ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಮೈಸೂರು: ಕಾಡಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿಗಳ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ, ಜಾನುವಾರುಗಳ ಮಾಲೀಕರಿಗೆ ಹಾಗೂ ಬೆಳೆ ನಾಶ ಅನುಭವಿಸಿದ ರೈತರಿಗೆ ಪರಿಹಾರ ನೀಡುವಲ್ಲಿ ಅರಣ್ಯ ಇಲಾಖೆಯು ತಾರತಮ್ಯ ನೀತಿ ಅನುಸರಿಸುತ್ತಿರುವುದು ಕಂಡುಬಂದಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಇಲ್ಲಿನ ಒಡನಾಡಿ ಸೇವಾ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕಚೇರಿಯಿಂದ ಮಾಹಿತಿ ನೀಡಿದ್ದು, ಅದರಲ್ಲಿರುವ ಅಂಕಿ–ಅಂಶಗಳು ಪರಿಹಾರ ವಿತರಣೆಯಲ್ಲಿ ‘ಪ್ರದೇಶವಾರು ತಾರತಮ್ಯ’ ಆಗಿರುವುದಕ್ಕೆ ಕನ್ನಡಿ ಹಿಡಿದಿವೆ.
2021–22ನೇ ಸಾಲಿನಿಂದ 2023–24ರವರೆಗೆ ಮಾಹಿತಿ ನೀಡಲಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪರಿಹಾರ ಕೊಟ್ಟಿರುವುದು, ಕೆಲವೆಡೆ ಕನಿಷ್ಠ ಪರಿಹಾರ ಒದಗಿಸಲಾಗಿದೆ.
ಉದಾಹರಣೆಗೆ, 2021–22ರಲ್ಲಿ ರಾಮನಗರ ವೃತ್ತದಲ್ಲಿ ಮೂವರು ಮೃತಪಟ್ಟಿದ್ದು, ಒಟ್ಟು ₹ 22.50 ಲಕ್ಷ ಪರಿಹಾರ ಕೊಡಲಾಗಿದೆ. ಕೋಲಾರದಲ್ಲಿ ಮೂವರ ಕುಟುಂಬದವರಿಗೆ ಕೊಟ್ಟಿರುವುದು ₹ 18.50 ಲಕ್ಷ ಮಾತ್ರ. ಅಂತೆಯೇ, ಬಳ್ಳಾರಿ, ಬೀದರ್, ಚಿಕ್ಕಮಗಳೂರು, ಮಂಡ್ಯ, ಮಂಗಳೂರು ವೃತ್ತಗಳಲ್ಲಿ ಪ್ರತಿ ಕುಟುಂಬಕ್ಕೆ ತಲಾ ₹ 7.50 ಲಕ್ಷ ನೀಡಲಾಗಿದೆ.
ಚಾಮರಾಜನಗರ ಜಿಲ್ಲೆ ಮಲೆಮಹದೇಶ್ವರ ವೃತ್ತದಲ್ಲಿ ಒಬ್ಬರಿಗೆ ನೀಡಿರುವುದು ಕೇವಲ ₹ 1.68 ಲಕ್ಷ. ಚಿಕ್ಕಬಳ್ಳಾಪುರದ ಪ್ರಕರಣದಲ್ಲಿ ₹ 2 ಲಕ್ಷ ಪರಿಹಾರ ಸಂದಾಯವಾಗಿದೆ. ಮೈಸೂರು ವೃತ್ತದ ಹುಣಸೂರು ವನ್ಯಜೀವಿ ವಲಯದಲ್ಲಿ ಮೃತಪಟ್ಟ 6 ಮಂದಿಯ ಕುಟುಂಬಗಳಿಗೆ ಪಾವತಿಸಿರುವುದು ₹ 35 ಲಕ್ಷ ಮಾತ್ರ. ಇದೇ ರೀತಿಯ ತಾರತಮ್ಯವನ್ನು 2022–23 ಹಾಗೂ 2023–24ನೇ ಸಾಲಿನಲ್ಲೂ ಮಾಡಿರುವುದನ್ನು ಅಂಕಿ–ಅಂಶಗಳು ಹೇಳುತ್ತಿವೆ.
