ADVERTISEMENT

ಗಾಳಿ, ಮಳೆ: ಬಾಳೆ, ವಿದ್ಯುತ್ ಕಂಬ ಧರೆಗೆ- ಕತ್ತಲಲ್ಲಿ ಹಲವು ಗ್ರಾಮಗಳು

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 2:35 IST
Last Updated 17 ಏಪ್ರಿಲ್ 2022, 2:35 IST
ಹಂಪಾಪುರ ಹೊರವಲಯದ ಬೆಳಗನಹಳ್ಳಿ ಗ್ರಾಮದ ರೈತ ಭೈರೇಗೌಡರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬಾಳೆ ನೆಲಕಚ್ಚಿರುವುದು
ಹಂಪಾಪುರ ಹೊರವಲಯದ ಬೆಳಗನಹಳ್ಳಿ ಗ್ರಾಮದ ರೈತ ಭೈರೇಗೌಡರ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಬಾಳೆ ನೆಲಕಚ್ಚಿರುವುದು   

ಹಂಪಾಪುರ: ಹೋಬಳಿ ಸೇರಿದಂತೆ ಎಚ್.ಡಿ. ಕೋಟೆ ತಾಲ್ಲೂಕಿನ ಹಲವೆಡೆ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಅನೇಕ ಬೆಳೆಗಳು ಹಾನಿಯಾಗಿದ್ದು, ಗಾಳಿಗೆ ಮರಗಳೊಂದಿಗೆ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಹಲವು ಗ್ರಾಮಗಳು ಕತ್ತಲೆಯಲ್ಲೇ ಕಾಲ ಕಳೆದಿವೆ. ಹೈರಿಗೆ ಗ್ರಾಮದಲ್ಲಿ ಎತ್ತು ಸಾವನ್ನಪ್ಪಿದೆ

ಸಮೀಪದ ಹೈರಿಗೆ ಮತ್ತು ಮಟಕೆರೆಯಲ್ಲಿ 6 ವಿದ್ಯುತ್ ಕಂಬಗಳು, ಬೆಳಗನಹಳ್ಳಿಯಲ್ಲಿ 2 ಮತ್ತು ಬೆಳ್ತೂರು ಭಾಗದಲ್ಲಿ 6 ಕಂಬಗಳು ಬಿದ್ದಿವೆ. ಇದರಿಂದಾಗಿ ಹಲವಾರು ಗ್ರಾಮಗಳು 24 ಗಂಟೆ ಕತ್ತಲೆಯಲ್ಲಿ ಕಾಲ ಕಳೆಯುವಾಂತಾಯಿತು.

ವಿದ್ಯುತ್‌ ಕಂಬಗಳ ಮೇಲೆ ಮರಗಳು ಬಿದ್ದಿದ್ದರಿಂದ ಹಲವಾರು ಕಂಬಗಳು ಭಾಗಿದ್ದವು. ಸೆಸ್ಕ್ ಸಿಬ್ಬಂದಿ ಶನಿವಾರ ಬೆಳಿಗ್ಗೆಯಿಂದಲೇ ಕಾರ್ಯಪ್ರವೃತ್ತರಾಗಿ ಸಂಜೆ 5 ಗಂಟೆಯವರೆಗೆ ಮುರಿದಿದ್ದ ಎಲ್ಲಾ ವಿದ್ಯುತ್ ಕಂಬಗಳನ್ನು ಬದಲಿಸಿ ಸರಿಪಡಿಸಿದ್ದಾರೆ. ಜೊತೆಗೆ ಬಿದ್ದಿದ್ದ ಮರಗಳನ್ನು ತೆಗೆಯಲಾಗಿದೆ ಎಂದು ಎಚ್.ಡಿ. ಕೋಟೆ ಕಾರ್ಯಪಾಲಕ ಎಂಜಿನಿಯರ್ ಸಂದೀಪ್ ಪ್ರಜಾವಾಣಿಗೆ ತಿಳಿಸಿದ್ದಾರೆ.

ADVERTISEMENT

ಬಾಳೆ ಬೆಳೆ ಹಾನಿ

ಅಂತರಸಂತೆ ಹೋಬಳಿಯ ಹೊನ್ನಮ್ಮನಕಟ್ಟೆಯಲ್ಲಿ ರಾಜೇಗೌಡ ಮತ್ತು ಕೆಂಪಯ್ಯನಹುಂಡಿಯ ಶಿವು ಅವರ ಬಾಳೆ ಸಂಪೂರ್ಣ ನೆಲಕಚ್ಚಿದೆ.

