ಮೈಸೂರು: ‘ಯುವಜನರು ಅತಿ ಹೆಚ್ಚು ತಂತ್ರಜ್ಞಾನ ಬಳಕೆಗೆ ದಾಸರಾಗಿದ್ದು, ಇದು ಅಪಾಯಕಾರಿ ಸಂಗತಿಯಾಗಿದೆ’ ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಎಚ್.ಬಸವನಗೌಡಪ್ಪ ಹೇಳಿದರು.
ಇಲ್ಲಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಲಿನಿಕಲ್ ಸೈಕಾಲಜಿ ವಿಭಾಗದಿಂದ ಪಿಡಿಯಾಟ್ರಿಕ್ಸ್ ಮತ್ತು ಮನೋವೈದ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ಶುಕ್ರವಾರ ಆನ್‌ಲೈನ್ ನಡವಳಿಕೆ ಮತ್ತು ವರ್ತನಾ ವ್ಯಸನಗಳ ಹಾಗೂ ಡಿಜಿಟಲ್ ಯೋಗಕ್ಷೇಮಕ್ಕೆ ಸಂಬಂಧಿಸಿದ ‘ವಿಶೇಷ ಚಿಕಿತ್ಸಾ ಕೇಂದ್ರ’ ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಬಳಕೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗಿದ್ದು, ಹುಟ್ಟಿದ ಮಗು ಅತ್ತಾಗ ಮೊಬೈಲ್ ಕೂಡುವ ಸಂಪ್ರದಾಯ ಬೆಳೆದಿದೆ. ಭಾರತದಾದ್ಯಂತ ವಿವಿಧ ಅಧ್ಯಯನಗಳು ಶೇ 13.5 ರಿಂದ ಶೇ22 ರಷ್ಟು ಹದಿಹರೆಯದವರು ಮತ್ತು ವಯಸ್ಕರು ಅಪಾಯಕಾರಿ ಮಟ್ಟದಲ್ಲಿ ಡಿಜಿಟಲ್ ಉಪಯೋಗದಲ್ಲಿ ತೊಡಗಿರುವುದು ತಿಳಿದುಬಂದಿದೆ ಎಂದರು.
ಜೆಎಸ್‌ಎಸ್ ಆಸ್ಪತ್ರೆಯ ನಿರ್ದೇಶಕರಾದ ಸಿ.ಪಿ.ಮಧು ಮಾತನಾಡಿ, ‘ಡಿಜಿಟಲ್ ಯುಗದಲ್ಲಿ ಮೊಬೈಲ್, ಇಂಟರ್ನೆಟ್, ತಂತ್ರಜ್ಞಾನ, ಗೇಮಿಂಗ್, ಅಶ್ಲೀಲತೆ ಮತ್ತು ಅತಿಯಾದ ಆಹಾರ ಸೇವನೆ ವ್ಯಸನಗಳು ಹೆಚ್ಚುತ್ತಿವೆ. ಇಂತಹ ವ್ಯಸನಗಳಿಗೆ ಚಿಕಿತ್ಸೆ ನೀಡಲು ಕೇಂದ್ರ ಸಹಕಾರಿಯಾಗಲಿದೆ’ ಎಂದರು.
ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ವಿಜಯ ರಾಮನ್, ಜೆಎಸ್‌ಎಸ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಕಿಶೋರ್, ಮಕ್ಕಳ ವಿಭಾಗದ ಮುಖ್ಯಸ್ಥ ಪ್ರಶಾಂತ್, ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥ ಹೃತ್ವಿಕ್ ಕಶ್ಯಪ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.