ಮೈಸೂರು: ಇಲ್ಲಿನ ವಾಲ್ಮೀಕಿ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಬೈಕಿನಲ್ಲಿ ಹೋಗುತ್ತಿದ್ದ ಯುವತಿಯೊಬ್ಬರು ತಮ್ಮನ್ನು ತಡೆದ ಮಹಿಳಾ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ₹ 4 ಸಾವಿರ ದಂಡ ಪಾವತಿಸಿದ್ದಾರೆ.
‘ನನ್ನನ್ನು ಮಾತ್ರ ಹಿಡಿದಿದ್ದು ಏಕೆ’ ಎಂದು ಪ್ರಶ್ನಿಸಿದ ಯುವತಿ, ‘ನಾನು ವಾಹನ ನಿಲ್ಲಿಸುವುದಿಲ್ಲ’ ಎಂದು ಬೈಕನ್ನು ಸ್ಟಾರ್ಟ್ ಮಾಡಿ ಹೊರಡಲು ಅಣಿಯಾಗಿದ್ದಾರೆ. ತಕ್ಷಣವೇ ಇವರನ್ನು ಹಿಡಿದ ಮೂವರು ಮಹಿಳಾ ಪೊಲೀಸರು, ವಾಹನ ನಿಲ್ಲಿಸಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ.
‘ಅಷ್ಟು ಜನರು ಹೋಗುತ್ತಿದ್ದಾರೆ. ಅವರನ್ನೆಲ್ಲ ಬಿಟ್ಟು ನನ್ನನ್ನು ಏಕೆ ಹಿಡಿಯುತ್ತೀರಿ’ ಎಂದು ಯುವತಿ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.
ಇನ್ನಷ್ಟು ಪೊಲೀಸರು ಸುತ್ತುವರೆದ ನಂತರ ಸಾಕುನಾಯಿಯನ್ನು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ ಎಂದು ಹಿಂಬದಿ ಸವಾರರ ಕೈಯಲ್ಲಿದ್ದ ನಾಯಿಯನ್ನು ತೋರಿಸಿದ್ದಾರೆ. ನಂತರ ತಮ್ಮ ವರ್ತನೆಗೆ ಕ್ಷಮೆಯನ್ನೂ ಕೋರಿದ್ದಾರೆ.
‘ಹೆಲ್ಮೆಟ್ ಧರಿಸದೇ ಚಾಲನೆ ಮಾಡಿದ್ದಕ್ಕೆ ₹ 1 ಸಾವಿರ, ವಾಹನ ವಿಮೆ ಅವಧಿ ಮುಗಿದಿರುವುದಕ್ಕೆ ₹ 1 ಸಾವಿರ ಹಾಗೂ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕೆ ₹ 2 ಸಾವಿರ ದಂಡ ವಿಧಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.