
ಕೆ.ಆರ್. ನಗರ: ಜೀವನದಲ್ಲಿ ದೊಡ್ಡಮಟ್ಟದ ಗುರಿ ಸಾಧಿಸಲು ಯುವಕರು ಪರಿಶ್ರಮಪಡಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲ್ಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಕವಿರತ್ನ ಕಾಳಿದಾಸ ಯುವಕರ ಸಂಘ, ಕನಕ ಉತ್ಸವ ಸಮಿತಿ ಸಹಯೋಗದಲ್ಲಿ ಭಾನುವಾರ ನಡೆದ ದಾಸಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತ್ಯುತ್ಸವ ಹಾಗೂ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರಿ ತಲುಪಬೇಕಾದರೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ, ಅವೆಲ್ಲವನ್ನು ಮೆಟ್ಟಿ ನಿಂತಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ. ಸಾಧನೆ ಎನ್ನುವುದು ಕೇವಲ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡುವುದು ಅಷ್ಟೇ ಇಲ್ಲ, ಕೃಷಿ ಕ್ಷೇತ್ರದಲ್ಲೂ ಸಾಕಷ್ಟು ಸಾಧನೆ ಮಾಡಬಹುದಾಗಿದೆ ಎಂದರು.
ಎಂಸಿಡಿಸಿಸಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಮಾತನಾಡಿ, ಯುವಕರು ಕೇವಲ ಎಸ್ಎಸ್ಎಲ್‌ಸಿ, ಪಿಯುಸಿಗೆ ಸೀಮಿತವಾಗಬಾರದು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೊಡ್ಡ ಹುದ್ದೆ ಅಲಂಕರಿಸಬೇಕು. ಮನಸು ಮಾಡಿದರೆ ಏನು ಬೇಕಾದರು ಸಾಧಿಸಬಹುದು ಎನ್ನುವುದಕ್ಕೆ ನಮ್ಮೂರಿನವರೇ ಆದ ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ ನಮ್ಮ ಕಣ್ಣು ಮುಂದೆ ಇದ್ದಾರೆ ಎಂದರು.
ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ ಮಾತನಾಡಿ, ಯಾವುದೇ ಸಮುದಾಯ ಮುಂದುವರಿದಿದೆ ಎಂದರೆ ಅದಕ್ಕೆ ಮೂರು ಕಾರಣಗಳು ಇರುತ್ತವೆ, ಸಮುದಾಯಕ್ಕೆ ಒಬ್ಬ ರಾಜಕೀಯ ನಾಯಕ, ಮತ್ತೊಬ್ಬರು ಧಾರ್ಮಿಕ ನಾಯಕ, ಮತ್ತೊಬ್ಬರು ಸಾಂಸ್ಕೃತಿಕ ನಾಯಕನಿಂದ ಸಮುದಾಯ ಬೆಳೆಯುತ್ತದೆ. ಈ ಮೂರು ನಾಯಕರು ಇರುವ ಬಹುತೇಕ ಸಮುದಾಯಗಳು ದೊಡ್ಡ ಮಟ್ಟದಲ್ಲಿ ಬೆಳೆದಿವೆ ಎಂದರು.
ಕಲಾವಿದ ನಂದಕುಮಾರ್ ಮಾತನಾಡಿದರು. ಗ್ರಾ.ಪಂ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್, ಉಪಾಧ್ಯಕ್ಷೆ ರುಕ್ಮಿಣಿ ರವಿ, ಮುಖಂಡರಾದ ಜವರೇಗೌಡ, ಚೀರ್ನಹಳ್ಳಿ ಶಿವರಾಜು, ಮಲ್ಲಿಕಾರ್ಜುನ, ಲೋಕೇಶ್, ಪ್ರಕಾಶ್, ಕಾಳೇಗೌಡ, ದೊಡ್ಡಸ್ವಾಮಿ, ರಾಮೇಗೌಡ, ಈರೇಗೌಡ, ಗುರುರಾಜ್, ಅರವಿಂದ, ಸಂಘದ ಗೌರವ ಅಧ್ಯಕ್ಷ ಕೆ.ಎಲ್.ರಂಗಸ್ವಾಮಿ, ಅಧ್ಯಕ್ಷ ಜಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಶ್ರೀನಿವಾಸ್, ಖಜಾಂಚಿ ಮಹದೇವ್, ಸಂಘಟನಾ ಕಾರ್ಯದರ್ಶಿ ಕೆ.ಬಿ.ರಮೇಶ್, ಸಹ ಕಾರ್ಯದರ್ಶಿ ಕೆ.ಮಹೇಶ್, ನಿರ್ದೇಶಕರಾದ ಪಾಲಾಕ್ಷ, ಕೆ.ಎಸ್.ಸತೀಶ್, ಕೆ.ಎಚ್.ನಟರಾಜು, ಕೆ.ಭಾಸ್ಕರ್, ಕೆ.ಎಲ್.ದಿನೇಶ್, ಪ್ರಕಾಶ್ ಇದ್ದರು.
ಇದಕ್ಕೂ ಮುನ್ನ ದಾಸಶ್ರೇಷ್ಠ ಭಕ್ತ ಕನಕದಾಸರ ಪ್ರತಿಮೆ ಅನಾವರಣ ಮಾಡಲಾಯಿತು, ಅರಿವು ಕೇಂದ್ರ (ಡಿಜಿಟಲ್ ಗ್ರಂಥಾಲಯ) ಮತ್ತು ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.