ADVERTISEMENT

ಜಿಲ್ಲೆಯ 125 ಅಕ್ಕಿ ಗಿರಣಿಗಳ ಬಂದ್

ಸರ್ಕಾರದ ಲೆವಿ ಅಕ್ಕಿ ಸಂಗ್ರಹ ನೀತಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 5:40 IST
Last Updated 17 ಡಿಸೆಂಬರ್ 2013, 5:40 IST

ರಾಯಚೂರು: ರಾಜ್ಯ ಸರ್ಕಾರದ ‘ಲೆವಿ ಅಕ್ಕಿ’ ಸಂಗ್ರಹ ನೀತಿ ವಿರೋಧಿಸಿ ಜಿಲ್ಲೆ­ಯ 125 ಅಕ್ಕಿ ಗಿರಣಿ ಮಾಲೀಕರು ಸೋಮವಾರದಿಂದ ಅಕ್ಕಿ ಗಿರಣಿ ಬಂದ್ ಮಾಡಿ ಅನಿರ್ದಿಷ್ಟಾವಧಿ ಪ್ರತಿಭಟನೆ­ಯನ್ನು ಆರಂಭಿಸಿದರು.

ನಗರದ ಸುತ್ತಮುತ್ತಲೂ 70–80ಕ್ಕೂ ಹೆಚ್ಚು ಅಕ್ಕಿ ಗಿರಣಿಗಳಿದ್ದು, ಬೆಳಿಗ್ಗೆ­ಯಿಂದಲೇ ಬಾಗಿಲು ತೆರೆಯ­ಲಿಲ್ಲ. ಎಂದಿನಂತೆ ಕೆಲಸಕ್ಕೆ ಬರುತ್ತಿದ್ದ ಕಾರ್ಮಿಕರು ಕಾಣಲಿಲ್ಲ.

ಎಲ್ಲ ಗಿರಣಿಗಳ ಮುಖ್ಯ ದ್ವಾರಗಳಿಗೆ ‘ಸರ್ಕಾರದ ಲೆವಿ ಅಕ್ಕಿ ಸಂಗ್ರಹ ನೀತಿ ವಿರೋಧಿಸಿ ಅಕ್ಕಿ ಗಿರಣಿ ಮಾಲೀಕರ ಸಂಘ ಅನಿರ್ದಿಷ್ಟ ಪ್ರತಿಭಟನೆ ನಡೆಸು­ತ್ತಿದ್ದು, ಅಕ್ಕಿ ಗಿರಣಿ ಬಂದ್ ಮಾಡ­ಲಾಗಿದೆ’ ಎಂಬ ಸೂಚನೆ ಹೊಂದಿದ ಫ್ಲೆಕ್ಸ್ ಬ್ಯಾನರ್‌ಗಳನ್ನು ತೂಗು ಹಾಕ­ಲಾಗಿತ್ತು. ಆಪರೇಟರ್‌­ಗಳು ಅಕ್ಕಿ ಗಿರಣಿ ಯಂತ್ರಗಳ ದುರಸ್ತಿಯಲ್ಲಿ ತೊಡಗಿ­ಕೊಂಡಿದ್ದರು.

ಗಿರಣಿ ಬಾಗಿಲು ತಟ್ಟಿದ ಭತ್ತದ ಲೋಡ್ : ರಾಜ್ಯ ವ್ಯಾಪಿ ಅಕ್ಕಿ ಗಿರಣಿಗಳು ಆರಂಭಿಸಿರುವ ಅನಿರ್ದಿಷ್ಟಾ­ವಧಿ ಬಂದ್ ವಿಷಯ ತಿಳಿದಯವರು ಭತ್ತ ತುಂಬಿದ್ದ ಲಾರಿಗಳನ್ನು ತಂದು ಅಕ್ಕಿ ಗಿರಣಿ ಬಾಗಿಲು ತಟ್ಟುತ್ತಿದ್ದುದು ಕಂಡು ಬಂದಿತು. ಕೆಲ ಅಕ್ಕಿ ಗಿರಣಿಗಳು ಮುಖ್ಯ ಗೇಟ್ ತೆರೆದು ಭತ್ತದ  ಲೋಡ್‌ ಹಾಗೆಯೇ ಗಿರಣಿ ಆವರಣದಲ್ಲಿ ನಿಲ್ಲಿಸಲು ಅವಕಾಶ ಕೊಟ್ಟಿದ್ದವು.

