
ಮೈಸೂರು: ‘ಟೈಗರ್’.. ‘ಟೈಗರ್’.. ‘ಟೈಗರ್’...
ಅದು, 1989ರ ಏಪ್ರಿಲ್ 4. ದೊಡ್ಡಕೆರೆ ಮೈದಾನದ ಕುಸ್ತಿ ಅಖಾಡದಲ್ಲಿ ಸೋಲಿಲ್ಲದ ಸರದಾರರಾಗಿದ್ದ ಪೈಲ್ವಾನ್ ವಿಜೇಂದ್ರ ಅವರನ್ನು ಆವೆಮಣ್ಣಿನಲ್ಲಿ ಕೆಡವಿದ ಸುಣ್ಣದಕೇರಿಯ ಭೂತಪ್ಪನಗರಡಿಯ ಪೈಲ್ವಾನ್ ಬಾಲಾಜಿ ಅವರನ್ನು ಭುಜದ ಮೇಲೆ ಹೊತ್ತು ಕುಸ್ತಿಪ್ರಿಯರು ಕೂಗಿದ್ದು ಹೀಗೆ.
‘ಬಿಸಿಲ ಝಳ ಲೆಕ್ಕಿಸದೇ ಅಖಾಡದಲ್ಲಿ ಸೇರುತ್ತಿದ್ದ ಸಾವಿರಾರು ಮಂದಿ ಬಾಲಾಜಿ ಅವರ ಅಬ್ಬರಿಸುವ ಆಟಕ್ಕೆ ಮರುಳಾಗಿದ್ದರು. ಪ್ರತಿ ಪಂದ್ಯ ಗೆದ್ದಾಗಲೂ ಅಖಾಡದಿಂದ ಸುಣ್ಣದಕೇರಿವರೆಗೆ ಮೆರವಣಿಗೆಯಲ್ಲಿ ಕರೆತರುತ್ತಿದ್ದರು. ನಾಡಕುಸ್ತಿಯ ವೈಭವದ ದಿನಗಳವು. ಅಖಾಡದಲ್ಲಿ ನಿಂತು ನೋಡಿದರೆ ತಲೆಗಳೇ ಕಾಣಿತ್ತಿದ್ದವು’ ಎಂದು ನೆನೆಯುತ್ತಾರೆ ಜಯಚಾಮರಾಜೇಂದ್ರ ಒಡೆಯರ್ ಕುಸ್ತಿ ಅಖಾಡದ ಗೌರವಾಧ್ಯಕ್ಷ ಮಹದೇವ್.
ಅಬ್ಬರಿಸುತ್ತಿದ್ದ ಹುಲಿ:
ವಜ್ರಮುಷ್ಟಿ ಕಾಳಗದಲ್ಲಿನ ವೇಗವನ್ನು ನಾಡಕುಸ್ತಿಯಲ್ಲೂ ತೋರಿದ್ದ ಬಾಲಾಜಿ ಅವರು, ಮೈಸೂರಿನ ಕುಸ್ತಿಪರಂಪರೆಯಲ್ಲಿ ಅಚ್ಚಳಿಯದ ನೆನಪುಗಳನ್ನು ಉಳಿಸಿದ್ದಾರೆ. ಇಬ್ಬರು ಪೈಲ್ವಾನರಷ್ಟು ಬಲಶಾಲಿಯಾಗಿದ್ದ ಅವರು ತಮ್ಮ ಅಜಾನುಬಾಹು ದೇಹದಿಂದ ನೋಡುಗರ ಎದೆ ನಡುಗಿಸುತ್ತಿದ್ದರು.
ತಾತ ಎಂ.ರಾಮಜೆಟ್ಟಪ್ಪ ಅವರು ಅಗರಬತ್ತಿ ಉದ್ಯಮಿಯಾಗಿದ್ದರು. ಅವರ ಮಗ ಎಂ.ಆರ್.ಸುದರ್ಶನ್ ಕೂಡ ಪೈಲ್ವಾನ್. ತಂದೆ– ತಾತರಂತೆಯೇ ಕುಸ್ತಿಯಲ್ಲಿ ಆಸಕ್ತಿ ತೋರಿದ ಬಾಲಾಜಿ ಕಿರಿಯ ವಯಸ್ಸಿನಲ್ಲಿಯೇ ದೊಡ್ಡವರನ್ನು ಚಿತ್ ಮಾಡಿ ಎಲ್ಲರ ಹುಬ್ಬೇರಿಸಿದ್ದರು.
ಸುದರ್ಶನ್ ಅವರ 2ನೇ ಪುತ್ರರಾದ ಅವರು ನಾಡಕುಸ್ತಿಯನ್ನು ಉಸಿರಾಡಿದರು. ಪಾಯಿಂಟ್ ಕುಸ್ತಿಯಲ್ಲಿ ಆಸಕ್ತಿ ತೋರಲಿಲ್ಲ. ಅದು ಮಟ್ಟಿ ಕುಸ್ತಿ ಮೇಲಿದ್ದ ಪ್ರೀತಿಯಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಪಾಲಹಳ್ಳಿ ಪೈಲ್ವಾನ್ ಮುಕುಂದ, ವಿಜಯೇಂದ್ರ, ಹೈದರಾಬಾದ್ ಪೈಲ್ವಾನ್ ಅಲೀಮಿಯಾ ಅವರನ್ನು ಚಿತ್ ಮಾಡಿದ್ದ ಕ್ಷಣಗಳನ್ನು ಮಹದೇವ್ ನೆನೆಯುತ್ತಾರೆ.
ದಸರೆಯ ವಿಜಯದಶಮಿಯ ದಿನ ಅಂಬಾವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಟಿ ಕಾಳಗಕ್ಕೆ ಉಸ್ತಾದರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಳೆದ ದಸರೆಯಲ್ಲೂ ಚಾಮರಾಜನಗರದ ಉಸ್ತಾದ್ ಬಂಗಾರು ಜಟ್ಟಿ, ಚನ್ನಪಟ್ಟಣದ ಪುರುಷೋತ್ತಮ ಜಟ್ಟಿ ಅವರೊಂದಿಗೆ ಬಾಲಾಜಿ ಜೆಟ್ಟಿ ಅವರು ರೆಫರಿಯಾಗಿದ್ದರು.
‘ಪ್ರಜಾವಾಣಿ’ ಜೊತೆ ಮಾತು:
ದಶಕದ ಹಿಂದೆ ‘ಪ್ರಜಾವಾಣಿ’ ಮೈಸೂರು ಮೆಟ್ರೊ ಪುರವಣಿಯಲ್ಲಿ ಬರುತ್ತಿದ್ದ ‘ಗರಡಿ ಗಮ್ಮತ್ತು’ ಅಂಕಣದಲ್ಲಿ ಬಾಲಾಜಿ ಸಂದರ್ಶನ ನೀಡಿದ್ದರು. ‘25 ನಿಮಿಷದಲ್ಲಿ 3 ಸಾವಿರ ಬಸ್ಕಿ ನಂತರ 2 ಸಾವಿರ ದಂಡವನ್ನು ಬೆಳಿಗ್ಗೆ 3.30ಕ್ಕೆ ಹೊಡೆಯುತ್ತಿದ್ದೆ’ ಬಾಲಾಜಿ ತಮ್ಮ ಅಭ್ಯಾಸವನ್ನು ಹೇಳಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.