ADVERTISEMENT

ಕ್ರಮಕ್ಕೆ ಆಗ್ರಹಿಸಿ ಆಹೋರಾತ್ರಿ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:40 IST
Last Updated 5 ಅಕ್ಟೋಬರ್ 2012, 5:40 IST

ಮಾನ್ವಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿನ ನಿವೇಶನಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ಹಾಗೂ ನಿಯಮ ಉಲ್ಲಂಘನೆ ವಿರೋಧಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಆಹೋರಾತ್ರಿ ಸತ್ಯಾಗ್ರಹ ಆರಂಭಿಸಿದರು.

ಎಪಿಎಂಸಿ ಪ್ರಾಂಗಣದಲ್ಲಿರುವ ನಿವೇಶನಗಳ ಬೆಲೆ ನಿಗದಿ ಮಾಡುವಲ್ಲಿ ಭ್ರಷ್ಟಾಚಾರ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಎಪಿಎಂಸಿ ನಿಯಮಗಳಂತೆ ನಿವೇಶನಗಳಿಗೆ ದರ ನಿಗದಿ ಮಾಡಿ ಹಂಚಿಕೆ ಮಾಡಬೇಕು. ಗೋದಾಮುಗಳನ್ನು ಅಕ್ರಮವಾಗಿ ಬಾಡಿಗೆ ನೀಡಿದ ವರ್ತಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬಾಡಿಗೆ ನೀಡುವುದನ್ನು ತಡೆಗಟ್ಟಬೇಕು.

ಎಪಿಎಂಸಿ ಕಟ್ಟಡ ನಕ್ಷೆಯನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿರುವ ವರ್ತಕರ ಲೈಸನ್ಸ್ ರದ್ದುಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅಕ್ರಮವಾಗಿ ಹಂಚಿಕೆಯಾದ ನಿವೇಶನ ಮತ್ತು ಗೋದಾಮುಗಳನ್ನು ವಾಪಸ್‌ಪಡೆಯಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಶಿರಸ್ತೇದಾರ ಹನುಮಂತಪ್ಪ ಹಾಗೂ ಎಪಿಎಂಸಿ ಕಾರ್ಯದರ್ಶಿ ಶಿವರಾಮ್ ಸಿಂಗ್ ಧರಣಿ ಸ್ಥಳಕ್ಕೆ ಆಗಮಿಸಿ ಧರಣಿನಿರತರ ಬೇಡಿಕೆಗಳ ಕುರಿತು ಆಲಿಸಿದರು.  ಎಪಿಎಂಸಿಯಲ್ಲಿನ ಅವ್ಯವಹಾರಗಳ ಕುರಿತು ಈಗಾಗಲೇ ಹಲವು ಬಾರಿ ದೂರು ಸಲ್ಲಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಿಲ್ಲಾ ಉಪನಿರ್ದೇಶಕರು ಧರಣಿ ಸ್ಥಳಕ್ಕೆ ಆಗಮಿಸುವವರೆಗೆ ಧರಣಿ ನಿಲ್ಲಿಸುವುದಿಲ್ಲ. ಆಹೋರಾತ್ರಿ ಧರಣಿ, ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಸಿದರು.

ಜೈ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಪ್ರಭುರಾಜ ಕೊಡ್ಲಿ, ಜಿಲ್ಲಾಧ್ಯಕ್ಷ ಗಂಗಾಧರ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಜಾನೇಕಲ್, ತಾಲ್ಲೂಕು ಅಧ್ಯಕ್ಷ ಹುಸೇನಪ್ಪ ಭಂಡಾರಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಶಾಂತಪ್ಪ ಕಪಗಲ್, ಹುಸೇನಪ್ಪ ಆಲ್ದಾಳ, ಅಮರೇಶ ಗಿರಿಜಾಲಿ ಸಿಂಧನೂರು, ಅಶೋಕ ಮುರಾರಿ ಲಿಂಗಸುಗೂರ, ಅಮರೇಶ ಆಲ್ದಾಳ, ಬಸವರಾಜ ಹಿರೇದಿನ್ನಿ, ವೆಂಕಟೇಶ ಚಾಗಬಾವಿ, ಜಂಬಲದಿನ್ನಿ ಶರಣಪ್ಪ, ರಮೇಶ ಗವಿಗಟ್ಟು  ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.