ವಿಶ್ರಾಂತಿಯಲ್ಲಿ ಕಾರ್ಮಿಕರು: ದಿನಪೂರ್ತಿ ನೂರಾರು ಭತ್ತದ ಮೂಟೆ ಹೊತ್ತು ಸುಸ್ತಾಗುತ್ತಿದ್ದ ಅಕ್ಕಿ ಗಿರಣಿ ಕಾರ್ಮಿಕರು ಗಿರಣಿ ಆವರಣದಲ್ಲಿನ ಕಟ್ಟಡ, ಭತ್ತ ಸಂಗ್ರಹಣೆ ಗೋದಾಮು, ಮರದ ಕೆಳಗೆ ವಿಶ್ರಾಂತಿಗೆ ಮೈಯೊಡ್ಡಿದ್ದರು. ರಜೆ ಹುಮ್ಮಸ್ಸಿನಲ್ಲಿ ಹರಟೆ ಹೊಡೆಯುತ್ತಿದ್ದರು.

‘ನಾವು ಬಿಹಾರ ಮೂಲದ ಕಾರ್ಮಿ­ಕರಿದ್ದು, ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಅಕ್ಕಿ ಗಿರಣಿ ಬಂದ್ ಮಾಡಲಾಗಿದೆ. ಆರಾಮವಾಗಿ ಕುಳಿತಿದ್ದೇವೆ. ಮತ್ತೆ ಯಾವಾಗ ಶುರು ಆಗುತ್ತದೋ ಆಗ ಕೆಲಸ ಮಾಡುತ್ತೇವೆ. ಸದ್ಯ ಗಿರಣಿ ಮಾಲೀಕರು ಎಂದಿನಂತೆ ಎರಡು ಹೊತ್ತು ಊಟ ಕೊಡುತ್ತಾರೆ. ಸಂಬಳ ಕೊಡುವ ಭರವಸೆ ಇದೆ. ಗಿರಣಿ ಚಾಲೂ ಇದ್ದಾಗ ನಿತ್ಯ ಕನಿಷ್ಠ ₨ 300 ರಿಂದ 400 ಕೂಲಿ ಸಿಗುತ್ತಿತ್ತು’ ಎಂದು ಕಾರ್ಮಿಕರು ಹೇಳಿದರು.

ಮಾಲೀಕರ ಸಂಘಟನೆ ಹೇಳಿಕೆ: ‘ರಾಯಚೂರು ಜಿಲ್ಲೆಯಲ್ಲಿ 125 ಅಕ್ಕಿ ಗಿರಣಿ ಪೂರ್ಣ ಬಂದ್ ಆಗಿವೆ. ರಾಜ್ಯ ಸರ್ಕಾರ ನಮ್ಮ ಸಮಸ್ಯೆ ಅರ್ಥ ಮಾಡಿಕೊಂಡು ಬಗೆಹರಿಸಲು ಮುಂದಾಗುವವರೆಗೂ ಬಂದ್ ಮುಂದುವರಿಯಲಿದೆ. ಸೋಮವಾರ ಬಂದ್ ಮಾಡಿದ್ದರ ಬಗ್ಗೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿ ಮತ್ತೊಮ್ಮೆ ಸಮಸ್ಯೆಯನ್ನು ವಿವರವಾಗಿ ತಿಳಿಸಲಾಗಿದೆ’ ಎಂದು ರಾಯಚೂರು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎ. ಪಾಪಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಮಾರಂ ತಿಪ್ಪಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಕ್ಕಿ ಗಿರಣಿ ಮಾಲೀಕರ ಸಂಘದ ಅನಿರ್ದಿಷ್ಟಾವಧಿ ಬಂದ್‌ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.