎಂಬ ಕಾರಣದಿಂದಲೇ ಮಗನಿಗೆ ಲಂಚ ಕೊಡಲು ಬಂದಿರುವುದು. ಹೀಗಾಗಿ ಅಪ್ಪನೇ (ಮಾಡಾಳ್ ವಿರೂಪಾಕ್ಷಪ್ಪ) ಮೊದಲ ಆರೋಪಿ. ಅವನನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿದರು.

‘ನಾನು ಲೋಕಾಯುಕ್ತ ಬಂದ್ ಮಾಡಿರಲಿಲ್ಲ. ಮಾಡಿದ್ದನ್ನು ಸಾಬೀತುಪಡಿಸಿದರೆ ತಕ್ಷಣ ರಾಜೀನಾಮೆ ಕೊಡುತ್ತೇನೆ. ನಾವು ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ರಚನೆ ಮಾಡಿದ್ದೆವಷ್ಟೆ. ಲೋಕಾಯುಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿರಲಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇತ್ತು. ಎಲ್ಲ ಸತ್ಯ ಗೊತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿಯು ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಮಾಡಲಿಲ್ಲ. ಎಸಿಬಿ ರದ್ದು ಮಾಡಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯಲ್ಲ. ಆ ಪಕ್ಷದವರಿಗೆ ಸುಳ್ಳು ಹೇಳುವುದು ಚಟ‌; ಸುಳ್ಳೇ ಬಿಜೆಪಿ ಮನೆ ದೇವರು. ಹೀಗಾಗಿ ಲೋಕಾಯುಕ್ತ ವಿಚಾರದಲ್ಲೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.