ADVERTISEMENT

ಆರೋಗ್ಯ ಸಚಿವರು ಕರುಣೆ ತೋರುವರೇ..?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 6:50 IST
Last Updated 22 ಫೆಬ್ರುವರಿ 2011, 6:50 IST

ಲಿಂಗಸುಗೂರ:  ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ ಮೌಲಾಬೇಗ್ ಮಿರ್ಜಾ ಕಳೆದ 18 ತಿಂಗಳ ಹಿಂದೆ ಅಪಘಾತ ವೊಂದರಲ್ಲಿ ತೀವ್ರ ಗಾಯಗೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ. ಆರೋಗ್ಯ ಇಲಾಖೆ ಸಹಾಯಕ್ಕೆ ಬಾರದೆ ಹೋಗಿದ್ದರಿಂದ ಚಾಲಕ ಹಣಕಾಸಿನ ಸಂಕಷ್ಟಕ್ಕೆ ಸಿಲುಕಿ ಕಣ್ಣೀರಿಡುವಂತಾಗಿದೆ. ಆರೋಗ್ಯ ಸಚಿವರೆ ಉಸ್ತುವಾರಿ ವಹಿಸಿರುವ ಜಿಲ್ಲೆಯ ಆರೋಗ್ಯ ಇಲಾಖೆ ನೌಕರನ ಈ ಚಿಂತಾಜನಕ ಬದುಕಿಗೆ ಸ್ಪಂದಿಸುವವರ್ಯಾರು? ಎಂಬುದು ಕುಟುಂಬದವರಿಗೆ ಪ್ರಶ್ನೆಯಾಗಿ ಕಾಡುತ್ತಿದೆ.

ಬಾಗಲಕೋಟೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಆ್ಯಂಬುಲೆನ್ಸ್‌ದಲ್ಲಿ ರೋಗಿಯನ್ನು ಚಿಕಿತ್ಸೆಗಾಗಿ ಬಿಟ್ಟು ಮರಳಿ ಬರುವಾಗ 2009ರ ಜುಲೈ 8ರಂದು ಬಾಗಲಕೋಟೆ ಜಿಲ್ಲೆ ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೌಲಾಬೇಗ್ ಮಿರ್ಜಾ (56) ಸ್ಪೆನಲ್ ಕಾರ್ಡ್ ತೊಂದರೆಯಿಂದ ಅಂಗಾಂಗಗಳು ದೌರ್ಬಲ್ಯಕ್ಕೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ಹಣ ಖರ್ಚು ಮಾಡಿದರೂ ಗುಣಮುಖವಾಗದ ಚಾಲಕ ಅಸಹಾಯಕ ಸ್ಥಿತಿಯಲ್ಲಿ ಹಾಸಿಗೆಯಲ್ಲಿ ನರಳುತ್ತಿದ್ದಾರೆ.

ಕಳೆದ 20 ವರ್ಷಗಳಿಂದ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಎರವಲು ಸೇವೆಯಲ್ಲಿ ಚಾಲಕನೆಂದು ಕೆಲಸ ಮಾಡುವ ಮೂಲಕ ಉತ್ತಮ ನಡತೆ, ಪ್ರೀತಿ-ವಿಶ್ವಾಸಗಳಿಂದ ನಾಗರಿಕರ ಪ್ರೀತಿಗೆ ಪಾತ್ರರಾಗಿ ಮೌಲಾಬೇಗ್ ಮಿರ್ಜಾ ಬೇಗ್ ಭಯ್ಯಾ ಎಂದೆ ಗುರ್ತಿಸಿಕೊಂಡಿದ್ದಾರೆ. 20 ವರ್ಷಗಳ ಅವಧಿಯಲ್ಲಿ ಸಹಸ್ರಾರು ರೋಗಿಗಳ ನೆರವಿಗೆ ಮುಂದಾಗಿದ್ದ ಬೇಗ್‌ಭಯ್ಯಾನ ಅಸಹಾಯಕ ಸ್ಥಿತಿಯಲ್ಲಿ ಆರೋಗ್ಯ ಇಲಾಖೆ ಯಾವೊಬ್ಬ ಅಧಿಕಾರಿಗಳು ಸಹಾಯಕ್ಕೆ ಮುಂದಾಗದಿರುವುದನ್ನು ಕಂಡು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಘಾತದ ನಂತರದ 18 ತಿಂಗಳ ಅವಧಿಯಲ್ಲಿ ಸ್ಥಳೀಯ ವೈದ್ಯರು ಮಾತ್ರ ಕೇವಲ ಮೂರು ತಿಂಗಳ ವೇತನ ಮಂಜೂರ ಮಾಡಿದ್ದಾರೆ. ಉಳಿದ 15 ತಿಂಗಳದ ವೇತನಕ್ಕೆ ರಜೆ ಮಂಜೂರಾತಿ ಕೋರಿ ಬರೆದುಕೊಂಡಿದ್ದರು ಕೂಡ ಇಂದಿಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕರ್ತವ್ಯದಲ್ಲಿ ಅಪಘಾತಕ್ಕೊಳಗಾಗಿರುವ ಪತಿರಾಯ ಸೇವಾ ಅವಧಿಯಲ್ಲಿ ಒಂದು ದಿನವು ರಜೆ ಹಾಕಿಲ್ಲ. ಕರ್ತವ್ಯವೆ ದೇವರು ಎಂದು ಕೆಲಸ ಮಾಡಿದ ತಮ್ಮ ಪತಿಯ ಇಂತಹ ಸ್ಥಿತಿಯಲ್ಲಿ ರಜೆ ಮಂಜೂರ ಮಾಡದೆ ಹೋಗಿ ರುವ ಬಗ್ಗೆ ಪತ್ನಿ ಸಾಬೇರಾಬೇಗಂ ಹಿಡಿಶಾಪ ಹಾಕುತ್ತಿದ್ದಾರೆ.

