ADVERTISEMENT

ಮನೆಯವರೊಂದಿಗೆ ಮನೆಯಲ್ಲೇ ಯೋಗ

ಆರನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಇಂದು: ಮೈಸೂರಿನಲ್ಲಿ 3 ಲಕ್ಷ ಜನರಿಂದ ಯೋಗಾಸನ ?

ಡಿ.ಬಿ, ನಾಗರಾಜ
Published 20 ಜೂನ್ 2020, 19:30 IST
Last Updated 20 ಜೂನ್ 2020, 19:30 IST
ಯೋಗ ದಿನಾಚರಣೆ (ಫೈಲ್ ಚಿತ್ರ)
ಯೋಗ ದಿನಾಚರಣೆ (ಫೈಲ್ ಚಿತ್ರ)   

ಮೈಸೂರು: ನಗರವೂ ಸೇರಿದಂತೆ ಎಲ್ಲೆಡೆ ಭಾನುವಾರ (ಜೂನ್ 21) ಆರನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ.

ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಈ ಬಾರಿ ಸಾಮೂಹಿಕ ಯೋಗಾಸನ ಪ್ರದರ್ಶನಕ್ಕೆ ಅವಕಾಶವಿಲ್ಲದಿದ್ದರೂ, ಯೋಗ ನಗರಿ ಎಂದೇ ಖ್ಯಾತಿಯಾಗಿರುವ ಮೈಸೂರಿನ ಮನೆಗಳಲ್ಲಿ ಯೋಗ ಸಂಭ್ರಮ ಗರಿಗೆದರಿದೆ.

ಈ ಹಿಂದಿನ ವರ್ಷಗಳಲ್ಲಿ ಮೈಸೂರು ನಗರಕ್ಕೆ ಸೀಮಿತವಾಗಿದ್ದ ಯೋಗ ದಿನಾಚರಣೆ, ಈ ಬಾರಿ ಸಾಮಾಜಿಕ ಜಾಲತಾಣಗಳ ಮೂಲಕ ಜಿಲ್ಲೆಗೆ ವಿಸ್ತರಿಸಿದೆ.

ADVERTISEMENT

ವರ್ಷದ ಸಿದ್ಧತೆ: ‘5ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆದ ಬೆನ್ನಿಗೆ, ಯೋಗ ಫೆಡರೇಷನ್ ಆಫ್ ಮೈಸೂರು 6ನೇ ದಿನಾಚರಣೆಗೆ ಆಗಿನಿಂದಲೇ ಸಿದ್ಧತೆ ನಡೆಸಿತ್ತು. ಫೆಬ್ರುವರಿ ಅಂತ್ಯದ ವೇಳೆಗೆ 1 ಲಕ್ಷ ಜನರನ್ನು ಸಂಪರ್ಕಿಸಿತ್ತು. ಕೋವಿಡ್–19 ಪ್ರಕರಣ ದಾಖಲಾದ ಬೆನ್ನಿಗೆ ತನ್ನ ಯೋಜನೆ ಬದಲಿಸಿಕೊಂಡು, ಕಾಲಕ್ಕೆ ತಕ್ಕಂತೆ ಸಾಮಾಜಿಕ ಜಾಲತಾಣದ ಮೂಲಕ ಯೋಗ ಪ್ರಿಯರಿಗೆ ಸ್ಪಂದಿಸುತ್ತಿದೆ’ ಎಂದು ಜಿಎಸ್‌ಎಸ್‌ ಯೋಗ ಸಂಸ್ಥೆಯ ಶ್ರೀಹರಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮೈಸೂರು ಜಿಲ್ಲೆಯ ವಿವಿಧ ಕ್ಷೇತ್ರದ ನೂರಕ್ಕೂ ಹೆಚ್ಚು ಪ್ರಮುಖರನ್ನು ಸಂಪರ್ಕಿಸಿರುವ ಫೆಡರೇಷನ್, ಈ ಎಲ್ಲರ ಎರಡು ನಿಮಿಷದ ವಿಡಿಯೊ ಕ್ಲಿಪ್ಪಿಂಗ್ ಮಾಡಿದೆ. ಈ ಕ್ಲಿಪ್ಪಿಂಗ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಜನರ ಸ್ಪಂದನೆ ಅಭೂತಪೂರ್ವವಾಗಿದೆ’ ಎಂದರು.

‘ಈ ಹಿಂದಿನ ವರ್ಷಗಳಲ್ಲಿ ಯೋಗಾಸಕ್ತರು ರೇಸ್‌ಕೋರ್ಸ್‌ಗೆ ಬಂದು ಪ್ರದರ್ಶನ ನೀಡುತ್ತಿದ್ದರು. ಆದರೆ ಈ ಬಾರಿ ತಮ್ಮ ಮನೆಯವರೊಂದಿಗೆ ಮನೆಯಂಗಳ, ಟೆರೇಸ್‌ ಮೇಲೆ ಯೋಗ ಮಾಡುವುದರಿಂದ ಸಂಖ್ಯೆ ಹಲವು ಪಟ್ಟು ಹೆಚ್ಚಲಿದೆ. 3 ಲಕ್ಷ ಜನರು ತಮ್ಮ ಮನೆಗಳಿಂದಲೇ ಯೋಗ ದಿನಾಚರಣೆಯಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ’ ಎಂದು ಅವರು ತಿಳಿಸಿದರು.

45 ನಿಮಿಷದ ಯೋಗ ಸಿಡಿ

ಮೈಸೂರಿನ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೋಧಕ ಆಸ್ಪತ್ರೆಯ ವಿದ್ಯಾರ್ಥಿಗಳು ‘ಸಾಮಾನ್ಯ ಯೋಗ ಶಿಷ್ಟಾಚಾರ’ ಪ್ರದರ್ಶನದ ಸಿಡಿ ರೂಪಿಸಿದ್ದಾರೆ.

45 ನಿಮಿಷದ ಈ ಯೋಗ ಗುಚ್ಛದಲ್ಲಿ ಧ್ಯಾನ, ಪ್ರಾಣಾಯಾಮ, ವಿವಿಧ ಭಂಗಿಗಳು ಸೇರಿದಂತೆ ಮಾನಸಿಕ/ದೈಹಿಕ ಶಕ್ತಿಯನ್ನು ಹೆಚ್ಚಿಸುವ, ಕೊರೊನಾ ವೈರಸ್‌ನ ಸಾಂಕ್ರಾಮಿಕತೆ ತಡೆಗಟ್ಟುವ ವಿಷಯವೂ ಇದರಲ್ಲಿದೆ.

ವಿವಿಧ ಸಂಘ–ಸಂಸ್ಥೆಗಳು ಸಹ 45 ನಿಮಿಷದ ಯೋಗ ವಿಡಿಯೊ ಚಿತ್ರೀಕರಿಸಿ, ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ವೆಬ್‌ಲಿಂಕ್ ಹಂಚಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.