ಅಲ್ಲದೇ ಕಸಬಾ ಹೋಬಳಿಯ ಬೆಳಗನಹಳ್ಳಿಯ ಭೈರೇಗೌಡರ, ದಾಸಾಚಾರ್, ಮಂಜುನಾಥ್ ಹಾಗೂ ಗುಡುಮಾರನಹಳ್ಳಿ ಗ್ರಾಮದ ಅಕ್ಕಾಜಮ್ಮ ಅವರ ಜಮೀನಲ್ಲಿದ್ದ ಬಾಳೆ ಗಿಡಗಳು ನೆಲಕ್ಕೆ ಉರುಳಿವೆ. ಹೈರಿಗೆ, ಮಲಾರ ಗ್ರಾಮದ ಕೆಲವೆಡೆ ಬಾಳೆ ಹಾನಿಯಾಗಿದೆ.

‘ಹಾನಿಯಾಗಿರುವ ಪ್ರದೇಶಗಳಿಗೆ ತಾಲ್ಲೂಕು ಆಡಳಿತದ ಸಿಬ್ಬಂದಿ ತೆರಳಿ ನಷ್ಟವನ್ನು ಅಂದಾಜಿಸಿ ವರದಿ ನೀಡಲಾಗಿದೆ’ ಎಂದು ಅಂತರಸಂತೆ ಕಂದಾಯ ನಿರೀಕ್ಷಕ ಯೋಗೇಂದ್ರಕುಮಾರ್ ತಿಳಿಸಿದರು.

ತಹಶೀಲ್ದಾರ್ ಭೇಟಿ : ಶುಕ್ರವಾರದ ಮಳೆಗೆ ಹೈರಿಗೆಯ ಜವರಯ್ಯನವರ ಎತ್ತು ಸಾವನ್ನಪ್ಪಿದ್ದು, ಗ್ರಾಮಕ್ಕೆ ತಹಶೀಲ್ದಾರ್ ರತ್ನಾಂಬಿಕೆ, ಕಂದಾಯ ನಿರೀಕ್ಷಕ ಮಹೇಶ್ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಪರಿಹಾರದ ಭರವಸೆ ನೀಡಿದರು.

ಅಂತರಸಂತೆ ಭಾಗದ ಕೆಂಪಯ್ಯನಹುಂಡಿಯಲ್ಲಿ ರೈತ ಶಿವು ಅವರ ಹತ್ತಿ ಬೆಳೆಯೂ ಹಾನಿಯಾಗಿದೆ.

ಅಡಿಕೆ, ತೆಂಗಿನ ಮರಕ್ಕೆ ಹಾನಿ

ಕೆ.ಆರ್.ನಗರ: ತಾಲ್ಲೂಕಿನ ಬಾಚಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆ ಗಾಳಿಗೆ ರೈತ ಜಯರಾಮೇಗೌಡ ಅವರ ತೋಟದಲ್ಲಿನ ಏಲಕ್ಕಿ ಬಾಳೆ ಗಿಡಗಳು, ತೆಂಗು ಮತ್ತು ಅಡಿಕೆ ಮರಗಳು ನೆಲಕ್ಕೆ ಉರುಳಿವೆ.

2 ಎಕರೆ ತೋಟದಲ್ಲಿ ಬೆಳೆದಿದ್ದ 2 ಸಾವಿರ ಏಲಕ್ಕಿ ಬಾಳೆ ಗಿಡ, 9 ತೆಂಗಿನ ಮರ ಉರುಳಿವೆ, ತೆಂಗಿನ ಮರಗಳು ಅಡಿಕೆ ಮರಗಳ ಮೇಲೆ ಬಿದ್ದ ಪರಿಣಾಮ ಹಲವು ಅಡಿಕೆ ಮರಗಳಿಗೆ ಹಾನಿಯಾಗಿದೆ.

‘ಸುಮಾರು ₹ 3 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಹಾನಿಯಾದ ಬಗ್ಗೆ ಗ್ರಾಮ ಲೆಕ್ಕಾಧಿಕಾರಿ ಮೂಲಕ ತಹಶೀಲ್ದಾರ್ ಅವರಿಗೆ ವರದಿ ನೀಡಲಾಗಿದೆ’ ಎಂದು ಜಯರಾಮೇಗೌಡ ಪ್ರಜಾವಾಣಿಗೆ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.