2023–24ರಲ್ಲಿ ರಾಮನಗರದಲ್ಲಿ 4 ಪ್ರಕರಣಗಳಲ್ಲಿ ಕೊಟ್ಟಿರುವುದು ಬರೋಬ್ಬರಿ ₹ 60ಲಕ್ಷ. ಬಿಆರ್‌ಟಿ ವಲಯದಲ್ಲಿನ 8 ಪ್ರಕರಣಗಳಿಗೆ ₹ 80 ಲಕ್ಷವನ್ನಷ್ಟೆ ಕೊಡಲಾಗಿದೆ. ಭದ್ರಾದಲ್ಲಿ ಒಬ್ಬರಿಗೆ ₹ 15 ಲಕ್ಷ ನೀಡಿದ್ದರೆ, ಮೈಸೂರಿನಲ್ಲಿ ಒಂದು ಪ್ರಕರಣದಲ್ಲಿ ಪಾವತಿಸಿರುವುದು ₹ 10 ಲಕ್ಷ.
‘ಬೆಂಗಳೂರು ವೃತ್ತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಒಂದು ರೀತಿಯ ಪರಿಹಾರ, ಇತರ ವೃತ್ತಗಳಲ್ಲಿ ಮತ್ತೊಂದು ಪ್ರಮಾಣದಲ್ಲಿ ಪರಿಹಾರ ಕೊಡುತ್ತಿರುವುದು ಖಂಡನೀಯ. ಎಲ್ಲರನ್ನೂ, ಎಲ್ಲವನ್ನೂ ಏಕರೂಪವಾಗಿ ನೋಡುತ್ತಿಲ್ಲವೇಕೆ?’ ಎಂದು ಕೇಳುತ್ತಾರೆ ಒಡನಾಡಿ ಸೇವಾ ಸಂಸ್ಥೆಯ ಎಂ.ಎಲ್. ಪರಶುರಾಮ್.
‘ಯಾವ ಮಾನದಂಡ ಆಧರಿಸಿ ಪರಿಹಾರ ಹಂಚಿಕೆ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಕಷ್ಟಪಟ್ಟು ಬೆಳೆದ ಬೆಳೆ ರಕ್ಷಣೆಗೆ ಹಾಗೂ ಸರಿಯಾದ ಪ್ರಮಾಣದಲ್ಲಿ ಪರಿಹಾರ ಸಿಗದಿರುವುದು ಕೂಡ ಕಾಡಂಚಿನ ಜನರು ವನ್ಯಪ್ರಾಣಿಗಳ ಮೇಲೆ ದಾಳಿ ನಡೆಸುವುದಕ್ಕೆ, ವಿಷ ಹಾಕುವುದಕ್ಕೆ ಪ್ರೇರಣೆ ಕೊಟ್ಟಂತಾಗುತ್ತಿದೆ. ಇದೆಲ್ಲ ಕಾರಣದಿಂದಾಗಿಯೇ ಮಾನವ–ವನ್ಯಪ್ರಾಣಿ ಸಂಘರ್ಷ ಮುಂದುವರಿಯುತ್ತಿದೆ. ಆದ್ದರಿಂದ, ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೋರುತ್ತಾರೆ ಅವರು.
‘ಕಾಡಂಚಿನಲ್ಲಿ ಸಂತ್ರಸ್ತರಾದರಿಗೆ ಮಾನವೀಯ ಕಾರಣದಿಂದ ಬದುಕು ಕಟ್ಟಿಕೊಡಬೇಕು. ಎಲ್ಲ ಸಾವುಗಳನ್ನೂ ಸಮಾನವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕು. ಬೆಳೆ ನಾಶಕ್ಕೆ ವೈಜ್ಞಾನಿಕವಾಗಿ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.