ಪ್ರತಿ ಚಿಕಿತ್ಸೆಗೆಂದು ಅಂದಾಜು ರೂ. 2ಲಕ್ಷ ಹಣ ಖರ್ಚು ಮಾಡಲಾಗಿದೆ. ಎಲ್ಲಾ ದಾಖಲಾತಿ ಸಮೇತ ವೈದ್ಯಕೀಯ ವೆಚ್ಚ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದರೆ ಕೇವಲ ರೂ. 40ಸಾವಿರ ಮಾತ್ರ ಮಂಜೂರು ಮಾಡಿದ್ದಾರೆ. ತುರ್ತು ಸಂದರ್ಭದಲ್ಲಿ ಖಾಸಗಿಯಾಗಿ ಸಾಲ ಪಡೆದು ಲಕ್ಷಾಂತರ ಹಣ ಖರ್ಚು ಮಾಡಿದ್ದೇವೆ. ಅಧಿಕಾರಿಗಳು ರಜೆ ಮಂಜೂರ ಮಾಡದೆ ಹೋಗಿದ್ದರಿಂದ ಚಿಕಿತ್ಸೆ ಕೊಡಿಸಲು ಆಗುತ್ತಿಲ್ಲ, ಚಿಕಿತ್ಸೆ ಕೊಡಿಸುವುದು ಒಂದೆಡೆಯಾದರೆ, ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ ಎಂದು ಮಗ ಸಲೀಮ್ ಸಂಕಷ್ಟ ಹೇಳಿಕೊಳ್ಳುವಾಗ ಕಣ್ಣಂಚುಗಳು ತೇವಗೊಂಡಿದ್ದವು.

ಇಂತಹ ಸಂದರ್ಭದಲ್ಲಿ ಕಾನೂನಾತ್ಮಕವಾಗಿ ಕರ್ನಾಟಕ ನಾಗರಿಕ ಸೇವಾ ನಿಯಮ 136ರಡಿ 186 ದಿನಗಳ ವಿಶೇಷ ರಜೆ ಮಂಜೂರ ಮಾಡಬಹುದಾಗಿದೆ. ಅಲ್ಲದೆ, ತಮ್ಮ ಸೇವಾ ಅವಧಿಯಲ್ಲಿ ಬಾಕಿ ಉಳಿದಿರುವ ಗಳಿಕೆ ರಜೆ 240, ಪರಿವರ್ತಿತ ರಜೆ 144 ಪಡೆದುಕೊಳ್ಳಲು ಅವಕಾಶವಿದೆ. ಆದಾಗ್ಯೂ ಕೂಡ ಮೇಲಾಧಿಕಾರಿಗಳು ರಜೆ ಮಂಜೂರಾತಿಗೆ ಮುಂದಾಗುತ್ತಿಲ್ಲ. ಕಾನೂನು ಒಂದಡೆ ಇರಲಿ ಮಾನವೀಯತೆಯನ್ನು ತೋರದೆ ಹೋಗಿದ್ದರಿಂದ ಕುಟುಂಬ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಮೌಲಾಬೇಗ್ ‘ಪ್ರಜಾವಾಣಿ’ ಮುಂದೆ ಕಣ್ಣೀರಿಡುತ್ತ ಅಳಲು ತೋಡಿಕೊಂಡರು.

ಸಾರ್ವಜನಿಕರ ಆರೋಗ್ಯಕ್ಕೆ ಕೋಟ್ಯಾಂತರ ಹಣ ಖರ್ಚು ಮಾಡುವ ಆರೋಗ್ಯ ಇಲಾಖೆ ತನ್ನ ನೌಕರನ ಸಹಾಯಕ್ಕೆ ಮುಂದಾಗ ದಿರುವುದು ಶೋಚನೀಯ. ಕಳೆದ 18 ತಿಂಗಳಿಂದ ನರಗಳ ದೌರ್ಬಲ್ಯದಿಂದ ಹಾಸಿಗೆ ಹಿಡಿದು ನರಕಯಾತನೆ ಅನುಭವಿಸುತ್ತಿರುವ ಬೇಗ್‌ಭಯ್ಯಾನ ಕುಟುಂಬದ ನೆರವಿಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಸಹಾಯ ಹಸ್ತ ಚಾಚಬಲ್ಲರೆ ಎಂಬ ಆಶಾ ಭಾವನೆಗಳನ್ನು ಪತ್ನಿ, 3 ಪುತ್ರಿಯರು, ಓರ್ವ ಪುತ್ರ ಸಹದ್ಯೋಗಿಗಳು ಎದುರು ನೋಡುತ್ತಿದ್ದಾರೆ.

ಪ್ರಾಮಾಣಿಕ ಕರ್ತವ್ಯಕ್ಕೆ ಹೆಸರಾದ ಬೇಗ್ ಭಯ್ಯಾನ ಸಂಕಷ್ಟ ಕುಟುಂಬಕ್ಕೆ ಮಾನವೀಯ ಹೃದಯವಂತ ಮನಸ್ಸುಗಳು ಸಹಾಯ ಮಾಡುವುದಾದರೆ ಈ ಮೊಬೈಲ್ ಸಂಖ್ಯೆ 9482171101 ಗೆ ಸಂಪರ್ಕಿಸುವಂತೆ ಕುಟುಂಬ ವರ್ಗ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.