ADVERTISEMENT

ಅಹೋರಾತ್ರಿ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:40 IST
Last Updated 18 ಫೆಬ್ರುವರಿ 2011, 9:40 IST

ರಾಯಚೂರು: ಕಳೆದ ಜನವರಿ ತಿಂಗಳಲ್ಲಿಯೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದರೂ ಸಹ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಲೋಪಗಳಿವೆ. ಕೂಡಲೇ ಮರು ಪರಿಷ್ಕರಣೆ ಮಾಡಬೇಕು. ಮುಖ್ಯವಾಗಿ ಈಗ ನಗರಸಭೆಯ 14ನೇ ವಾರ್ಡ್‌ಗೆ ಉಪಚುನಾವಣೆ ನಡೆಯುತ್ತಿದ್ದು, ಮತದಾರರ ಪಟ್ಟಿ ಮರುಪರಿಷ್ಕರಿಸಿದ ಬಳಿಕವೇ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ನಗರದ ಸಿದ್ಧಾಥ ಸೇವಾ ಸಮಿತಿ ಗುರುವಾರ ಜಿಲ್ಲಾಧಿ ಕಾರಿಗಳ ಕಚೇರಿಯ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿತು.

ಮತದಾರರ ಪಟ್ಟಿ ಪರಿಷ್ಕರಣೆಗೊಂಡಿದ್ದರೂ ಸಹ ಸಾಕಷ್ಟು ದೋಷಯುಕ್ತವಾಗಿದೆ. ಉಪ ಚುನಾವಣೆ ನಡೆಯುತ್ತಿರುವ 14ನೇ ವಾರ್ಡ್‌ನ ಮತದಾರರ ಪಟ್ಟಿಯಲ್ಲಿ ಖೊಟ್ಟಿ ಮತದಾರರ ಹೆಸರೇ ತುಂಬಿವೆ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯ ಸಂಬಂಧಿಕರ ಹೆಸರುಗಳೂ ಇದರಲ್ಲಿ ಸೇರ್ಪಡೆಗೊಂಡಿವೆ. ಈ ಲೋಪ ಸರಿಪಡಿಸಿ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಈ ವಾರ್ಡ್‌ನಲ್ಲಿ 5 ಮತಗಟ್ಟೆಗಳಿದ್ದು, ಒಬ್ಬ ಮತದಾರ ಒಂದು ಮತಗಟ್ಟೆಯಿಂದ ಮತ್ತೊಂದಿ ಮತ ಗಟ್ಟೆಯಲ್ಲಿ ಮತ ಹಾಕುವ ಅವಕಾಶ ಪಡೆದಿದ್ದಾನೆ. ಒಂದು ಮತಕ್ಕಿಂತ ಹೆಚ್ಚು ಬಾರಿ ಮತ ಹಾಕುವ ಅವಕಾಶ ಪಡೆದ ವ್ಯಕ್ತಿ ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಟ್ಟಿ ಪರಿಷ್ಕರಣೆ ಮಾಡದೇ ಇದ್ದಲ್ಲಿ ಅಹೋರಾತ್ರಿ ಮುಂದುವರಿಸಲಾಗುವುದು ಎಂದು ಧರಣಿ ನಿರತರು ಹೇಳಿದರು. ಸಮಿತಿ ಜಿಲ್ಲಾಧ್ಯಕ್ಷ ಆರ್ ಚಂದ್ರಶೇಖರ್, ನರಸಿಂಹಲು, ಶಂಶಾಲಪ್ಪ, ನಾಗೇಶ್ವರ, ಶಾಮಸುಂದರ, ಆರ್ ಉಮೇಶ, ರಾಜೇಶ, ಪ್ರಕಾಶ, ವಿರೇಶಗೌಡ, ವಿರೇಶ, ವಿಜಯಕುಮಾರ ಧರಣಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.